ಅಮರನಾಥ ಯಾತ್ರಿಕರಿಗೆ ಕಾಶ್ಮೀರಿ ಮುಸ್ಲಿಮರಿಂದ ಅದ್ದೂರಿ ಸ್ವಾಗತ
PC : PTI
ಶ್ರೀನಗರ: ವ್ಯಾಪಕ ಭದ್ರತೆಯ ಮಧ್ಯೆ ಗುರುವಾರ ಅಮರನಾಥ ಯಾತ್ರೆ ಆರಂಭವಾಗಿದೆ. ಕಾಶ್ಮೀರದ ಜನರು ಮಾರ್ಗದುದ್ದಕ್ಕೂ ಯಾತ್ರಿಕರನ್ನು ಸ್ವಾಗತಿಸುವ ಮೂಲಕ ಕೋಮು ಸಾಮರಸ್ಯವನ್ನು ಮೆರೆದಿದ್ದಾರೆ ಮತ್ತು ಪ್ರಾಚೀನ ಸಂಪ್ರದಾಯವನ್ನು ಮುಂದುವರಿಸಿದ್ದಾರೆ.
ಎ.22ರ ಪಹಲ್ಗಾಮ್ ದಾಳಿ ಹಿನ್ನೆಲೆಯಲ್ಲಿ ಈ ಬಾರಿ ಅಮರನಾಥ ಯಾತ್ರೆಗೆ ಹೆಚ್ಚಿನ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ಜು.3ರಿಂದ ಆರಂಭವಾಗಿರುವ ಯಾತ್ರೆ 38 ದಿನಗಳ ಕಾಲ ಮುಂದುವರಿಯಲಿದೆ. ದಕ್ಷಿಣ ಕಾಶ್ಮೀರದ ಅನಂತನಾಗ್‌ನ ಪಹಲ್ಲಾಮ್‌ನಲ್ಲಿರುವ ನುನ್ವಾನ್ ಮೂಲ ಶಿಬಿರ ಮತ್ತು ಮಧ್ಯ ಕಾಶ್ಮೀರದ ಗಂಡರ್‌ಬಾಲ್‌ನ ಸೋನಾಮಾಗ್ ಪ್ರದೇಶದ ಬಾಲ್ಟಾಲ್ ಶಿಬಿರದಿಂದ ಬೆಳಗಿನ ಜಾವದಲ್ಲಿ ಹೊರಟ ಯಾತ್ರಿಕರನ್ನು ಸಾಲುಗಟ್ಟಿ ನಿಂತು ಕಾಶ್ಮೀರಿ ಮುಸ್ಲಿಮರು ಸ್ವಾಗತಿಸಿದ್ದಾರೆ.
ಶ್ರೀನಗರ-ಜಮ್ಮು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಖಾಝಿಗುಂಡ್ ಬಳಿಯ ನೈವುಗ್ ಸುರಂಗದಲ್ಲಿ ವಿದ್ಯಾರ್ಥಿಗಳು, ಯುವಕರನ್ನೊಳಗೊಂಡ ಸ್ಥಳೀಯ ಸ್ವಯಂಸೇವಕರ ಗುಂಪು ಯಾತ್ರಿಕರಿಗೆ ಕುಡಿಯುವ ನೀರು, ತಿಂಡಿ ವ್ಯವಸ್ಥೆಯನ್ನು ಮಾಡಿದ್ದರು. ಯಾತ್ರಿಗಳನ್ನು ಹೃತ್ಪೂರ್ವಕವಾಗಿ ಸ್ವಾಗತಿಸಿದರು.
ಮಾರ್ಗದುದ್ದಕ್ಕೂ, ಗ್ರಾಮಸ್ಥರು ಯಾತ್ರಿಕರಿಗೆ ಹೂವುಗಳನ್ನು ನೀಡಿದರು. ʼಇಝ್ಭಂಧ್ʼ ಅರ್ಪಿಸಿದರು. ಕೆಲವರು ಒಣಗಿದ ಹಣ್ಣುಗಳು ಮತ್ತು ಕಾಶ್ಮೀರದ ಪ್ರಸಿದ್ಧ ಕೇಸರಿ ಮಿಶ್ರಿತ ಚಹಾವನ್ನು ನೀಡಿದರು.
"ಇದು ನಮ್ಮ ಸಂಪ್ರದಾಯ. ನಾವು ಅವರನ್ನು ಹೊರಗಿನವರಾಗಿ ನೋಡುವುದಿಲ್ಲ, ನಮ್ಮ ಅತಿಥಿಗಳಾಗಿ ನೋಡುತ್ತೇವೆ. ಅವರು ಇಲ್ಲಿಗೆ ಭಕ್ತಿ ಮತ್ತು ನಂಬಿಕೆಯೊಂದಿಗೆ ಬರುತ್ತಾರೆ. ನಾವು ಅವರನ್ನು ಸ್ವಾಗತಿಸುತ್ತೇವೆʼ ಎಂದು ಅನಂತನಾಗ್ ನಿವಾಸಿ ಗುಲಾಮ್ ಅಹ್ಮದ್ ಹೇಳಿದರು.
ʼಇದು ಒಂದು ಸುಂದರ ಐಕ್ಯತೆಯ ಕ್ಷಣ. ಇಲ್ಲಿಗೆ ಬರುವ ಭಕ್ತರು ಸುರಕ್ಷಿತವಾಗಿರಬೇಕೆಂದು ನಾವು ಬಯಸುತ್ತೇವೆʼ ಎಂದು ಶ್ರೀನಗರದ ಇಮ್ತಿಯಾಝ್ ಅಹ್ಮದ್ ಹೇಳಿದರು.
ʼನಾವು ಕಾಶ್ಮೀರದ ಸೌಂದರ್ಯದ ಬಗ್ಗೆ ಕೇಳಿದ್ದೆವು, ಆದರೆ ಅಲ್ಲಿನ ಜನರ ಪ್ರೀತಿಯಿಂದ ನಾವು ನಿಜವಾಗಿಯೂ ಪ್ರಭಾವಿತರಾಗಿದ್ದೇವೆ. ನಮಗೆ ದೊರೆತ ಪ್ರೀತಿ ಮತ್ತು ಕಾಳಜಿ ಅವಿಸ್ಮರಣೀಯʼ ಎಂದು ದಿಲ್ಲಿಯ ಯಾತ್ರಿಕ ನೀಲಂ ಶರ್ಮಾ ಹೇಳಿದರು.
ಕಾಶ್ಮೀರಿಗಳ ಈ ನಡೆಯು ಪಹಲ್ಗಾಮ್ ದಾಳಿ ಬಳಿಕ ಈ ಪ್ರದೇಶದ ಬಗೆಗಿನ ಜನರ ಅಪವಾದವನ್ನು ದೂರ ಮಾಡುತ್ತದೆ. ಇದು ʼಕಾಶ್ಮೀರಿಯತ್‌ನʼ ಆಳವಾಗಿ ಬೇರೂರಿರುವ ಸಂಪ್ರದಾಯಗಳನ್ನು ಒತ್ತಿಹೇಳುತ್ತದೆ. ಕಣಿವೆ ರಾಜ್ಯದ ಜನರ ಸಹಬಾಳ್ವೆ ಮತ್ತು ಸಂಸ್ಕೃತಿಯ ಬಗ್ಗೆ ಬೆಳಕು ಚೆಲ್ಲುತ್ತದೆ.