"ಚರ್ಚೆಗೆ ನಾನೂ ಸಿದ್ಧ; ದಿನಾಂಕ, ಸಮಯ ನಿಗದಿಗೊಳಿಸಿ": ಕೆ.ಸಿ. ವೇಣುಗೋಪಾಲ್‌ಗೆ ಪಿಣರಾಯಿ ವಿಜಯನ್ ಸವಾಲು
Photo Credit: PTI, X/@kcvenugopalmp
ತಿರುವನಂತಪುರಂ: "ಸಂಸತ್ತಿನಲ್ಲಿ ರಾಜ್ಯದ ಯುಡಿಎಫ್ ಸಂಸದರ ಕಾರ್ಯಕ್ಷಮತೆ ಕುರಿತು ಸಾರ್ವಜನಿಕ ಚರ್ಚೆ ನಡೆಸಲು ನಾನು ಸಿದ್ಧ. ಅದಕ್ಕಾಗಿ ದಿನಾಂಕ ಮತ್ತು ಸಮಯ ನಿಗದಿಗೊಳಿಸಲು ನೀವು ಸಿದ್ಧರಿದ್ದೀರಾ?" ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಅವರಿಗೆ ಪಂಥಾಹ್ವಾನ ನೀಡಿದ್ದಾರೆ.
"ಯುಡಿಎಫ್ ಸಂಸದರು ಕೇರಳದ ಸಮಸ್ಯೆಗಳನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಲು ವಿಫಲರಾಗಿದ್ದಾರೆ. ಹಲವು ಸಂದರ್ಭಗಳಲ್ಲಿ ರಾಜ್ಯದ ಹಿತಾಸಕ್ತಿಗಳ ವಿರುದ್ಧವಾಗಿ ಅವರು ನಿಲುವು ತೆಗೆದುಕೊಂಡಿದ್ದಾರೆ" ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇತ್ತೀಚೆಗೆ ಟೀಕಿಸಿದ್ದರು.
ಈ ಟೀಕೆಗೆ ಪ್ರತಿಕ್ರಿಯಿಸಿದ್ದ ಕೆ.ಸಿ.ವೇಣುಗೋಪಾಲ್, "ಯುಡಿಎಫ್ ಸಂಸದರ ಕಾರ್ಯವೈಖರಿ ಕುರಿತು ಮುಕ್ತ ಚರ್ಚೆಗೆ ಪಿಣರಾಯಿ ವಿಜಯನ್ ಸಿದ್ಧರಿದ್ದಾರೆಯೇ?" ಎಂದು ಪ್ರಶ್ನಿಸಿದ್ದರು.
ಈ ಕುರಿತು ಪ್ರಶ್ನಿಸಿದ ಸುದ್ದಿಗಾರರೊಂದಿಗೆ ಮಾತನಾಡಿದ ಪಿಣರಾಯಿ ವಿಜಯನ್, "ಯುಡಿಎಫ್ ಸಂಸದರ ಕಾರ್ಯಕ್ಷಮತೆಯ ಬಗ್ಗೆ ವೇಣುಗೋಪಾಲ್ ಅವರಿಗೆ ತಿಳಿದಿಲ್ಲವೆ? ಹಾಗಾದರೆ, ಖಂಡಿತ ನಾನು ಅವರೊಂದಿಗೆ ಮುಕ್ತ ಚರ್ಚೆಗೆ ಸಿದ್ಧನಿದ್ದದೇನೆ. ಅವರೇ ಸಮಯ ಮತ್ತು ಸ್ಥಳವನ್ನು ನಿಗದಿಗೊಳಿಸಲಿ" ಎಂದು ಸವಾಲು ಹಾಕಿದ್ದಾರೆ.
"ಕೇರಳದ ವಿರುದ್ಧ ನಿಲುವು ತೆಗೆದುಕೊಳ್ಳುವಂತೆ ಕಾಂಗ್ರೆಸ್ ನಾಯಕರೇ ಕೇಂದ್ರ ಸರಕಾರಕ್ಕೆ ಸಲಹೆ ನೀಡಿದ್ದಾರೆ. ಇತ್ತೀಚೆಗೆ ಕೇರಳವನ್ನು ಬಡತನ ಮುಕ್ತ ರಾಜ್ಯವೆಂದು ಘೋಷಿಸಿದ ಬಳಿಕ, ವಿರೋಧ ಪಕ್ಷದ ಸಂಸದರು ಸಂಸತ್ತಿನಲ್ಲಿ ಕೆಲವು ಪ್ರಶ್ನೆಗಳನ್ನು ಎತ್ತುವ ಮೂಲಕ ಅಂತ್ಯೋದಯ ಅನ್ನ ಯೋಜನೆಗೆ ಸಂಬಂಧಿಸಿದ ಎಲ್ಲ ಪಡಿತರ ಚೀಟಿಗಳನ್ನು ರದ್ದುಗೊಳಿಸಲು ಪ್ರಯತ್ನಿಸಿದ್ದಾರೆ" ಎಂದೂ ಅವರು ಗಂಭೀರ ಆರೋಪ ಮಾಡಿದ್ದಾರೆ.