ಕೇರಳ | ಮಕ್ಕಳ ಕ್ರಿಸ್‌ಮಸ್ ಕ್ಯಾರೊಲ್ ಗುಂಪಿನ ಮೇಲೆ ದಾಳಿ; ಬಿಜೆಪಿಗನ ಬಂಧನ
Photo Credit : madhyamamonline.com
ಪಾಲಕ್ಕಾಡ್,ಡಿ.23: ಇಲ್ಲಿಯ ಪುದುಶ್ಶೇರಿಯಲ್ಲಿ ಮಕ್ಕಳನ್ನು ಒಳಗೊಂಡಿದ್ದ ಕ್ರಿಸ್‌ಮಸ್ ಕ್ಯಾರೊಲ್ ಗುಂಪಿನ ಮೇಲೆ ದಾಳಿ ನಡೆಸಿದ ಆರೋಪದಲ್ಲಿ ಬಿಜೆಪಿ-ಆರೆಸ್ಸೆಸ್ ಸದಸ್ಯನೋರ್ವನನ್ನು ಪೋಲಿಸರು ಬಂಧಿಸಿದ್ದಾರೆ. ಪುದುಶ್ಶೇರಿ ಇತ್ತೀಚಿಗೆ ಛತ್ತೀಸ್‌ಗಡದ ದಲಿತ ವಲಸೆ ಕಾರ್ಮಿಕನ ಬರ್ಬರ ಹತ್ಯೆ ನಡೆದ ವಲಯಾರ್ ನಿಂದ ಕೇವಲ ಒಂದು ಕಿ.ಮೀ.ಅಂತರದಲ್ಲಿದೆ.
ಪುದುಶ್ಶೇರಿಯ ಕಲ್ಲಾಡಿಥರ ನಿವಾಸಿ,ಬಿಜೆಪಿ-ಆರೆಸ್ಸೆಸ್‌ನ ಸಕ್ರಿಯ ಸದಸ್ಯ ಅಶ್ವಿನ ರಾಜ್ ಬಂಧಿತ ಆರೋಪಿಯಾಗಿದ್ದಾನೆ.
ಪುದುಶ್ಶೇರಿಯ ಸುರಭಿ ನಗರದಲ್ಲಿ ಸೋಮವಾರ ತಡರಾತ್ರಿ ಈ ಘಟನೆ ನಡೆದಿದೆ. ಇತರ ಇಬ್ಬರೊಂದಿಗೆ ಸೇರಿಕೊಂಡು ಸುಮಾರು 10 ಜನರಿದ್ದ ಕ್ಯಾರೊಲ್ ಗುಂಪಿನ ಮೇಲೆ ದಾಳಿ ನಡೆಸಿದ್ದ ರಾಜ್, ಪ್ರದೇಶದಲ್ಲಿ ಇಂತಹುದಕ್ಕೆ ಅವಕಾಶವಿಲ್ಲ ಎಂದು ಅಬ್ಬರಿಸಿದ್ದ ಎಂದು ಆರೋಪಿಸಲಾಗಿದೆ.
ಗುಂಪು ಬಳಸಿದ್ದ ಡ್ರಮ್‌ನ ಮೇಲಿದ್ದ ‘ಸಿಪಿಐ(ಎಂ)’ ಪದದ ಕುರಿತು ವಾಗ್ವಾದದ ಬಳಿಕ ದಾಳಿ ನಡೆದಿದ್ದು, ಬ್ಯಾಂಡ್ ಸೆಟ್ ಮತ್ತು ಇತರ ಸಂಗೀತ ಉಪಕರಣಗಳಿಗೆ ಹಾನಿಯುಂಟಾಗಿದೆ ಎನ್ನಲಾಗಿದೆ. ಈ ಬಗ್ಗೆ ಕ್ಯಾರೊಲ್ ಗುಂಪು ಪೋಲಿಸ್ ದೂರನ್ನು ದಾಖಲಿಸಿತ್ತು.
ಕ್ಯಾರೊಲ್ ಗುಂಪಿನಲ್ಲಿ 10ರಿಂದ 15 ವರ್ಷ ಪ್ರಾಯದ ಮಕ್ಕಳಿದ್ದರು. ಪ್ರತಿ ವರ್ಷದಂತೆ ಈ ವರ್ಷವೂ ಮಕ್ಕಳ ಮನವಿಯ ಮೇರೆಗೆ ಬ್ಯಾಂಡ್ ವ್ಯವಸ್ಥೆಯನ್ನು ಮಾಡಲಾಗಿತ್ತು ಎಂದು ಸ್ಥಳೀಯ ಸಿಪಿಎಂ ಸಮಿತಿಯ ನಾಯಕರು ಹೇಳಿದರು.