ಮುಟ್ಟಿನ ಆರೋಗ್ಯ ರಕ್ಷಣೆ ಮೂಲಭೂತ ಹಕ್ಕು: ಸುಪ್ರೀಂ ಕೋರ್ಟ್
ಶಾಲಾಬಾಲಕಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್ ಒದಗಿಸಲು ಆದೇಶಿಸಿದ ನ್ಯಾಯಾಲಯ
ಸುಪ್ರೀಂ ಕೋರ್ಟ್ | Photo Credit : PTI
ಹೊಸದಿಲ್ಲಿ,ಜ.30: ಮುಟ್ಟಿನ ಆರೋಗ್ಯ ರಕ್ಷಣೆಯು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿರುವ ಜೀವನದ ಹಾಗೂ ಖಾಸಗಿತನದ ಮೂಲಭೂತ ಹಕ್ಕಿನ ಭಾಗವಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಶುಕ್ರವಾರ ಎತ್ತಿ ಹಿಡಿದಿದೆ. ಬಾಲಕಿಯರು ಮತ್ತು ಮಹಿಳೆಯರಿಗೆ ಘನತೆ, ಆರೋಗ್ಯ ಮತ್ತು ಸಮಾನತೆಯನ್ನು ಖಚಿತಪಡಿಸುವಂತೆ ಅದು ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳು ಮತ್ತು ಶಾಲೆಗಳಿಗೆ ಕಟ್ಟುನಿಟ್ಟಾದ ನಿರ್ದೇಶನಗಳನ್ನು ಹೊರಡಿಸಿದೆ.
ವಿದ್ಯಾರ್ಥಿನಿಯರಿಗೆ ಉಚಿತ ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಸಾಕಷ್ಟು ನೈರ್ಮಲ್ಯ ಸೌಲಭ್ಯಗಳನ್ನು ಕೋರಿ ಸುಪ್ರೀಂ ಕೋರ್ಟ್ ವಕೀಲರ ಸಂಘವು (ಎಸ್‌ಸಿಬಿಎ) ಸಲ್ಲಿಸಿದ್ದ ಅರ್ಜಿಯ ಕುರಿತು ತನ್ನ ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಪ್ರಕಟಿಸಿತು.
ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿ ವಿದ್ಯಾರ್ಥಿನಿಯರಿಗೆ ಜೈವಿಕ ವಿಘಟನೀಯ(ಮಣ್ಣಿನಲ್ಲಿ ಕೊಳೆಯುವ) ಸ್ಯಾನಿಟರಿ ಪ್ಯಾಡ್‌ಗಳನ್ನು ಉಚಿತವಾಗಿ ಒದಗಿಸಲಾಗುವುದನ್ನು ಖಚಿತಪಡಿಸುವಂತೆ ಅದು ಎಲ್ಲ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶಿಸಿತು.
ಎಲ್ಲ ಶಾಲೆಗಳಲ್ಲಿ ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳು ಇರುವಂತೆ ನೋಡಿಕೊಳ್ಳುವಂತೆ ನ್ಯಾಯಮೂರ್ತಿಗಳಾದ ಜೆ.ಬಿ.ಪರ್ದಿವಾಲಾ ಮತ್ತು ಆರ್.ಮಹಾದೇವನ್ ಅವರ ಪೀಠವು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚಿಸಿತು. ಸರಕಾರಿ ಅಥವಾ ಸರಕಾರಿ ನಿಯಂತ್ರಿತ ಶಾಲೆಯಾಗಿರಲಿ, ಎಲ್ಲ ಶಾಲೆಗಳಲ್ಲಿ ವಿಕಲಾಂಗ ಸ್ನೇಹಿ ಶೌಚಾಲಯಗಳನ್ನು ಒದಗಿಸಬೇಕು ಎಂದೂ ಅದು ಹೇಳಿತು.
ಮುಟ್ಟಿನ ಆರೋಗ್ಯ ರಕ್ಷಣೆಯ ಹಕ್ಕು ಸಂವಿಧಾನದ ವಿಧಿ 21ರಡಿ ಜೀವನದ ಹಕ್ಕಿನ ಭಾಗವಾಗಿದೆ ಎಂದು ಎತ್ತಿ ಹಿಡಿದ ನ್ಯಾಯಾಲಯವು, ಖಾಸಗಿ ಶಾಲೆಗಳು ಈ ಸೌಲಭ್ಯಗಳನ್ನು ಒದಗಿಸಲು ವಿಫಲಗೊಂಡರೆ ಅವುಗಳ ಮಾನ್ಯತೆಯನ್ನು ರದ್ದುಗೊಳಿಸಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿತು.
ವಿದ್ಯಾರ್ಥಿನಿಯರಿಗೆ ಶೌಚಾಲಯಗಳು ಮತ್ತು ಉಚಿತ ಸ್ಯಾನಿಟರಿ ಪ್ಯಾಡ್‌ಗಳನ್ನು ಒದಗಿಸಲು ಸರಕಾರಗಳು ವಿಫಲಗೊಂಡರೆ ಅವುಗಳನ್ನೂ ಹೊಣೆಯಾಗಿಸಲಾಗುವುದು ಎಂದು ಪೀಠವು ಸ್ಪಷ್ಟಪಡಿಸಿದೆ.
ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ 6ರಿಂದ 12ನೇ ತರಗತಿಗಳ ಹದಿಹರೆಯದ ವಿದ್ಯಾರ್ಥಿನಿಯರಿಗಾಗಿ ಕೇಂದ್ರ ಸರಕಾರದ ‘ವಿದ್ಯಾರ್ಥಿನಿಯರಿಗೆ ಮುಟ್ಟಿನ ನೈಮರ್ಲ್ಯ ನೀತಿ’ಯನ್ನು ದೇಶಾದ್ಯಂತ ಜಾರಿಗೊಳಿಸಬೇಕು ಎಂದು ಕೋರಿ ಜಯಾ ಠಾಕೂರ್ ಡಿ.10, 2024ರಂದು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತು ತೀರ್ಪನ್ನು ಸರ್ವೋಚ್ಚ ನ್ಯಾಯಾಲಯವು ಕಾಯ್ದಿರಿಸಿದೆ.