×
Ad

ʼಕೌನ್ ಬನೇಗಾ ಕರೋಡ್‌ಪತಿʼ ವಿಶೇಷ ಸಂಚಿಕೆಯಲ್ಲಿ ಕರ್ನಲ್ ಸೋಫಿಯಾ ಖುರೇಷಿ, ವ್ಯೋಮಿಕಾ ಸಿಂಗ್ : ಪ್ರೋಮೊ ವೈರಲ್ ಬೆನ್ನಲ್ಲೇ ಭುಗಿಲೆದ್ದ ಅಸಮಾಧಾನ

ರಾಜಕೀಯ ಲಾಭಕ್ಕಾಗಿ ಸೇನಾಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂದ ಜನರು

Update: 2025-08-13 13:54 IST

Photo credit: indiatoday.in

ಹೊಸದಿಲ್ಲಿ : ಕೌನ್ ಬನೇಗಾ ಕರೋಡ್‌ಪತಿ ವಿಶೇಷ ಸಂಚಿಕೆಯಲ್ಲಿ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಕಮಾಂಡರ್ ಪ್ರೇರಣಾ ದಿಯೋಸ್ಥಾಲಿ ಭಾಗವಹಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಪ್ರಚಾರ ಮತ್ತು ರಾಜಕೀಯ ಲಾಭಕ್ಕಾಗಿ ಸೇನಾಧಿಕಾರಿಗಳನ್ನು ಬಳಸಿಕೊಳ್ಳಲಾಗಿದೆ ಎಂದು ಸಾಮಾಜಿಕ ಜಾಲತಾಣಗಳ ಬಳಕೆದಾರರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ.

ಕರ್ನಲ್ ಸೋಫಿಯಾ ಖುರೇಷಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಭಾಗವಾಗಿದ್ದರು ಮತ್ತು ಅವರು ಕಾರ್ಯಾಚರಣೆಯ ಬಗ್ಗೆ ಪತ್ರಿಕಾಗೋಷ್ಟಿಯಲ್ಲಿ ಮಾಹಿತಿ ನೀಡಿದ್ದರು. ಪ್ರೇರಣಾ ದಿಯೋಸ್ಥಲಿ ಅವರು ಭಾರತೀಯ ನೌಕಾಪಡೆಯ ಯುದ್ಧನೌಕೆಯ ಕಮಾಂಡರ್ ಆದ ಮೊದಲ ಮಹಿಳಾ ಅಧಿಕಾರಿಯಾಗಿದ್ದಾರೆ.

ಆಗಸ್ಟ್ 15ರಂದು ಪ್ರಸಾರವಾಗಲಿರುವ ಕೌನ್ ಬನೇಗಾ ಕರೋಡ್ ಪತಿ ವಿಶೇಷ ಸಂಚಿಕೆಯ ಸಣ್ಣ ಪ್ರೋಮೋ ಇತ್ತೀಚೆಗೆ ಬಿಡುಗಡೆಯಾಗಿದೆ. ಇದರಲ್ಲಿ ಕೌನ್ ಬನೇಗಾ ಕರೋಡ್‌ಪತಿ ನಿರೂಪಕ ಅಮಿತಾಬ್ ಬಚ್ಚನ್ ಮೂವರು ಮಹಿಳಾ ಅಧಿಕಾರಿಗಳನ್ನು ಸ್ವಾಗತಿಸುತ್ತಿರುವುದು ಮತ್ತು ಪಹಲ್ಗಾಮ್ ದಾಳಿಯ ಬಳಿಕ ʼಆಪರೇಷನ್ ಸಿಂಧೂರ್ʼ ಏಕೆ ಅಗತ್ಯವಾಗಿತ್ತು ಎಂಬುದನ್ನು ಕರ್ನಲ್ ಖುರೇಷಿ ವಿವರಿಸುವುದು ಕಂಡು ಬಂದಿದೆ.

ರಿಯಾಲಿಟಿ ಶೋವೊಂದರಲ್ಲಿ ಅಧಿಕಾರಿಗಳು ಕಾರ್ಯಾಚರಣೆಯ ಬಗ್ಗೆ ಮಾತನಾಡುತ್ತಿರುವ ಬಗ್ಗೆ ಸಾಮಾಜಿಕ ಜಾಲತಾಣಗಳ ಬಳಕೆದಾರರು ಆಕ್ಷೇಪವನ್ನು ವ್ಯಕ್ತಪಡಿಸಿದ್ದಾರೆ. "ಯಾವುದೇ ದೇಶದಲ್ಲಿ ಮಿಲಿಟರಿ ಕಾರ್ಯಾಚರಣೆಯ ನಂತರ ನೀವು ಎಂದಾದರೂ ಈ ರೀತಿ ನೋಡಿದ್ದೀರಾ? ಸೇವೆಯಲ್ಲಿರುವ ಯಾರಿಗಾದರೂ ಇದಕ್ಕೆ ಅನುಮತಿ ಇದೆಯಾ? ಸರಕಾರ ನಮ್ಮ ಭದ್ರತಾ ಪಡೆಗಳನ್ನು ಸಣ್ಣತನದ ರಾಜಕೀಯಕ್ಕೆ ನಾಚಿಕೆಯಿಲ್ಲದೆ ಬಳಸಿಕೊಳ್ಳುತ್ತಿದೆ” ಎಂದು ವ್ಯಕ್ತಿಯೋರ್ವರು ಟೀಕಿಸಿದ್ದಾರೆ.

ಸಶಸ್ತ್ರ ಪಡೆಗಳ ಶಿಷ್ಟಾಚಾರವು ಅಧಿಕಾರಿಗಳನ್ನು ರಿಯಾಲಿಟಿ ಶೋಗಳಿಗೆ ಕಳುಹಿಸಲು ಅನುಮತಿಸುತ್ತದೆಯೇ? ಭಾರತೀಯ ಸಶಸ್ತ್ರ ಪಡೆಗಳ ಅಧಿಕಾರಿಗಳಿಗೆ ಕೆಲವು ಶಿಷ್ಟಾಚಾರ, ಘನತೆ ಮತ್ತು ಗೌರವವಿದೆ. ರಾಜಕಾರಣಿಗಳು ತಮ್ಮ ವೈಯಕ್ತಿಕ ಲಾಭಕ್ಕಾಗಿ ಅದನ್ನು ಹಾಳು ಮಾಡುತ್ತಿದ್ದಾರೆ. ಇದು ನಾಚಿಕೆಗೇಡಿನ ಸಂಗತಿ ಎಂದು ಮತ್ತೋರ್ವರು ಟೀಕಿಸಿದ್ದಾರೆ.

ಶಿಷ್ಟಾಚಾರದ ವಿಷಯಕ್ಕೆ ಬಂದರೆ, ಸೇನಾ ಉಡುಪು ನಿಯಮಗಳ ಪ್ರಕಾರ, ಅಧಿಕಾರಿಗಳು ಸಾಂಸ್ಕೃತಿಕ ಕಾರ್ಯಕ್ರಮಗಳು ಅಥವಾ ಸಾಮಾಜಿಕ ಕೂಟಗಳಲ್ಲಿ ಸಮವಸ್ತ್ರವನ್ನು ಧರಿಸುವಂತಿಲ್ಲ. ಇದಲ್ಲದೆ, ಸಾರ್ವಜನಿಕ ಸ್ಥಳಗಳು ಅಥವಾ ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡುವಾಗ, ಸಾರ್ವಜನಿಕವಾಗಿ ಪ್ರಯಾಣಿಸುವಾಗ ಅಥವಾ ನಾಗರಿಕ ವಿಮಾನಗಳಲ್ಲಿ ಪ್ರಯಾಣಿಸುವಾಗ ಅದನ್ನು ಧರಿಸುವಂತಿಲ್ಲ. ಕಮಾಂಡಿಂಗ್ ಅಧಿಕಾರಿಯಿಂದ ಲಿಖಿತವಾಗಿ ಅನುಮತಿ ಪಡೆಯದ ಹೊರತು, ಅಧಿಕೃತವಲ್ಲದ ಕಾರ್ಯಕ್ರಮಗಳಲ್ಲಿ ಭಾಗವಹಿಸುವಾಗ ಅಧಿಕೃತ ಸಮವಸ್ತ್ರವನ್ನು ಧರಿಸುವಂತಿಲ್ಲ ಎಂದು indiatoday.in ವರದಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News