ಕೇರಳ | ಎರಡೇ ನಿಮಿಷಗಳಲ್ಲಿ ಬ್ಯಾಂಕ್ ದೋಚಿದ್ದ ವ್ಯಕ್ತಿಯ ಬಂಧನ
ರಿಜೊ ಆ್ಯಂಟನಿ | PC : keralakaumudi.com
ತಿರುವನಂತಪುರ: ಕೇರಳದ ಜನನಿಬಿಡ ಹೆದ್ದಾರಿಯಲ್ಲಿನ ಬ್ಯಾಂಕ್‌ನ್ನು ಕೇವಲ ಎರಡೂವರೆ ನಿಮಿಷಗಳಲ್ಲಿ ದೋಚಿದ್ದ ಆರೋಪಿಯನ್ನು ಪೋಲಿಸರು ರವಿವಾರ ಬಂಧಿಸಿದ್ದಾರೆ.
ತ್ರಿಶೂರು ಜಿಲ್ಲೆಯ ಪೊಟ್ಟಾದಲ್ಲಿನ ಫೆಡರಲ್ ಬ್ಯಾಂಕ್ ಶಾಖೆಗೆ ಶುಕ್ರವಾರ ನುಗ್ಗಿದ್ದ ರಿಜೊ ಆ್ಯಂಟನಿ(42) ಸಿಬ್ಬಂದಿಗಳಿಗೆ ಚೂರಿ ತೋರಿಸಿ ಅವರನ್ನು ವಾಷ್ ರೂಮ್‌ನಲ್ಲಿ ಕೂಡಿ ಹಾಕಿ 15 ಲಕ್ಷ ರೂ.ಗಳನ್ನು ದೋಚಿಕೊಂಡು ಸ್ಕೂಟರ್ ನಲ್ಲಿ ಪರಾರಿಯಾಗಿದ್ದ.
ಡಿಜಿಟಲ್ ಪುರಾವೆಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳ ನೆರವಿನಿಂದ ಆ್ಯಂಟನಿಯನ್ನು ಪತ್ತೆ ಹಚ್ಚಿ ಬಂಧಿಸಲಾಗಿದೆ ಎಂದು ತ್ರಿಶೂರು ವಲಯ ಡಿಐಜಿ ಹರಿಶಂಕರ ಸುದ್ದಿಸಂಸ್ಥೆಗೆ ತಿಳಿಸಿದರು.
ಪೋಲಿಸರ ಪ್ರಕಾರ ಆ್ಯಂಟನಿ ಬ್ಯಾಂಕ್ ನ ಎದುರಿನಲ್ಲಿರುವ ಚರ್ಚ್‌ಗೆ ಹೋಗುತ್ತಿದ್ದು, ಅಲ್ಲಿಂದಲೇ ಬ್ಯಾಂಕಿನ ಭದ್ರತಾ ವ್ಯವಸ್ಥೆಗಳನ್ನು, ಬ್ಯಾಂಕಿನೊಳಗೆ ಜನರ ಚಲನವನಲಗಳ ಮೇಲೆ ಕಣ್ಣಿಡುತ್ತಿದ್ದ ಮತ್ತು ಬ್ಯಾಂಕ್‌ನಲ್ಲಿ ಕನಿಷ್ಠ ಸಂಖ್ಯೆಯಲ್ಲಿ ಗ್ರಾಹಕರು ಇರುವ ಸಮಯವನ್ನು ತಿಳಿದುಕೊಂಡಿದ್ದ.
ಶುಕ್ರವಾರ ಅಪರಾಹ್ನ 1.30ರ ಸುಮಾರಿಗೆ ಹೆಚ್ಚಿನ ಸಿಬ್ಬಂದಿಗಳು ಊಟಕ್ಕೆ ತೆರಳಿದ್ದಾಗ ನಕಲಿ ನಂಬರ್ ಪ್ಲೇಟ್ ಹೊಂದಿದ್ದ ಸ್ಕೂಟರ್ ನಲ್ಲಿ ಬ್ಯಾಂಕಿಗೆ ಬಂದಿದ್ದ ಆ್ಯಂಟನಿ ಕರ್ತವ್ಯದಲ್ಲಿದ್ದ ಇಬ್ಬರು ಸಿಬ್ಬಂದಿಗಳನ್ನು ಚಾಕು ತೋರಿಸಿ ವಾಷ್ ರೂಮ್‌ನಲ್ಲಿ ಕೂಡಿ ಹಾಕಿದ್ದ. ಬಳಿಕ ಕುರ್ಚಿಯಿಂದ ನಗದು ಕೌಂಟರ್‌ನ ಗಾಜು ಒಡೆದು ಹಣದೊಂದಿಗೆ ಪರಾರಿಯಾಗಿದ್ದ. ಇದೆಲ್ಲವೂ ಕೇವಲ ಎರಡೂವರೆ ನಿಮಿಷಗಳಲ್ಲಿ ಮುಗಿದಿತ್ತು.
ನಗದು ಕೌಂಟರ್‌ನಲ್ಲಿ 47 ಲಕ್ಷ ರೂ.ಗಳಿದ್ದರೂ ಆ್ಯಂಟನಿ 15 ಲಕ್ಷ ರೂ.ಗಳನ್ನು ಮಾತ್ರ ತೆಗೆದುಕೊಂಡು ಪರಾರಿಯಾಗಿದ್ದ ಎಂದು ಪೋಲಿಸರು ತಿಳಿಸಿದರು.
ಆ್ಯಂಟನಿ ನಿರುದ್ಯೋಗಿಯಾಗಿದ್ದು, ಗಲ್ಫ್‌ನಲ್ಲಿ ನರ್ಸ್ ಆಗಿ ದುಡಿಯುತ್ತಿರುವ ಪತ್ನಿ ಕಳುಹಿಸುತ್ತಿದ್ದ ದುಡ್ಡಿನಲ್ಲಿ ಐಷಾರಾಮಿ ಜೀವನ ಸಾಗಿಸುತ್ತಿದ್ದ. ಪತ್ನಿ ಕಳುಹಿಸಿದ್ದ ಹಣವನ್ನು ಬೇಕಾಬಿಟ್ಟಿಯಾಗಿ ಪೋಲು ಮಾಡುತ್ತಿದ್ದ ಆತ 10 ಲಕ್ಷ ರೂ.ಗಳ ಸಾಲವನ್ನೂ ಮಾಡಿಕೊಂಡಿದ್ದ. ಮುಂದಿನ ತಿಂಗಳು ಪತ್ನಿ ಊರಿಗೆ ಮರಳಲಿದ್ದರಿಂದ ಆತ ತನ್ನ ಸಾಲವನ್ನು ತೀರಿಸಲು ಬಯಸಿದ್ದ ಮತ್ತು ಬ್ಯಾಂಕ್ ದರೋಡೆಗೆ ಸ್ಕೆಚ್ ಹಾಕಿದ್ದ. ಕೇವಲ ಎರಡು ವಾರಗಳಲ್ಲಿ ಆತ ಬ್ಯಾಂಕ್ ದರೋಡೆಗೆ ಯೋಜನೆಯನ್ನು ರೂಪಿಸಿದ್ದ ಎಂದು ಹರಿಶಂಕರ ತಿಳಿಸಿದರು.