×
Ad

ಎಸ್‌ಐಆರ್ ವಿರುದ್ಧ ಸರ್ವಾನುಮತದ ನಿರ್ಣಯ ಅಂಗೀಕರಿಸಿದ ಕೇರಳ ವಿಧಾನಸಭೆ

"NRC ಜಾರಿಗೊಳಿಸಲು ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ"

Update: 2025-09-29 16:03 IST

ಸಾಂದರ್ಭಿಕ ಚಿತ್ರ (Photo: PTI)

ತಿರುವನಂತಪುರಂ: ರಾಜ್ಯದಲ್ಲಿ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಗೆ ಮುಂದಾಗಿರುವ ಭಾರತೀಯ ಚುನಾವಣಾ ಆಯೋಗದ ಕ್ರಮದ ವಿರುದ್ಧ ಸೋಮವಾರ ಕೇರಳ ವಿಧಾನಸಭೆ ನಿರ್ಣಯ ಅಂಗೀಕರಿಸಿದ್ದು, ಮತದಾರರ ಪಟ್ಟಿಯ ಪರಿಷ್ಕರಣೆಯನ್ನು ಸ್ಥಳೀಯ ಸಂಸ್ಥೆಗಳು ಪಾರದರ್ಶಕವಾಗಿ ನಡೆಸಲಿ ಎಂದು ಆಗ್ರಹಿಸಿದೆ.

ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯ ವಿರುದ್ಧ ಈಗಾಗಲೇ ತನ್ನ ಬಲವಾದ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿರುವ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮೈತ್ರಿಕೂಟ, ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಸದನದಲ್ಲಿ ಮಂಡಿಸಿದ ನಿರ್ಣಯಕ್ಕೆ ಬೆಂಬಲ ಸೂಚಿಸಿತು.

ಭಾರತೀಯ ಚುನಾವಣಾ ಆಯೋಗವು ಆತುರವಾಗಿ ವಿಶೇಷ ಮತಪಟ್ಟಿ ಪರಿಷ್ಕರಣೆ ನಡೆಸಲು ಮುಂದಾಗಿರುವುದರ ಬಗ್ಗೆ ಸದನದ ಕಳವಳವನ್ನು ನಿರ್ಣಯದಲ್ಲಿ ಮಂಡಿಸಿದ ಪಿಣರಾಯಿ ವಿಜಯನ್, ಈ ನಡೆಯ ಹಿಂದೆ ದುರುದ್ದೇಶವಿರುವಂತಿದೆ ಎಂಬ ಶಂಕೆ ವ್ಯಕ್ತಪಡಿಸಿದರು.

ಕೇಂದ್ರ ಸರಕಾರವು ಹಿಂಬಾಗಿಲ ಮೂಲಕ ರಾಷ್ಟ್ರೀಯ ಪೌರತ್ವ ನೋಂದಣಿಯನ್ನು ಜಾರಿಗೊಳಿಸಲು ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆಯನ್ನು ಭಾರತೀಯ ಚುನಾವಣಾ ಆಯೋಗದ ಮೂಲಕ ಕೈಗೆತ್ತಿಕೊಂಡಿದೆ ಎಂಬ ವ್ಯಾಪಕ ಕಳವಳ ವ್ಯಕ್ತವಾಗಿದೆ ಎಂದು ನಿರ್ಣಯದಲ್ಲಿ ಬೊಟ್ಟು ಮಾಡಲಾಗಿದೆ.

ಬಿಹಾರದಲ್ಲಿನ ಇತ್ತೀಚಿನ ವಿಶೇಷ ತೀವ್ರ ಮತಪಟ್ಟಿ ಪರಿಷ್ಕರಣೆ ಈ ಕಳವಳಗಳನ್ನು ದೃಢಪಡಿಸಿದ್ದು, ಇದು ‘ಹೊರಗಿಡುವ ರಾಜಕೀಯ’ ವನ್ನು ಪ್ರತಿಬಿಂಬಿಸುತ್ತದೆ ಎಂದು ನಿರ್ಣಯದಲ್ಲಿ ಆರೋಪಿಸಲಾಗಿದೆ.

1987ರ ನಂತರ ಜನಿಸಿರುವವರು ತಮ್ಮ ತಂದೆ ಅಥವಾ ತಾಯಿಯ ಪೌರತ್ವ ಪ್ರಮಾಣ ಪತ್ರವನ್ನು ಒದಗಿಸಿದರೆ ಮಾತ್ರ ಮತದಾನ ಮಾಡಲು ಅರ್ಹರಾಗಿರುತ್ತಾರೆ ಎಂಬ ವಿಶೇಷ ಮತಪಟ್ಟಿ ಪರಿಷ್ಕರಣೆಯ ಅಗತ್ಯವು ವಯಸ್ಕರ ಮತದಾನದ ಹಕ್ಕನ್ನು ಹತ್ತಿಕ್ಕುವ ನಿರ್ಧಾರವಾಗಿದೆ ಎಂದು ನಿರ್ಣಯದಲ್ಲಿ ಆತಂಕ ವ್ಯಕ್ತಪಡಿಸಲಾಗಿದೆ.

ಕೆಲವು ಸದಸ್ಯರು ನಿರ್ಣಯಕ್ಕೆ ತಿದ್ದುಪಡಿಗಳನ್ನು ಸೂಚಿಸಿದ ನಂತರ, ವಿಧಾನಸಭೆಯು ನಿರ್ಣಯವನ್ನು ಸರ್ವಾನುಮತದಿಂದ ಅಂಗೀಕರಿಸಿದೆ ಎಂದು ವಿಧಾನಸಭಾಧ್ಯಕ್ಷ ಎ.ಎನ್.ಶಂಶೀರ್ ಪ್ರಕಟಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News