ರಾಹುಲ್ ಗಾಂಧಿಗೆ ಜೀವ ಬೆದರಿಕೆ: ಕೇರಳ ಬಿಜೆಪಿ ನಾಯಕನ ವಿರುದ್ಧ ಪ್ರಕರಣ ದಾಖಲು
ರಾಹುಲ್ ಗಾಂಧಿ (Photo: PTI)
ತ್ರಿಶೂರ್: ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ಎದೆಗೆ ಗುಂಡು ಹೊಡೆಯಲಾಗುವುದು ಎಂದು ಟಿವಿ ಚರ್ಚೆಯಲ್ಲಿ ಬೆದರಿಕೆ ಹಾಕಿದ್ದ ಕೇರಳ ಬಿಜೆಪಿ ನಾಯಕ ಪ್ರಿಂಟು ಮಹಾದೇವನ್ ವಿರುದ್ಧ ಪೆರಮಂಗಲಂ ಪೊಲೀಸರು ಸೋಮವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕೇರಳ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಶ್ರೀಕುಮಾರ್ ಸಿ.ಸಿ. ಹಾಗೂ ಯುವ ಕಾಂಗ್ರೆಸ್ ನ ಜಿಲ್ಲಾಧ್ಯಕ್ಷ ಗೋಕುಲ್ ಗುರುವಾಯೂರ್ ಸಲ್ಲಿಸಿದ್ದ ದೂರನ್ನು ಆಧರಿಸಿ ಈ ಪ್ರಕರಣ ದಾಖಲಾಗಿದೆ.
ಸೆಪ್ಟೆಂಬರ್ 26ರಂದು ಮಲಯಾಳಂ ಸುದ್ದಿ ವಾಹಿನಿಯೊಂದರಲ್ಲಿ ಬಾಂಗ್ಲಾದೇಶ ಮತ್ತು ನೇಪಾಳದಲ್ಲಿನ ಪ್ರತಿಭಟನೆಗಳ ಕುರಿತು ನಡೆದ ಚರ್ಚೆಯ ವೇಳೆ ಮಾಜಿ ಎಬಿವಿಪಿ ನಾಯಕರೂ ಆದ ಪ್ರಿಂಟು ಮಹಾದೇವನ್ ಮೇಲಿನಂತೆ ಹೇಳಿಕೆ ನೀಡಿದ್ದರು. ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಪ್ರಿಂಟು ಮಹಾದೇವನ್, ಜನರು ಪ್ರಧಾನಿ ನರೇಂದ್ರ ಮೋದಿಯ ಬೆನ್ನಿಗೆ ನಿಂತಿರುವುದರಿಂದ, ಭಾರತದಲ್ಲಿ ಅಂತಹ ಪ್ರತಿಭಟನೆಗಳು ನಡೆಯಲು ಸಾಧ್ಯವಿಲ್ಲ. ಒಂದು ವೇಳೆ ರಾಹುಲ್ ಗಾಂಧಿ ಅವರಿಗೇನಾದರೂ ಅಂತಹ ಬಯಕೆಗಳಿದ್ದರೆ, ಅವರ ಎದೆಗೆ ಗುಂಡು ಹೊಡೆಯಲಾಗುವುದು ಎಂದು ಬೆದರಿಕೆ ಒಡ್ಡಿದ್ದರು.
ಈ ಸಂಬಂಧ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್ ಗಳಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಈ ನಡುವೆ, ಸೋಮವಾರ ಕಾಂಗ್ರೆಸ್ ಕಾರ್ಯಕರ್ತರು ಕೇರಳದಾದ್ಯಂತ ಮಹಾದೇವನ್ ಹಾಗೂ ಬಿಜೆಪಿಯ ವಿರುದ್ಧ ಪ್ರತಿಭಟನೆ ನಡೆಸಿದರು. ಇದಕ್ಕೂ ಮುನ್ನ, ರವಿವಾರ ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಪತ್ರ ಬರೆದಿದ್ದ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್, “ಈ ಬೆದರಿಕೆ ಪಕ್ಷದ ಪದಾಧಿಕಾರಿಯೊಬ್ಬರ ಉಡಾಫೆಯ ಆಕ್ರೋಶ ಮಾತ್ರವಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು.