ಬಗೆಹರಿಯದ ಪತಿಯ ಸಾವಿನ ನಿಗೂಢತೆ: ಕೇರಳದಲ್ಲಿ ಮಹಿಳೆ ಆತ್ಮಹತ್ಯೆ
ಇಸ್ರೇಲ್ ನಲ್ಲಿ ಐದು ತಿಂಗಳ ಹಿಂದೆ ಮೃತಪಟ್ಟಿದ್ದ ವಯನಾಡು ಮೂಲದ ಜಿನೇಶ್
ಸಾಂದರ್ಭಿಕ ಚಿತ್ರ
ವಯನಾಡು: ಇಸ್ರೇಲ್ ನಲ್ಲಿ ಪತಿ ಮೃತಪಟ್ಟು ಐದು ತಿಂಗಳು ಕಳೆದರೂ ಸ್ಪಷ್ಟತೆ ದೊರಕದ ಹಿನ್ನೆಲೆಯಲ್ಲಿ ಮನನೊಂದು ಕೇರಳದ ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾದ ಘಟನೆ ವಯನಾಡು ಜಿಲ್ಲೆಯಲ್ಲಿ ನಡೆದಿದೆ.
ವಯನಾಡಿನ ಕೊಲ್ಯಾಡಿ ಗ್ರಾಮದ ರೇಷ್ಮಾ(32) ಅವರು ಬುಧವಾರ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರ ಪತಿ ಜಿನೇಶ್ ಸುಕುಮಾರನ್(38) ಕಳೆದ ಜುಲೈನಲ್ಲಿ ಇಸ್ರೇಲ್ ನಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದ ಸಂದರ್ಭ ಅಪಾರ್ಟ್‌ಮೆಂಟ್‌ನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಈ ಸಾವಿನ ಹಿಂದಿನ ಕಾರಣಗಳು ಇನ್ನೂ ನಿಗೂಢವಾಗಿಯೇ ಉಳಿದಿವೆ.
ಜಿನೇಶ್, ಜೆರುಸಲೆಮ್ ಹೊರವಲಯದಲ್ಲಿರುವ ಮೆವಾಸ್ಸೆರೆಟ್ ಜಿಯಾನ್ ಪಟ್ಟಣದ ಅಪಾರ್ಟ್‌ಮೆಂಟ್‌ನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅದೇ ಮನೆಯಲ್ಲಿ ಅವರು ಆರೈಕೆ ಮಾಡುತ್ತಿದ್ದ 80 ವರ್ಷದ ವೃದ್ಧ ಮಹಿಳೆಯೂ ಇರಿತದ ಗಾಯಗಳೊಂದಿಗೆ ಮೃತಪಟ್ಟಿದ್ದರು. ಹಾಸಿಗೆ ಹಿಡಿದಿದ್ದ ಆ ಮಹಿಳೆಯ ಪತಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಜಿನೇಶ್ ಅವರದ್ದಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಸ್ರೇಲ್ ನಲ್ಲಿ ಕೆಲಸ ಮಾಡುತ್ತಿರುವ ಮತ್ತೊಬ್ಬ ಕೇರಳೀಯ ನರ್ಸ್, ವೃದ್ಧ ಮಹಿಳೆ ಹಾಗೂ ಜಿನೇಶ್ ಅವರ ಸಾವಿನ ಕುರಿತು ಇನ್ನೂ ಸ್ಪಷ್ಟ ಉತ್ತರಗಳು ದೊರಕಿಲ್ಲ ಎಂದು ತಿಳಿಸಿದ್ದಾರೆ. “ಈ ವಿಷಯದ ಬಗ್ಗೆ ಹಲವು ಬಾರಿ ಇಸ್ರೇಲ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯನ್ನು ಸಂಪರ್ಕಿಸಲಾಗಿದೆ. ಆದರೆ ಪ್ರಕರಣ ನ್ಯಾಯಾಲಯದಲ್ಲಿದೆ ಎಂಬ ಉತ್ತರವಷ್ಟೇ ಲಭಿಸಿದೆ. ಜಿನೇಶ್ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರೆ, ವೃದ್ಧ ಮಹಿಳೆ ಇರಿತದ ಗಾಯಗಳಿಂದ ಮೃತಪಟ್ಟಿರುವುದು ಕಂಡುಬಂದಿದೆ” ಎಂದು ಹೇಳಿದ್ದಾರೆ.
ಪತಿಯ ಸಾವಿನ ಬಳಿಕ ರೇಷ್ಮಾ ಉತ್ತರಗಳಿಗಾಗಿ ಕೇಂದ್ರ ಸರಕಾರ ಮತ್ತು ಇಸ್ರೇಲ್ ರಾಯಭಾರ ಕಚೇರಿಯನ್ನು ಸಂಪರ್ಕಿಸಿ ತನಿಖೆ ವೇಗಗೊಳಿಸುವಂತೆ ಮನವಿ ಸಲ್ಲಿಸಿದ್ದರು. ಆದರೆ ಯಾವುದೇ ಪ್ರಗತಿ ಕಂಡುಬರದ ಹಿನ್ನೆಲೆಯಲ್ಲಿ ಅವರು ತೀವ್ರ ನಿರಾಶೆಗೆ ಒಳಗಾಗಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಕೊಲ್ಯಾಡಿಯ ಮಾಜಿ ಪಂಚಾಯತ್ ಸದಸ್ಯೆ ಸುಜಾ ಜೇಮ್ಸ್ ಮಾತನಾಡಿ, “ಜಿನೇಶ್ ಸಾವಿನ ನಂತರ ರೇಷ್ಮಾ ಖಿನ್ನತೆಯಿಂದ ಬಳಲುತ್ತಿದ್ದರು. ವೃದ್ಧ ಮಹಿಳೆಯನ್ನು ಕೊಲೆ ಮಾಡಿದ ಬಳಿಕ ತಮ್ಮ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪವನ್ನು ಅವರು ಎಂದಿಗೂ ನಂಬಲಿಲ್ಲ. ಈ ಕುರಿತು ಅಧಿಕಾರಿಗಳಿಗೆ ಅನೇಕ ಇಮೇಲ್ ಗಳನ್ನು ಕಳುಹಿಸಿದರೂ ಪ್ರಯೋಜನವಾಗಲಿಲ್ಲ” ಎಂದು ಹೇಳಿದ್ದಾರೆ.
ಇಸ್ರೇಲ್‌ಗೆ ತೆರಳುವ ಮೊದಲು ಜಿನೇಶ್ ಫಾರ್ಮಾ ಸಂಸ್ಥೆಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಪದವೀಧರೆಯಾಗಿದ್ದ ರೇಷ್ಮಾ ನಿರುದ್ಯೋಗಿಯಾಗಿದ್ದರು. ದಂಪತಿಗಳು ಕೊಲ್ಯಾಡಿಯಲ್ಲಿ ಹೊಸ ಮನೆ ನಿರ್ಮಿಸಿದ್ದರು. ಮನೆಯ ಸಾಲ ಮತ್ತು ಆರ್ಥಿಕ ಹೊಣೆಗಾರಿಕೆಗಳನ್ನು ತೀರಿಸಲು ಜಿನೇಶ್ ಇಸ್ರೇಲ್‌ಗೆ ತೆರಳಿದ್ದರು. ಉದ್ಯೋಗ ವೀಸಾ ಪಡೆಯಲು ಲಕ್ಷಾಂತರ ರೂಪಾಯಿ ಖರ್ಚಾಗಿತ್ತು ಎನ್ನಲಾಗಿದೆ.
ಇಸ್ರೇಲ್‌ನಲ್ಲಿ ಕೆಲಸ ಮಾಡುತ್ತಿರುವ ನರ್ಸ್ ಗಳ ಪ್ರಕಾರ, ಜಿನೇಶ್ ಅವರ ಕುಟುಂಬಕ್ಕೆ ಅಲ್ಲಿನ ಸರಕಾರದಿಂದ ಪರಿಹಾರ ದೊರಕುವ ಸಾಧ್ಯತೆ ಕಡಿಮೆ. “ಮೊದಲ ಹಂತದಲ್ಲಿ ಈ ಸಾವನ್ನು ಆತ್ಮಹತ್ಯೆಯೆಂದು ಪರಿಗಣಿಸಲಾಗಿದೆ. ಇಸ್ರೇಲ್‌ನಲ್ಲಿ ಆರೈಕೆದಾರರಿಗೆ ಮಾರಕ ಅಪಘಾತಗಳಿಗೆ ವಿಮಾ ರಕ್ಷಣೆಯಿದೆ. ಆದರೆ ಜಿನೇಶ್ ಕೇವಲ ಎರಡು ತಿಂಗಳು ಮಾತ್ರ ಅಲ್ಲಿದ್ದರು” ಎಂದು ಅವರು ವಿವರಿಸಿದ್ದಾರೆ.