×
Ad

ಕೋಮುವಾದದ ವಿರುದ್ಧ ಬಲವಾದ ಧ್ವನಿ: ರಾಹುಲ್ ಗಾಂಧಿಗೆ ಶಶಿ ತರೂರ್ ಪ್ರಶಂಸೆ

Update: 2026-01-30 19:20 IST

 ಶಶಿ ತರೂರ್ , ರಾಹುಲ್ ಗಾಂಧಿ | Photo Credit : PTI 

ಹೊಸದಿಲ್ಲಿ, ಜ.30: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿಯವರು ಪ್ರಾಮಾಣಿಕ ವ್ಯಕ್ತಿಯಾಗಿದ್ದಾರೆ ಮತ್ತು ದೇಶದಲ್ಲಿ ಕೋಮುವಾದಗಳಂತಹ ವಿಷಯಗಳ ವಿರುದ್ಧ ಬಲವಾದ ಧ್ವನಿಯಾಗಿದ್ದಾರೆ ಎಂದು ಶುಕ್ರವಾರ ಪ್ರಶಂಸಿಸಿದರು.

ತನ್ನ ಮತ್ತು ಪಕ್ಷದ ನಡುವೆ ಬಿರುಕು ಉಂಟಾಗಿದೆ ಎಂಬ ಊಹಾಪೋಹಗಳನ್ನು ತಳ್ಳಿಹಾಕಿದ ಶಶಿ ತರೂರ್, ತಾನು ಪಕ್ಷದ ಹೈಕಮಾಂಡ್ ಜೊತೆ ಉತ್ತಮ ಸಂಬಂಧವನ್ನು ಹೊಂದಿದ್ದೇನೆ ಎಂದು ಹೇಳಿದರು.

ಬುಧವಾರ ಸಂಸತ್ತಿನಲ್ಲಿ ರಾಹುಲ್ ಮತ್ತು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರೊಂದಿಗೆ ತನ್ನ ಭೇಟಿಯ ಚಿತ್ರವನ್ನು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದ ತರೂರ್,‘ಎಲ್ಲವೂ ಚೆನ್ನಾಗಿದೆ, ನಾವೆಲ್ಲರೂ ಒಗ್ಗಟ್ಟಾಗಿದ್ದೇವೆ’ ಎಂದು ಬರೆದಿದ್ದರು.

ರಾಹುಲ್ ಮತ್ತು ಖರ್ಗೆ ಅವರನ್ನು ತನ್ನ ಇಬ್ಬರು ನಾಯಕರು ಎಂದು ಬಣ್ಣಿಸಿದ ತಿರುವನಂತಪುರ ಸಂಸದ ತರೂರ್ ತಾನು ಕಾಂಗ್ರೆಸ್ ಪಕ್ಷವನ್ನು ತೊರೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇತ್ತೀಚಿನ ‘ಕೊಚ್ಚಿ ಮಹಾಪಂಚಾಯತ್’ ನಂತರದ ವಿವಾದಕ್ಕೆ ಅವರು ಮಹತ್ವ ನೀಡಲಿಲ್ಲ.

ಮುಂಬರುವ ಕೇರಳ ವಿಧಾನಸಭಾ ಚುನಾವಣೆಯಲ್ಲಿ ರಾಜ್ಯದ ಎಲ್ಲ 140 ಕ್ಷೇತ್ರಗಳಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್‌ಗಾಗಿ ವ್ಯಾಪಕ ಪ್ರಚಾರವನ್ನು ನಡೆಸಲು ತಾನು ಯೋಜಿಸಿರುವುದಾಗಿ ತರೂರ್ ತಿಳಿಸಿದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಶಶಿ ತರೂರ್ ಕೆಲವು ವಿಷಯಗಳಲ್ಲಿ ತನ್ನ ನಿಲುವಿಗೆ ಟೀಕೆಗಳ ಕುರಿತಂತೆ, ಕೆಲವರು ತನ್ನ ಅಭಿಪ್ರಾಯಗಳನ್ನು ಬಿಜೆಪಿ ಪರ ಎಂದು ಪರಿಗಣಿಸಿರಬಹುದು. ಆದರೆ ಅವು ‘ಭಾರತ ಪರ’ವಾಗಿದ್ದವು ಎಂದು ಹೇಳಿದರು.

ಕೆಲವು ಅಂತರರಾಷ್ಟ್ರೀಯ ವಿಷಯಗಳಲ್ಲಿ ರಾಜಕೀಯದ ಕುರಿತು ಮಾತನಾಡಲು ನಾನು ಇಷ್ಟಪಡುವುದಿಲ್ಲ. ಬದಲಿಗೆ ದೇಶದ ಕುರಿತು ಮಾತನಾಡಲು ಆದ್ಯತೆ ನೀಡುತ್ತೇನೆ ಎಂದು ತಾನು ಹಿಂದೆಯೂ ಸ್ಪಷ್ಟಪಡಿಸಿದ್ದೇನೆ ಎಂದು ಹೇಳಿದರು.

ಪಕ್ಷದ ಸದಸ್ಯರು ಪಕ್ಷದ ನಿಲುವಿಗೆ ವಿರುದ್ಧವಾಗಿ ಹೋಗಬಾರದು ಎನ್ನುವುದನ್ನು ಒಪ್ಪಿಕೊಂಡ ಶಶಿ ತರೂರ್, ಸಂಸತ್ತಿನಲ್ಲಿ ತಾನು ಯಾವಾಗಲೂ ಪಕ್ಷದ ಜೊತೆಯಲ್ಲಿ ನಿಂತಿದ್ದೇನೆ. ಹೀಗಾಗಿ ಕಳವಳಗೊಳ್ಳುವ ಅಗತ್ಯವಿಲ್ಲ ಎಂದರು.

ಕಾಂಗ್ರೆಸ್ ತೊರೆಯುವುದಿಲ್ಲ ಎಂದು ನೀವು ಸ್ಪಷ್ಟವಾಗಿ ಹೇಳಬಹುದೇ ಎಂಬ ಸುದ್ದಿಗಾರರ ಪ್ರಶ್ನೆಗೆ ಅವರು,‘ನಾನು ಕಾಂಗ್ರೆಸ್‌ನಲ್ಲಿಯೇ ಇರುತ್ತೇನೆ ಮತ್ತು ಬೇರೆಲ್ಲಿಗೂ ಹೋಗುವುದಿಲ್ಲ ಎಂದು ನಾನು ಹೇಳಬಲ್ಲೆ. ಕೇರಳದಲ್ಲಿ ಚುನಾವಣಾ ಪ್ರಚಾರದ ಭಾಗವಾಗಿರುತ್ತೇನೆ ಮತ್ತು ಯುಡಿಎಫ್ ಗೆಲುವಿಗೆ ಶ್ರಮಿಸುತ್ತೇನೆ’ಎಂದು ಉತ್ತರಿಸಿದರು. ‘ಆದರೆ, ಇಂತಹ ಹೇಳಿಕೆಗಳನ್ನು ನೀಡುವಂತೆ ನನ್ನನ್ನೇಕೆ ಕೇಳಲಾಗುತ್ತಿದೆ ’ ಎಂದು ಅವರು ಪ್ರಶ್ನಿಸಿದರು.

ಇತ್ತೀಚಿಗೆ ಕೊಚ್ಚಿಯಲ್ಲಿ ನಡೆದಿದ್ದ ಕಾರ್ಯಕ್ರಮದಲ್ಲಿ ತನ್ನನ್ನು ನಡೆಸಿಕೊಂಡಿದ್ದ ರೀತಿ ಮತ್ತು ಕೇರಳದಲ್ಲಿ ತನ್ನನ್ನು ಬದಿಗೊತ್ತಲು ಕೆಲವು ನಾಯಕರು ಪ್ರಯತ್ನಿಸುತ್ತಿರುವ ವರದಿಗಳ ಬಗ್ಗೆ ತರೂರ್ ಅಸಮಾಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಅವರ ಶುಕ್ರವಾರದ ಹೇಳಿಕೆಗಳು ಮಹತ್ವ ಪಡೆದುಕೊಂಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News