×
Ad

ಉತ್ತರಾಖಂಡ: ಶಾಲು ಮಾರಾಟ ಮಾಡುತ್ತಿದ್ದ ಕಾಶ್ಮೀರಿಗಳ ಮೇಲೆ ಸಂಘ ಪರಿವಾರ ಕಾರ್ಯಕರ್ತರಿಂದ ಹಲ್ಲೆ

Update: 2025-04-30 11:37 IST

Screengrab:X/@HateDetectors

ಡೆಹ್ರಾಡೂನ್: ಉತ್ತರಾಖಂಡದ ಮಸ್ಸೂರಿಯಲ್ಲಿ ಇಬ್ಬರು ಕಾಶ್ಮೀರಿ ಶಾಲು ಮಾರಾಟಗಾರರ ಮೇಲೆ ಸಂಘ ಪರಿವಾರದ ಗುಂಪೊಂದು ಹಲ್ಲೆ ಮಾಡಿ, ಅಲ್ಲಿಂದ ತೆರಳುವಂತೆ ಬೆದರಿಸುತ್ತಿರುವ ವಿಡಿಯೋವೊಂದು ಮಂಗಳವಾರ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ವೀಡಿಯೊದಲ್ಲಿ, ಗಡ್ಡಧಾರಿ ವ್ಯಕ್ತಿಯ ನೇತೃತ್ವದ ಮೂವರು ವ್ಯಕ್ತಿಗಳಿದ್ದ ಸಂಘ ಪರಿವಾರದ ಗುಂಪು ಕಾಶ್ಮೀರಿ ಶಾಲು ಮಾರಾಟಗಾರನ್ನು ನಿಂದಿಸಿ ಹಲ್ಲೆ ನಡೆಸಿದ್ದು, ಅವರನ್ನು ಅಲ್ಲಿಂದ ತೆರಳುವಂತೆ ತಾಕೀತು ಮಾಡಿದ್ದಾರೆ. ಅವರಲ್ಲಿ ಒಬ್ಬರು ಜಮ್ಮು ಮತ್ತು ಕಾಶ್ಮೀರ ನಿವಾಸಿ ಎಂದು ಗುರುತಿಸುವ ಆಧಾರ್ ಕಾರ್ಡ್ ಅನ್ನು ತೋರಿಸಿದ ನಂತರ ಅವರ ಮೇಲೆ ಮತ್ತೆ ಮತ್ತೆ ಹಲ್ಲೆ ನಡೆಸಲಾಗಿದೆ.

ಶಾಲು ಮಾರಾಟಗಾರರ ಮೇಲೆ ಹಲ್ಲೆ ಮಾಡಿದ ಮೂವರನ್ನು ಬಂಧಿಸಲಾಗಿದೆ ಎಂದು ಡಿಜಿಪಿ ದೀಪಮ್ ಸೇಥ್ ತಿಳಿಸಿದ್ದಾರೆ.

ಆರೋಪಿಗಳನ್ನು ತೆಹ್ರಿ ಗರ್ವಾಲ್‌ನ ಪೋಸ್ಟ್ ಕೆಂಪ್ಟಿ ನಿವಾಸಿ ಸೂರಜ್ ಸಿಂಗ್; ಮಸ್ಸೂರಿಯ ಹಾಥಿಪಾನ್ ನಿವಾಸಿ ಪ್ರದೀಪ್ ಸಿಂಗ್ ಮತ್ತು ಮಸ್ಸೂರಿಯ ಕಂಪನಿ ಗಾರ್ಡನ್ ನಿವಾಸಿ ಅಭಿಷೇಕ್ ಉನಿಯಾಲ್ ಎಂದು ಗುರುತಿಸಲಾಗಿದೆ.

ಜಮ್ಮು ಮತ್ತು ಕಾಶ್ಮೀರ ವಿದ್ಯಾರ್ಥಿ ಸಂಘದ ರಾಷ್ಟ್ರೀಯ ಸಂಚಾಲಕ ನಾಸಿರ್ ಖುಯೇಹಾಮಿ ಮಾತನಾಡಿ, "ಉತ್ತರಾಖಂಡದ ಮಸ್ಸೂರಿಯಿಂದ ನಮಗೆ ತೀವ್ರ ಆತಂಕಕಾರಿ ಮತ್ತು ಆಘಾತಕಾರಿ ವರದಿಗಳು ಬಂದಿವೆ, ಅಲ್ಲಿ ಇಬ್ಬರು ಕಾಶ್ಮೀರಿ ಶಾಲು ಮಾರಾಟಗಾರರ ಮೇಲೆ ಬಜರಂಗದಳದ ಸದಸ್ಯರು ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಅಲ್ಲದೆ, ಕುಪ್ವಾರಾ ಜಿಲ್ಲೆಯ ಸುಮಾರು 16 ಇತರ ಕಾಶ್ಮೀರಿ ವ್ಯಾಪಾರಿಗಳನ್ನು ಬೆದರಿಕೆ ಹಾಕಿ ಕಿರುಕುಳ ನೀಡಿದ್ದಾರೆ. ಅವರನ್ನು ಅಲ್ಲಿನ ಬಾಡಿಗೆ ಮನೆಗಳಿಂದ ಬಲವಂತವಾಗಿ ಹೊರಹಾಕಲಾಗಿದೆ", ಎಂದು ಹೇಳಿದ್ದಾರೆ.

ಕಿರುಕುಳ, ಹಲ್ಲೆಗೊಳಗಾದವರಲ್ಲಿ ಹಲವರು ವರ್ಷಗಳಿಂದ ಮಸ್ಸೂರಿಯಲ್ಲಿ ವ್ಯಾಪಾರ ಮಾಡುತ್ತಿದ್ದಾರೆ. ಶಾಲುಗಳನ್ನು ಮಾರಾಟ ಮಾಡುತ್ತಿದ್ದಾರೆ. ಸ್ಥಳೀಯ ಆರ್ಥಿಕತೆಗೆ ಅವರ ಕೊಡುಗೆಯೂ ಇದೆ. ಅಲ್ಲಿ ಅವರು ಶಾಂತಿಯುತವಾಗಿ ಬದುಕುತ್ತಿದ್ದಾರೆ ಎಂದು ಅವರು ಹೇಳಿದರು.

ಮೂವರು ಆರೋಪಿಗಳು ತಮ್ಮ ಕೃತ್ಯಗಳಿಗೆ ಕ್ಷಮೆಯಾಚಿಸಿ, ಭವಿಷ್ಯದಲ್ಲಿ ಅಂತಹ ನಡವಳಿಕೆಯನ್ನು ಪುನರಾವರ್ತಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ. ಆರೋಪಿಗಳ ವಿರುದ್ಧ ಪೊಲೀಸರು ಕಾನೂನು ಕ್ರಮಕ್ಕೆ ಚಾಲನೆ ನೀಡಿದ್ದಾರೆ ಎನ್ನಲಾಗಿದೆ.

ಘಟನೆಯ ನಂತರ ಸುಮಾರು 16 ಕಾಶ್ಮೀರಿ ಶಾಲು ಮಾರಾಟಗಾರರು ಮಸ್ಸೂರಿ ತೊರೆದು ಈಗ ಕಾಶ್ಮೀರ ಕಣಿವೆಗೆ ಮರಳಿದ್ದಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News