×
Ad

ಹುಂಜದಿಂದ ನಿದ್ರೆಗೆ ಕುತ್ತು: ಕೇರಳದ ವ್ಯಕ್ತಿಯ ದೂರು

Update: 2025-02-19 21:13 IST

ಸಾಂದರ್ಭಿಕ ಚಿತ್ರ

ಪಟ್ಟಣಂತಿಟ್ಟ : ಕೇರಳದ ಪತ್ತನಂತಿಟ್ಟ ಜಿಲ್ಲೆಯ ಪಲ್ಲಿಕಲ್ ಗ್ರಾಮದಲ್ಲಿ ವಿಲಕ್ಷಣ ಕಾನೂನು ವಿವಾದವೊಂದು ಬೆಳಕಿಗೆ ಬಂದಿದೆ. ಇದು ಭೂಮಿ ಅಥವಾ ಹಣಕ್ಕೆ ಸಂಬಂಧಿಸಿದ್ದಲ್ಲ, ಬೆಳಗಿನ ಜಾವದಲ್ಲಿ ನಿರಂತರವಾಗಿ ಕೂಗುವ ಹುಂಜದ ಕುರಿತಾಗಿದೆ.

ನೆರೆಮನೆಯಾತ ಸಾಕಿದ್ದ ಹುಂಜ ನಸುಕಿನ ಮೂರು ಗಂಟೆಗೆ ಕೂಗಲು ಆರಂಭಿಸುತ್ತಿದ್ದರಿಂದ ಗ್ರಾಮದ ನಿವಾಸಿ, ಹಿರಿಯ ನಾಗರಿಕ ರಾಧಾಕೃಷ್ಣನ್ ಕುರುಪ್ ಅವರ ನೆಮ್ಮದಿ ಹಾಳಾಗಿ ನಿದ್ರೆ ಮಾಡುವುದೂ ಕಷ್ಟವಾಗಿತ್ತು. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಕುರುಪ್ ಈ ತೋದರೆಯನ್ನು ಇನ್ನಷ್ಟು ಸಹಿಸಲು ಸಾಧ್ಯವಾಗದೆ ತಾನೇ ಕ್ರಮವನ್ನು ತೆಗೆದುಕೊಳ್ಳಲು ನಿರ್ಧರಿಸಿದ್ದರು. ಅದರಂತೆ ಮಧ್ಯಪ್ರವೇಶಿಸುವಂತೆ ಮತ್ತು ಹುಂಜದ ಅಸಹನೀಯ ಕೂಗಿನಿಂದ ತನ್ನನ್ನು ಪಾರು ಮಾಡುವಂತೆ ಕೋರಿ ಆಡೂರು ಕಂದಾಯ ವಿಭಾಗ ಕಚೇರಿಗೆ ವಿಧ್ಯುಕ್ತ ದೂರು ಸಲ್ಲಿಸಿದ್ದರು.

ದೂರನ್ನು ಗಂಭೀರವಾಗಿ ಪರಿಗಣಿಸಿದ ಅಧಿಕಾರಿಗಳು ತನಿಕೆಯನ್ನು ಆರಂಭಿಸಿದ್ದರು. ಹುಂಜ ಎಲ್ಲ ಸಮಸ್ಯೆಗೂ ಮೂಲ ಎನ್ನುವುದನ್ನು ಕಂಡುಕೊಂಡ ಅವರು ಕುರುಪ್ ಮತ್ತು ಅವರ ನೆರೆಮನೆ ನಿವಾಸಿ ಅನಿಲ್ ಕುಮಾರ್ ಅವರನ್ನು ಕರೆಸಿ ಚರ್ಚಿಸಿದ ಬಳಿಕ ಪರಿಸ್ಥಿತಿಯನ್ನು ಪ್ರತ್ಯಕ್ಷ ತಿಳಿದುಕೊಳ್ಳಲು ಸ್ಥಳಕ್ಕೆ ಭೇಟಿ ನೀಡಿದ್ದರು.

ಕುಮಾರ ತನ್ನ ಹುಂಜಗಳನ್ನು ಮನೆಯ ಮೇಲಂತಸ್ತಿನಲ್ಲಿ ಇರಿಸಿದ್ದು, ಅವುಗಳ ಜೋರಾದ ಮತ್ತು ನಿರಂತರ ಕೂಗುವಿಕೆ ನಿಜಕ್ಕೂ ಕುರುಪ್ ನಿದ್ರೆಗೆ ಅಡ್ಡಿಯನ್ನುಂಟು ಮಾಡುತ್ತಿದೆ ಎನ್ನುವುದನ್ನು ದೃಢಪಡಿಸಿಕೊಂಡ ಅಧಿಕಾರಿಗಳು, ಶಬ್ದವನ್ನು ಕಡಿಮೆ ಮಾಡಲು 14 ದಿನಗಳಲ್ಲಿ ಹುಂಜಗಳನ್ನು ಮೇಲಂತಸ್ತಿನಿಂದ ಮನೆಯ ದಕ್ಷಿಣ ಭಾಗಕ್ಕೆ ಸ್ಥಳಾಂತರಿಸುವಂತೆ ಕುಮಾರ್‌ಗೆ ಆದೇಶಿಸಿದ್ದಾರೆ.

ಇದು ಈ ವಿಲಕ್ಷಣ ವಿವಾದಕ್ಕೆ ವಿಧ್ಯುಕ್ತ ಅಂತ್ಯವನ್ನು ಹಾಡಿದ್ದು, ಕುರುಪ್ ಅವರಲ್ಲಿ ಸುಖನಿದ್ರೆಯ ಭರವಸೆ ಮೂಡಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News