ಕೇರಳ ವಿಧಾನಸಭೆಯಲ್ಲಿ ಸಾರ್ವಜನಿಕ ಸೇವಾ ಹಕ್ಕು ವಿಧೇಯಕ ಅಂಗೀಕಾರ
Photo Credit : PTI
ತಿರುವನಂತಪುರ, ಅ.10: ಕೇರಳ ಸಾರ್ವಜನಿಕ ಸೇವಾ ಹಕ್ಕು ವಿಧೇಯಕವನ್ನು ಕೇರಳ ವಿಧಾನಸಭೆಯು ಗುರುವಾರ ಅಂಗೀಕರಿಸಿದೆ. ಅರ್ಹ ವ್ಯಕ್ತಿಗಳಿಗೆ ಸಾರ್ವಜನಿಕ ಸೇವೆಗಳು ಸಕಾಲದಲ್ಲಿ ಲಭ್ಯವಾಗುವುದನ್ನು ಖಾತರಿಪಡಿಸುವ ಉದ್ದೇಶದಿಂದ ಈ ವಿಧೇಯಕವನ್ನು ಅಂಗೀಕರಿಸಲಾಗಿದೆ.
ಶಬರಿಮಲೆ ಚಿನ್ನ ಕಳವು ವಿವಾದದ ಹಿನ್ನೆಲೆಯಲ್ಲಿ ದೇವಸ್ವಂ ವ್ಯವಹಾರಗಳ ಸಚಿವ ವಿ.ಎನ್.ವಾಸವನ್ ಅವರ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷ ಯುಡಿಎಫ್ ಶಾಸಕರು ಸದನ ಕಲಾಪಗಳನ್ನು ಬಹಿಷ್ಕರಿಸಿರುವ ನಡುವೆಯೇ ವಿಧೇಯಕವನ್ನು ಅಂಗೀಕರಿಸಲಾಗಿದೆ.
ಕೇಂದ್ರ ಸರಕಾರದ ವಿವಿಧ ಸಚಿವರ ಜೊತೆ ಮಾತುಕತೆಗಾಗಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ದಿಲ್ಲಿಯಲ್ಲಿರುವುದರಿಂದ, ಅವರ ಗೈರುಹಾಜರಿಯಲ್ಲಿ ಕಾನೂನು ಹಾಗೂ ನ್ಯಾಯ ಸಚಿವ ಪಿ.ರಾಜೀವ್ ಅವರು ವಿಧೇಯಕವನ್ನು ಮಂಡಿಸಿದರು.
ಹಾಲಿ ವಿಧೇಯಕವು 2012ರಲ್ಲಿ ಆಗಿನ ಯುಡಿಎಫ್ ಸರಕಾರವು ಅಂಗೀಕರಿಸಿದ ವಿಧೇಯಕದ ಪರಿಷ್ಕೃತ ಆವೃತ್ತಿಯೆಂದು ರಾಜೀವ್ ಸದನಕ್ಕೆ ತಿಳಿಸಿದರು. ಯಾವುದೇ ಸಾರ್ವಜನಿಕ ಸೇವೆಗಳ ಕುರಿತು ಅಧಿಸೂಚನೆ ನೀಡಲು ಇಲಾಖೆಯ ಮುಖ್ಯಸ್ಥ ವಿಫಲನಾದಲ್ಲಿ ಆತನನ್ನು ಶಿಕ್ಷಿಸುವುದಕ್ಕೆ ಅವಕಾಶ ನೀಡುವ ಕಾನೂನನ್ನು ಈ ಮಸೂದೆಯು ಒಳಗೊಂಡಿದೆ ಎಂದರು.
ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು, ನೂತನ ಮಸೂದೆಯು ಪೌರರಿಗೆ ಸಕಾಲಿಕ, ಪಾರದರ್ಶಕ ಹಾಗೂ ಉತ್ತರದಾಯಿತ್ವವುಳ್ಳ ಸೇವೆಯನ್ನು ಒದಗಿಸಲಿದೆ ಎಂದು ತಿಳಿಸಿದ್ದಾರೆ.