ಕೇರಳ | ಕ್ಯಾಥೋಲಿಕ್ ಶಾಲೆಯಲ್ಲಿ ಭುಗಿಲೆದ್ದ ವಿವಾದಕ್ಕೆ ತೆರೆ : ವಿದ್ಯಾರ್ಥಿನಿಗೆ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ನಿರ್ದೇಶಿಸಿದ ಶಿಕ್ಷಣ ಸಚಿವ ವಿ.ಶಿವನ್‌ಕುಟ್ಟಿ
ವಿ.ಶಿವನ್‌ಕುಟ್ಟಿ |Photo Credit : PTI
ತಿರುವನಂತಪುರಂ : ಹಿಜಾಬ್ ಕುರಿತ ವಿವಾದ ಭುಗಿಲೆದ್ದ ಬೆನ್ನಲ್ಲೆ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಕೊಚ್ಚಿಯಲ್ಲಿನ ಲ್ಯಾಟಿನ್ ಕ್ಯಾಥೋಲಿಕ್ ಚರ್ಚ್ ಅಧೀನದಲ್ಲಿನ ಶಾಲೆಗೆ ಶಿಕ್ಷಣ ಸಚಿವ ವಿ. ಶಿವನ್ಕುಟ್ಟಿ ನಿರ್ದೇಶನ ನೀಡಿದ್ದಾರೆ.
ವಿದ್ಯಾರ್ಥಿನಿಯ ಪೋಷಕರು ಶಾಲೆಯ ವಸ್ತ್ರಸಂಹಿತೆ ಪಾಲಿಸಲು ಒಪ್ಪಿಕೊಂಡಿದ್ದಾರೆ ಎಂಬ ವರದಿ ಬಳಿಕ ಈ ಬೆಳವಣಿಗೆ ನಡೆದಿದೆ.
ಕೊಚ್ಚಿಯ ಪಲ್ಲೂರುತಿಯಲ್ಲಿರುವ ಸೇಂಟ್ ರೀಟಾ ಪಬ್ಲಿಕ್ ಶಾಲೆಯು ಹಿಜಾಬ್ ಧರಿಸಲು ಎಂಟನೇ ತರಗತಿಯ ವಿದ್ಯಾರ್ಥಿನಿಗೆ ಅವಕಾಶ ನೀಡದ ಕಾರಣ ವಿವಾದದಲ್ಲಿ ಸಿಲುಕಿಕೊಂಡಿತ್ತು. ಇದರ ಬೆನ್ನಲ್ಲೆ ಎರಡು ದಿನಗಳ ಕಾಲ ಶಾಲೆಗೆ ರಜೆ ನೀಡಲಾಗಿತ್ತು.
"ವಿದ್ಯಾರ್ಥಿನಿಗೆ ಶಾಲೆಯಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡುವಂತೆ ಶಾಲಾ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ. ವಿದ್ಯಾರ್ಥಿನಿಯ ಪೋಷಕರು ನೀಡಿದ ದೂರಿನ ಆಧಾರದಲ್ಲಿ ಶಿಕ್ಷಣ ಇಲಾಖೆ ವಿಚಾರಣೆ ನಡೆಸಿದಾಗ ವಿದ್ಯಾರ್ಥಿನಿಯ ಸಾಂವಿಧಾನಿಕ ಹಕ್ಕುಗಳನ್ನು ಉಲ್ಲಂಘಿಸುವ ಮೂಲಕ ಗಂಭೀರ ಲೋಪವಾಗಿರುವುದು ಕಂಡು ಬಂದಿದೆ. ಶಾಲೆಯು ವಿದ್ಯಾರ್ಥಿನಿಯ ಧಾರ್ಮಿಕ ನಂಬಿಕೆ ಪ್ರಕಾರ ಹಿಜಾಬ್ ಧರಿಸಲು ಅವಕಾಶ ನೀಡಬೇಕು. ಶಾಲಾ ಆಡಳಿತವು ಹಿಜಾಬ್ ಬಣ್ಣ ಮತ್ತು ವಿನ್ಯಾಸವನ್ನು ನಿರ್ಧರಿಸಬಹುದು" ಎಂದು ಸಚಿವ ಶಿವನ್‌ಕುಟ್ಟಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.