ಕೆಳ ನ್ಯಾಯಾಲಯಗಳಲ್ಲಿ ದಲಿತ, ಆದಿವಾಸಿ ಮತ್ತು ಒಬಿಸಿ ನ್ಯಾಯಾಧೀಶರ ಪಟ್ಟಿಯಲ್ಲಿ ತಮಿಳುನಾಡು, ಕರ್ನಾಟಕಕ್ಕೆ ಅಗ್ರಸ್ಥಾನ
ಸಾಂದರ್ಭಿಕ ಚಿತ್ರ | Photo Credit : freepik
ಹೊಸದಿಲ್ಲಿ,ಜ.30: ದೇಶದಲ್ಲಿಯ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳಲ್ಲಿ ಶೇ.14.15ರಷ್ಟು ದಲಿತ, ಶೇ.5.12ರಷ್ಟು ಬುಡಕಟ್ಟು ಜನಾಂಗ ಮತ್ತು ಶೇ26.64ರಷ್ಟು ಒಬಿಸಿಗಳಿಗೆ ಸೇರಿದ ನ್ಯಾಯಾಧೀಶರಿದ್ದಾರೆ. ದೇಶದ ಇತರ ಭಾಗಗಳಿಗೆ ಹೋಲಿಸಿದರೆ ತಮಿಳುನಾಡು ಮತ್ತು ಕರ್ನಾಟಕಗಳಲ್ಲಿ ಈ ವರ್ಗಗಳ ನ್ಯಾಯಾಧೀಶರು ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎನ್ನುವುದನ್ನು ಅಂಕಿಅಂಶಗಳು ತೋರಿಸಿವೆ.
ಉಚ್ಚ ನ್ಯಾಯಾಲಯಗಳಿಗೆ ಹೋಲಿಸಿದರೆ ಕೆಳ ನ್ಯಾಯಾಂಗವು ಈ ವರ್ಗಗಳಿಗೆ ಹೆಚ್ಚಿನ ಪ್ರಾತಿನಿಧ್ಯವನ್ನು ನೀಡಿದೆ. 2018ರಿಂದ ಉಚ್ಚ ನ್ಯಾಯಾಲಯಗಳಿಗೆ ನೇಮಕಗೊಂಡ 847 ನ್ಯಾಯಾಧೀಶರಲ್ಲಿ ಕೇವಲ 3.89 ರಷ್ಟು ದಲಿತರು, ಶೇ.2ರಷ್ಟು ಬುಡಕಟ್ಟು ಪಂಗಡಗಳು ಮತ್ತು ಶೇ.12.27ರಷ್ಟು ಒಬಿಸಿ ಸಮುದಾಯಗಳಿಗೆ ಸೇರಿದವರಾಗಿದ್ದಾರೆ.
ಕಾನೂನು ಮತ್ತು ಸಚಿವ ಅರ್ಜುನ್ ಮೇಘ್ವಾಲ್ ಅವರು ಸಂಸತ್ತಿನಲ್ಲಿ ಹಿರಿಯ ಆರ್‌ಜೆಡಿ ಸಂಸದ ಮನೋಜ ಕೆ.ಝಾ ಅವರಿಗೆ ನೀಡಿದ ಲಿಖಿತ ಉತ್ತರದಲ್ಲಿ ಈ ಅಂಕಿ ಅಂಶಗಳನ್ನು ಒದಗಿಸಿದ್ದಾರೆ.
ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶದಂತಹ ರಾಜ್ಯಗಳಲ್ಲಿಯ ಕೆಳ ನ್ಯಾಯಾಲಯಗಳಲ್ಲಿ ಈ ಸಮುದಾಯಗಳು ಗಮನಾರ್ಹ ಪ್ರಾತಿನಿಧ್ಯವನ್ನು ಹೊಂದಿದ್ದರೆ, ಪಶ್ಚಿಮ ಬಂಗಾಳ ಹಾಗೂ ಅಂಡಮಾನ ನಿಕೋಬಾರ್ ದ್ವೀಪ ಸಮೂಹದ ಕೆಳ ನ್ಯಾಯಾಲಯಗಳಲ್ಲಿ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಸೇರಿದ ಒಬ್ಬರೂ ನ್ಯಾಯಾಧೀಶರಿಲ್ಲ.
ಅಂಕಿಅಂಶಗಳ ಪ್ರಕಾರ ಜ.21ಕ್ಕೆ ಇದ್ದಂತೆ ಜಿಲ್ಲಾ ಮತ್ತು ಅಧೀನ ನ್ಯಾಯಾಲಯಗಳ ಒಟ್ಟು 20,833 ನ್ಯಾಯಾಧೀಶರಲ್ಲಿ 9,534 (ಶೇ.45.76) ನ್ಯಾಯಾಧೀಶರು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿ ವರ್ಗಗಳಿಗೆ ಸೇರಿದ್ದಾರೆ.
ತಮಿಳುನಾಡಿನಲ್ಲಿ 1,234 ನ್ಯಾಯಾಧೀಶರ ಪೈಕಿ 1,205(ಶೇ.97.65) ಮತ್ತು ಕರ್ನಾಟಕದಲ್ಲಿ 1,129 ನ್ಯಾಯಾಧೀಶರ ಪೈಕಿ 996(ಶೇ.88.82) ನ್ಯಾಯಾಧೀಶರು ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಸೇರಿದ್ದಾರೆ.
ಸರ್ವೋಚ್ಚ ನ್ಯಾಯಾಲಯದ ಕೊಲಿಜಿಯಂ ಶಿಫಾರಸು ಮಾಡಿದ ನ್ಯಾಯಾಧೀಶರನ್ನು ಮಾತ್ರ ಸುಪೀಂ ಕೋರ್ಟ್ ಮತ್ತು ಹೈಕೋರ್ಟ್‌ಗಳಿಗೆ ನೇಮಕ ಮಾಡಲಾಗುತ್ತದೆ. ರಾಜ್ಯ ಸರಕಾರಗಳು ಆಯಾ ಹೈಕೋರ್ಟ್‌ಗಳೊಂದಿಗೆ ಸಮಾಲೋಚಿಸಿ ರಾಜ್ಯ ನ್ಯಾಯಾಂಗ ಸೇವೆಯಲ್ಲಿ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದ ನಿಯಮಗಳನ್ನು ರೂಪಿಸುತ್ತವೆ.