ಕೇರಳದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಿಗೆ ರೋಬೊಟಿಕ್ಸ್ ಶಿಕ್ಷಣ ಕಡ್ಡಾಯ
PC : freepik.com
ತಿರುವನಂತಪುರ: ಜೂ.2ರಿಂದ ಆರಂಭಗೊಳ್ಳುವ ಹೊಸ ಶೈಕ್ಷಣಿಕ ವರ್ಷದಿಂದ 10ನೇ ತರಗತಿಯ ಎಲ್ಲ 4.3 ಲಕ್ಷ ವಿದ್ಯಾರ್ಥಿಗಳಿಗೆ ರೋಬೊಟಿಕ್ಸ್ ಶಿಕ್ಷಣವನ್ನು ಕಡ್ಡಾಯಗೊಳಿಸುವ ಮೂಲಕ ಕೇರಳವು ಇಂತಹ ಹೆಜ್ಜೆಯನ್ನಿರಿಸಿದ ದೇಶದ ಮೊದಲ ರಾಜ್ಯವಾಗಿ ಹೊರಹೊಮ್ಮಿದೆ.
10ನೇ ತರಗತಿಯ ಐಟಿಸಿ ಪಠ್ಯಪುಸ್ತಕದಲ್ಲಿ ರೋಬೊಟಿಕ್ಸ್ ಶಿಕ್ಷಣವನ್ನು ಸಂಯೋಜಿಸಲಾಗಿದ್ದು, ವಿಶೇಷವಾಗಿ ಮೊದಲ ಸಂಪುಟದಲ್ಲಿಯ ‘ದಿ ವರ್ಲ್ಡ್ ಆಫ್ ರೋಬೊಟ್ಸ್’ ಶೀರ್ಷಿಕೆಯ ಅಧ್ಯಾಯವು ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಮೂಲಭೂತ ರೋಬೊಟಿಕ್ಸ್ ಪರಿಕಲ್ಪನೆಗಳನ್ನು ಅನ್ವೇಷಿಸಲು ವಿದ್ಯಾರ್ಥಿಗಳನ್ನು ಸಮರ್ಥರನ್ನಾಗಿಸಲಿದೆ ಎಂದು ರವಿವಾರ ಹೊರಡಿಸಲಾದ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಇವುಗಳಲ್ಲಿ ಸರ್ಕ್ಯೂಟ್ ನಿರ್ಮಾಣ,ಸಂವೇದಕಗಳು ಮತ್ತು ಆ್ಯಕ್ಚುವೇಟರ್‌ಗಳ ಬಳಕೆ ಹಾಗೂ ಕಂಪ್ಯೂಟರ್ ಪ್ರೋಗ್ರಾಮಿಂಗ್ ಬಳಸಿ ವಿದ್ಯುನ್ಮಾನ ಸಾಧನಗಳ ನಿಯಂತ್ರಣ ಇವು ಸೇರಿವೆ ಎಂದು ಐಸಿಟಿ ಪಠ್ಯಪುಸ್ತಕ ಸಮಿತಿ ಅಧ್ಯಕ್ಷ ಕೆ.ಅನ್ವರ್ ಸಾದಾತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈ ಪಠ್ಯಕ್ರಮದ ಪರಿಣಾಮಕಾರಿ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳಲು ಈಗಾಗಲೇ ರಾಜ್ಯಾದ್ಯಂತ ಪ್ರೌಢಶಾಲೆಗಳಿಗೆ 29,000 ರೋಬೊಟಿಕ್ ಕಿಟ್‌ಗಳನ್ನು ವಿತರಿಸಲಾಗಿದೆ.
ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಕೇರಳವು ಏಳನೇ ತರಗತಿಯ ಎಲ್ಲ ವಿದ್ಯಾರ್ಥಿಗಳಿಗೆ ಕೃತಕ ಬುದ್ಧಿಮತ್ತೆ(ಎಐ) ಶಿಕ್ಷಣವನ್ನು ಲಭ್ಯವಾಗಿಸಿದ್ದ ದೇಶದ ಮೊದಲ ರಾಜ್ಯವಾಗಿತ್ತು. ಈಗಿನ ಮಹತ್ವಾಕಾಂಕ್ಷೆಯ ಉಪಕ್ರಮವು ಈ ಯಶಸ್ಸಿನ ಮೇಲೆ ರೂಪುಗೊಂಡಿದೆ ಎಂದು ಸಾದಾತ್ ತಿಳಿಸಿದ್ದಾರೆ.
ಎಐ ಕಲಿಕೆಯನ್ನು ಈಗ 8,9 ಮತ್ತು 10ನೇ ತರಗತಿಗಳ ಐಸಿಟಿ ಪಠ್ಯಪುಸ್ತಕಗಳಲ್ಲಿ ಸೇರಿಸಲಾಗಿದೆ.
ರೋಬೊಟಿಕ್ಸ್ ಕಲಿಕಾ ವಿಧಾನವನ್ನು ಅತ್ಯಾಧುನಿಕ ತಂತ್ರಜ್ಞಾನಗಳ ಮೂಲಕ ವ್ಯಾಪಕ ಶ್ರೇಣಿಯ ಪ್ರಾಯೋಗಿಕ ಸಮಸ್ಯೆಗಳನ್ನು ಬಗೆಹರಿಸಲು ಕೌಶಲ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ವಿನ್ಯಾಸಗೊಳಿಸಲಾಗಿದೆ.
ಈಗಾಗಲೇ 10ನೇ ತರಗತಿಯ ಹೊಸ ಐಟಿಸಿ ಪಠ್ಯಪುಸ್ತಕದ ಕುರಿತು 9,924 ಶಿಕ್ಷಕರಿಗೆ ಮೊದಲ ಹಂತದ ತರಬೇತಿ ಕಾರ್ಯಕ್ರಮವನ್ನು ನಡೆಸಿದೆ. ಜುಲೈನಲ್ಲಿ ಶಿಕ್ಷಕರಿಗೆ ವಿಶೇಷ ರೋಬೊಟಿಕ್ಸ್ ತರಬೇತಿಯನ್ನು ಆಯೋಜಿಸಲಾಗುವುದು ಎಂದು ಸಾದಾತ್ ತಿಳಿಸಿದ್ದಾರೆ.
ಅಲ್ಲದೆ ಹೆಚ್ಚುವರಿ ರೋಬೊಟಿಕ್ ಕಿಟ್‌ಗಳ ಲಭ್ಯತೆಯನ್ನು ಖಚಿತಪಡಿಸಲು, ರಾಜ್ಯ ಪಠ್ಯಕ್ರಮವನ್ನು ಅನುಸರಿಸುತ್ತಿರುವ ಅನುದಾನರಹಿತ ಶಾಲೆಗಳಿಗೆ ಅಗತ್ಯವಾಗಬಹುದಾದ ತಾಂತ್ರಿಕ ವಿಭಾಗವು ನೆರವನ್ನು ಒದಗಿಸಲಿದೆ. ಐಟಿಸಿ ಪಠ್ಯಪುಸ್ತಕಗಳನ್ನು ಮಲಯಾಳಂ,ಇಂಗ್ಲೀಷ್, ತಮಿಳು ಮತ್ತು ಕನ್ನಡ ಮಾಧ್ಯಮಗಳ ಎಲ್ಲ ವಿದ್ಯಾರ್ಥಿಗಳಿಗೆ ಒದಗಿಸಲಾಗುವುದು ಎಂದೂ ಸಾದಾತ್ ಹೇಳಿಕೆಯಲ್ಲಿ ತಿಳಿಸಿದ್ದಾರೆ.