"ಪರದೆಯ ಹಿಂದೆ ಏನೋ ನಡೆದಿದೆ": ಅಜಿತ್ ಪವಾರ್ ನಿಧನದ ಕುರಿತು ಅನುಮಾನ ವ್ಯಕ್ತಪಡಿಸಿದ ಶಿವಸೇನಾ ಸಂಸದ ಸಂಜಯ್ ರಾವತ್
ಹೊಸ ದಿಲ್ಲಿ: ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ವಿಮಾನ ದುರಂತದಲ್ಲಿ ಮೃತಪಟ್ಟ ಘಟನೆ ಕುರಿತು ಗಂಭೀರ ಸಂಶಯ ವ್ಯಕ್ತಪಡಿಸಿರುವ ಶಿವಸೇನೆ (ಉದ್ಧವ್ ಬಣ) ಸಂಸದ ಸಂಜಯ್ ರಾವತ್, ತೆರೆಯ ಹಿಂದೆ ಏನೋ ಆಗಿದೆ. ಈ ಕುರಿತು ಸೂಕ್ತ ತನಿಖೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.
ನ್ಯಾ.ಲೋಯಾ ಹಾಗೂ ಅಜಿತ್ ಪವಾರ್ ಸಾವಿನ ನಡುವೆ ಸಾಮ್ಯತೆಯನ್ನು ಪ್ರತಿಪಾದಿಸಿದ ಸಂಜಯ್ ರಾವತ್, “ಯಾರಾದರೂ ಇಲ್ಲಿ ಏನಾದರೂ ಮಾಡಿದ್ದಾರೆಯೆ?” ಎಂದು ಅಪಘಾತದ ಸುತ್ತಲಿನ ಸನ್ನಿವೇಶಗಳ ಕುರಿತು ಅವರು ಪ್ರಶ್ನೆಸಿದ್ದಾರೆ.
ANI ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ಸಂಜಯ್ ರಾವತ್, “ಅಜಿತ್ ಪವಾರ್ ರಾಜಕೀಯವನ್ನು ಗಮನಿಸಿದರೆ ಪ್ರಶ್ನೆಗಳು ಮೂಡುವುದು ಸಹಜ. ಮಹಾರಾಷ್ಟ್ರದ ಉನ್ನತ ನಾಯಕರಾದ ಅಜಿತ್ ಪವಾರ್ ಅವರು ವಿಮಾನ ಅಪಘಾತದಲ್ಲಿ ಮೃತಪಟ್ಟ ರೀತಿಯನ್ನು ತನಿಖೆಗೊಳಪಡಿಸಬೇಕು. ಇದರಲ್ಲೇನೋ ಸಂಶಯಾಸ್ಪದ ಸಂಗತಿ ಇದೆ ಎಂದು ನನಗನ್ನಿಸುತ್ತಿದೆ” ಎಂದು ಹೇಳಿದ್ದಾರೆ.
“ಈ ಪ್ರಶ್ನೆಗಳನ್ನು ಅಜಿತ್ ಪವಾರ್ ಅವರ ಪಕ್ಷವೂ ಎತ್ತಿದೆ. ಅವರ ನಿಧನವು ಸಂಶಯಾಸ್ಪದವಾಗಿದೆ. ತೆರೆಯ ಹಿಂದೆ ಏನೋ ಆಗಿದೆ” ಎಂದು ಅವರು ಶಂಕೆ ವ್ಯಕ್ತಪಡಿಸಿದ್ದಾರೆ.