Epstein files ನಲ್ಲಿ ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿ ಹೆಸರು ಬಹಿರಂಗ
ಈಮೇಲ್ ವಿನಿಮಯಗಳು, ಸಭೆಗಳ ವಿವರ ಪ್ರಕಟ; ‘ಡಿಜಿಟಲ್ ಇಂಡಿಯಾ ಪರವಾಗಿ ವಾದ ಮಂಡಿಸಿದ್ದೆ’ ಎಂದ ಮೋದಿ ಸಂಪುಟ ಸಚಿವ
Photo| PTI
ಹೊಸದಿಲ್ಲಿ, ಫೆ. 2: ಅಮೆರಿಕದ ನ್ಯಾಯ ಇಲಾಖೆ ಇತ್ತೀಚೆಗೆ ಸಾರ್ವಜನಿಕಗೊಳಿಸಿದ ಜೆಫ್ರಿ ಎಪ್ಸ್ಟೀನ್ ಸಂಬಂಧಿತ ಹೊಸ ದಾಖಲೆಗಳಲ್ಲಿ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ಹಾಗೂ ಶಿಕ್ಷೆಗೆ ಒಳಗಾದ ಅಮೆರಿಕನ್ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್ ನಡುವಿನ ಹಲವು ಈಮೇಲ್ ವಿನಿಮಯಗಳು ಮತ್ತು ನೇರ ಭೇಟಿಯ ವಿವರಗಳು ಬಹಿರಂಗಗೊಂಡಿವೆ.
ಈ ದಾಖಲೆಗಳು, ಕಳೆದ ನವೆಂಬರ್ ನಲ್ಲಿ ಬಿಜೆಪಿ ನೀಡಿದ್ದ “ಕೇವಲ ಹೆಸರು ಉಲ್ಲೇಖ” ಎಂಬ ಹೇಳಿಕೆಗೆ ಮೀರಿದ ಮಟ್ಟದ ಸಂಪರ್ಕವಿತ್ತು ಎಂಬ ಸೂಚನೆ ನೀಡುತ್ತಿವೆ.
ಜನವರಿ 30ರಂದು ಬಿಡುಗಡೆಗೊಂಡ ಸಾವಿರಾರು ಪುಟಗಳ ದಾಖಲೆಗಳಲ್ಲಿ 2014ರ ಜೂನ್ ನಿಂದ 2017ರ ಜೂನ್ ವರೆಗೆ ನಡೆದ ಈಮೇಲ್ ಸಂವಹನಗಳ ಉಲ್ಲೇಖವಿದೆ. ಈ ಅವಧಿಯಲ್ಲಿ ನ್ಯೂಯಾರ್ಕ್ ನ ಎಪ್ಸ್ಟೀನ್ ನಿವಾಸದಲ್ಲಿ ಕನಿಷ್ಠ ಮೂರು ಬಾರಿ ಸಚಿವ ಹರ್ದೀಪ್ ಸಿಂಗ್ ಪುರಿ ಭೇಟಿಯಾಗಿರುವುದು ದಾಖಲೆಗಳಿಂದ ತಿಳಿದುಬಂದಿದೆ. ಜೊತೆಗೆ ಸಿಲಿಕಾನ್ ವ್ಯಾಲಿಯ ಹೂಡಿಕೆದಾರರೊಂದಿಗೆ ಪುರಿಯನ್ನು ಸಂಪರ್ಕಿಸಲು ಎಪ್ಸ್ಟೀನ್ ಪ್ರಯತ್ನಿಸಿದ್ದ ಸಂಗತಿಯೂ ದಾಖಲೆಗಳಲ್ಲಿ ಕಾಣಿಸಿಕೊಂಡಿದೆ.
ಆ ಸಮಯದಲ್ಲಿ ಪುರಿ ಯಾವುದೇ ಸಾರ್ವಜನಿಕ ಹುದ್ದೆಯಲ್ಲಿ ಇರಲಿಲ್ಲ. ವೃತ್ತಿಯಲ್ಲಿ ರಾಜತಾಂತ್ರಿಕರಾಗಿದ್ದ ಅವರು ಭಾರತೀಯ ವಿದೇಶಾಂಗ ಸೇವೆಯಿಂದ ನಿವೃತ್ತಿಯಾದ ಬಳಿಕ ನ್ಯೂಯಾರ್ಕ್ನ ಚಿಂತಕರ ಚಾವಡಿಯಾದ ಇಂಟರ್ನ್ಯಾಷನಲ್ ಪೀಸ್ ಇನ್ಸ್ಟಿಟ್ಯೂಟ್ ಜೊತೆ ಸಂಪರ್ಕ ಹೊಂದಿದ್ದರು. 2014ರಲ್ಲಿ ಬಿಜೆಪಿಗೆ ಸೇರ್ಪಡೆಯಾಗಿ, 2017ರ ಸೆಪ್ಟೆಂಬರ್ ನಲ್ಲಿ ನರೇಂದ್ರ ಮೋದಿ ಸರಕಾರದಲ್ಲಿ ಅವರು ಸಚಿವರಾದರು. ಪ್ರಸ್ತುತ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆಯನ್ನು ನಿರ್ವಹಿಸುತ್ತಿದ್ದಾರೆ.
ಬಹಿರಂಗವಾಗಿರುವ ಈಮೇಲ್ ಗಳಲ್ಲಿ ಸಭೆಗಳ ವೇಳಾಪಟ್ಟಿ, ದೃಢೀಕರಣ ಹಾಗೂ ಭಾರತದ ಇಂಟರ್ನೆಟ್ ಆರ್ಥಿಕತೆಯಲ್ಲಿ ಹೂಡಿಕೆ ಮತ್ತು ವ್ಯಾಪಾರ ಅವಕಾಶಗಳ ಕುರಿತ ಚರ್ಚೆಗಳು ಸೇರಿವೆ. ಈ ಸಂವಹನಗಳು ಎಪ್ಸ್ಟೀನ್ ಭಾಗಿಯಾಗಿದ್ದ ಅಪರಾಧ ಚಟುವಟಿಕೆಗಳಿಗೆ ನೇರ ಸಂಬಂಧ ಹೊಂದಿಲ್ಲವೆಂದು ದಾಖಲೆಗಳು ಸೂಚಿಸುತ್ತವೆ.
ಎಪ್ಸ್ಟೀನ್ 2008ರಲ್ಲಿ ಫ್ಲೋರಿಡಾದಲ್ಲಿ ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ತಪ್ಪೊಪ್ಪಿಕೊಂಡು ಶಿಕ್ಷೆ ಅನುಭವಿಸಿದ್ದ ಹಾಗೂ ಲೈಂಗಿಕ ಅಪರಾಧಿಯಾಗಿದ್ದ. ಆ ನಂತರವೂ ಆತ ಪ್ರಭಾವಿ ವಲಯಗಳಲ್ಲಿ ಸಂಪರ್ಕ ಹೊಂದಿದ್ದ. 2019ರಲ್ಲಿ ಲೈಂಗಿಕ ಕಳ್ಳಸಾಗಣೆ ಆರೋಪದಲ್ಲಿ ಬಂಧನಕ್ಕೊಳಗಾಗಿ ಫೆಡರಲ್ ಕಸ್ಟಡಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ.
ಈಮೇಲ್ ಗಳ ಕುರಿತು ಪ್ರತಿಕ್ರಿಯಿಸಿದ ಸಚಿವ ಹರ್ದೀಪ್ ಸಿಂಗ್ ಪುರಿ, “ಎಂಟು ವರ್ಷಗಳಲ್ಲಿ ಕೇವಲ ಮೂರು ಬಾರಿ, ಅದೂ ಕೆಲಸದ ಉದ್ದೇಶಕ್ಕಾಗಿ ಮಾತ್ರ ಎಪ್ಸ್ಟೀನ್ ಅವರನ್ನು ಭೇಟಿಯಾಗಿದ್ದೇನೆ” ಎಂದು ತಿಳಿಸಿದ್ದಾರೆ. ಆ ವೇಳೆಯಲ್ಲಿ ಅವರ ಅಪರಾಧ ಹಿನ್ನೆಲೆ ತಿಳಿದಿರಲಿಲ್ಲ ಎಂದೂ, ತಮ್ಮ ಸಂವಹನಗಳ ಉದ್ದೇಶ ಭಾರತದಲ್ಲಿನ ಹೂಡಿಕೆ ಮತ್ತು ವ್ಯಾಪಾರ ಅವಕಾಶಗಳನ್ನು ಪ್ರಸ್ತಾಪಿಸುವುದಾಗಿತ್ತು ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸದಾಗಿ ಬಹಿರಂಗಗೊಂಡ ದಾಖಲೆಗಳು, ಕಳೆದ ನವೆಂಬರ್ನಲ್ಲಿ ಹೊರಬಂದ ಸೆಪ್ಟೆಂಬರ್ 2014ರ ಏಕೈಕ ಈಮೇಲ್ಗೆ ಹೋಲಿಸಿದರೆ ಹೆಚ್ಚು ಸಮಗ್ರ ಹಾಗೂ ವಿವರವಾದ ಮಾಹಿತಿಯನ್ನು ಒದಗಿಸುತ್ತವೆ. ಆ ಈಮೇಲ್ನಲ್ಲಿ ಯುಎಸ್ ಹೌಸ್ ಓವರ್ಸೈಟ್ ಸಮಿತಿ ಬಿಡುಗಡೆ ಮಾಡಿದ ಪತ್ರವ್ಯವಹಾರದಲ್ಲಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಸಂದರ್ಭದ ಕಾರ್ಯಕ್ರಮಗಳಿಗೆ ಆಹ್ವಾನಿಸಲ್ಪಟ್ಟ ಅಂತರರಾಷ್ಟ್ರೀಯ ವ್ಯಕ್ತಿಗಳ ಪಟ್ಟಿಯಲ್ಲಿ “ಹರ್ದೀಪ್ ಪುರಿ (ಇಂಡಿಯಾ) (sic)” ಎಂಬ ಉಲ್ಲೇಖ ಕಾಣಿಸಿಕೊಂಡಿತ್ತು.
ಆ ಸಂದರ್ಭದಲ್ಲಿ ಬಿಜೆಪಿ ರಾಷ್ಟ್ರೀಯ ಮಾಹಿತಿ ಮತ್ತು ತಂತ್ರಜ್ಞಾನ ವಿಭಾಗದ ಉಸ್ತುವಾರಿ ಅಮಿತ್ ಮಾಳವೀಯ, ಈ ಉಲ್ಲೇಖವನ್ನು “ಕೇವಲ ಹೆಸರಿನ ಉಲ್ಲೇಖ” ಎಂದು ತಳ್ಳಿಹಾಕಿದ್ದರು. “ದೊಡ್ಡ ಸಮ್ಮೇಳನಗಳ ವೇಳೆ ಹಲವಾರು ಗಣ್ಯರ ಹೆಸರುಗಳನ್ನು ಉಲ್ಲೇಖಿಸುವುದು ಸಾಮಾನ್ಯ; ಎಂದು ಹೇಳುವುದರಿಂದ ಅವರು ನಿಜವಾಗಿಯೂ ಭೇಟಿ ಮಾಡಿದ್ದಾರೆ ಎನ್ನುವುದಕ್ಕೆ ಅರ್ಥವಿಲ್ಲ” ಎಂದು ಅವರು ಸ್ಪಷ್ಟಪಡಿಸಿದ್ದರು. ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ ಕೂಡ ಇದನ್ನು “ಯಾವುದೇ ವಾಸ್ತವಾಧಾರವಿಲ್ಲದ ಆರೋಪ” ಎಂದು ವಿವರಿಸಿದ್ದರು.
ಎಪ್ಸ್ಟೀನ್ ಅವರು ಪುರಿ ಅವರ ಹೆಸರನ್ನು ತಪ್ಪಾಗಿ ಬರೆದಿರುವುದು, ಅವರ ನಡುವೆ ನೈಜ ಸಂಬಂಧವಿದ್ದುದಕ್ಕೆ ಯಾವುದೇ ಸ್ಪಷ್ಟ ಸಾಕ್ಷ್ಯವಿಲ್ಲ ಎಂಬುದಕ್ಕೆ ಸೂಚನೆ ಎಂದು ಪಕ್ಷ ವಾದಿಸಿತ್ತು. “ಹರ್ದೀಪ್ ಪುರಿ 2013ರವರೆಗೆ ವಿಶ್ವಸಂಸ್ಥೆಯಲ್ಲಿ ಭಾರತದ ಸ್ಥಾಯಿ ಪ್ರತಿನಿಧಿಯಾಗಿದ್ದ ಹಿನ್ನೆಲೆ ಅವರ ಹೆಸರು ಉಲ್ಲೇಖಗೊಂಡಿರಬಹುದು” ಎಂದು ಕಾಂಗ್ರೆಸ್ ನಾಯಕರು ಎತ್ತಿದ ಪ್ರಶ್ನೆಗಳಿಗೆ ಉತ್ತರವಾಗಿ ಭಂಡಾರಿ ಆ ರೀತಿ ಹೇಳಿದ್ದರು.
ಇತ್ತೀಚೆಗೆ ಬಹಿರಂಗಗೊಂಡ ದಾಖಲೆಗಳ ಆಧಾರದ ಮೇಲೆ, ಈ ಈಮೇಲ್ ಸಂವಹನಗಳ ಆರಂಭ ಜೂನ್ 2014ರಲ್ಲಿ ನಡೆದಿರುವುದು ತಿಳಿದುಬಂದಿದೆ. ಜಿಫ್ರಿ ಎಪ್ಸ್ಟೀನ್ ಅವರು LinkedIn ಸಹ ಸಂಸ್ಥಾಪಕ ರೀಡ್ ಹಾಫ್ಮನ್ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂಬ ಮಾಹಿತಿಯನ್ನು ಹರ್ದೀಪ್ ಪುರಿಗೆ ಕಳುಹಿಸಿದ್ದರು. ಇದಕ್ಕೆ ಜೂನ್ 23, 2014ರಂದು ಪುರಿ ಪ್ರತಿಕ್ರಿಯಿಸಿ, ರೀಡ್ ಹಾಫ್ಮನ್ ಅವರ ಭೇಟಿಯನ್ನು ಸಹಾಯ ಮಾಡಲು ಅಥವಾ ಸುಗಮಗೊಳಿಸಲು ಸಿದ್ಧನಿದ್ದೇನೆ ಎಂದು ತಿಳಿಸಿದ್ದರು.
ಸೆಪ್ಟೆಂಬರ್ 24, 2014ರಂದು ಎಪ್ಸ್ಟೀನ್ ಅವರು ಹಾಫ್ಮನ್ ಮತ್ತು ಪುರಿ ನಡುವೆ ಪರಿಚಯಾತ್ಮಕ ಈಮೇಲ್ ಕಳುಹಿಸಿ, ಇಬ್ಬರನ್ನೂ ಪರಸ್ಪರ ಪರಿಚಯಿಸಿದರು. ಈ ಪರಿಚಯದ ನಂತರ ಸಿಲಿಕಾನ್ ವ್ಯಾಲಿಯಲ್ಲಿ ಭೇಟಿಯಾಗುವ ಕುರಿತು ಸಂವಹನಗಳು ವೇಗ ಪಡೆದವು ಮತ್ತು ಹಲವು ಸಂದೇಶಗಳ ವಿನಿಮಯ ನಡೆಯಿತು.
ಹಾಫ್ಮನ್ ಅವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದು, ಕ್ಯಾಲಿಫೋರ್ನಿಯಾದಲ್ಲಿ ಅಥವಾ ನಂತರ ಭಾರತದಲ್ಲಿ ಭೇಟಿಯಾಗುವ ಆಸಕ್ತಿ ವ್ಯಕ್ತಪಡಿಸಿದರು. ಅಂತಿಮವಾಗಿ ಅಕ್ಟೋಬರ್ 2014ರ ಆರಂಭದಲ್ಲಿ ಸಿಲಿಕಾನ್ ವ್ಯಾಲಿಯಲ್ಲಿ ಸಭೆ ನಿಗದಿಯಾಯಿತು.
ಭೇಟಿಯ ನಂತರ, ನವೆಂಬರ್ 13, 2014ರಂದು ಪುರಿ ಅವರು ಎಪ್ಸ್ಟೀನ್ ಮತ್ತು ಹಾಫ್ಮನ್ ಅವರಿಗೆ ಭಾರತದ ಬೆಳೆಯುತ್ತಿರುವ ಇಂಟರ್ನೆಟ್ ವಲಯ ಮತ್ತು ಹೂಡಿಕೆ ಅವಕಾಶಗಳ ಕುರಿತು ವಿವರವಾದ ಈಮೇಲ್ ಕಳುಹಿಸಿದರು. ಅಕ್ಟೋಬರ್ 3ರಂದು ಸಿಲಿಕಾನ್ ವ್ಯಾಲಿಯಲ್ಲಿ ಹಾಫ್ಮನ್ ಜೊತೆ ನಡೆದ ಚರ್ಚೆಯನ್ನೂ ಈ ಇಮೇಲ್ನಲ್ಲಿ ಉಲ್ಲೇಖಿಸಲಾಗಿತ್ತು. ಜೊತೆಗೆ, ಹಾಫ್ಮನ್ ಭಾರತಕ್ಕೆ ಶೀಘ್ರದಲ್ಲೇ ಭೇಟಿ ನೀಡಬೇಕು ಎಂಬ ಎಪ್ಸ್ಟೀನ್ ಅಭಿಪ್ರಾಯವನ್ನೂ ದಾಖಲಿಸಿದ್ದರು.
ಆ ಈಮೇಲ್ನಲ್ಲಿ, ಭಾರತದಲ್ಲಿ ಸುಮಾರು 200 ಮಿಲಿಯನ್ ಇಂಟರ್ನೆಟ್ ಬಳಕೆದಾರರಿದ್ದು, ಪ್ರತಿ ತಿಂಗಳು ಸುಮಾರು ಐದು ಮಿಲಿಯನ್ ಬಳಕೆದಾರರು ಸೇರುತ್ತಿದ್ದಾರೆ ಎಂದು ಪುರಿ ವಿವರಿಸಿದ್ದರು. 2018ರೊಳಗೆ ಈ ಸಂಖ್ಯೆ 500 ಮಿಲಿಯನ್ ತಲುಪುವ ನಿರೀಕ್ಷೆಯಿದೆ ಎಂಬ ಅಂದಾಜನ್ನೂ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರ “ಡಿಜಿಟಲ್ ಇಂಡಿಯಾ” ಉಪಕ್ರಮಗಳನ್ನು ಉಲ್ಲೇಖಿಸಿ, LinkedIn ನ 28 ಮಿಲಿಯನ್ ಭಾರತೀಯ ರೆಸ್ಯೂಮ್ಗಳನ್ನು naukri.comನ 38 ಮಿಲಿಯನ್ಗಳೊಂದಿಗೆ ಹೋಲಿಕೆ ಮಾಡಿದ್ದರು.
“ಭಾರತಕ್ಕೆ ಭೇಟಿ ನೀಡುವ ವಿಚಾರವನ್ನು ಮುಂದೂಡಬಾರದು ಎಂಬ ಅಭಿಪ್ರಾಯಕ್ಕೆ ಬೆಂಬಲವಾಗಿ ನನ್ನ ಸಂಶೋಧನೆಗಳನ್ನು ಸಂಕ್ಷಿಪ್ತವಾಗಿ ನೀಡಿದ್ದೇನೆ” ಎಂದು ಪುರಿ ತಮ್ಮ ಈಮೇಲ್ ನಲ್ಲಿ ಉಲ್ಲೇಖಿಸಿದ್ದರು. ಇಂಟರ್ನೆಟ್ ಆಧಾರಿತ ಉದ್ಯಮಶೀಲತೆಯ ಆಲೋಚನೆಗಳಿಗೆ ಹೆಚ್ಚಿನ ಒತ್ತು ನೀಡಬೇಕೆಂಬ ಸಲಹೆಯನ್ನು ಉಲ್ಲೇಖಿಸಿ, “ನಾನು ಸಿದ್ಧನಿದ್ದೇನೆ” ಎಂದು ಅವರು ಸಂದೇಶವನ್ನು ಮುಕ್ತಾಯಗೊಳಿಸಿದ್ದರು.
ಈ ಈಮೇಲ್ ಸಂವಹನಗಳ ಉದ್ದೇಶದ ಕುರಿತು ಪ್ರಶ್ನಿಸಿದಾಗ, ಪುರಿ ಅವರು ಭಾರತೀಯ ವ್ಯಾಪಾರ ಮತ್ತು ಹೂಡಿಕೆ ಅವಕಾಶಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದಲೇ ಈ ಪತ್ರವ್ಯವಹಾರ ನಡೆದಿತ್ತು ಎಂದು ಸ್ಪಷ್ಟಪಡಿಸಿದರು. 2014ರಲ್ಲಿ ಮೋದಿ ನೇತೃತ್ವದ ಸರಕಾರದ ನಾವೀನ್ಯತೆ ಹಾಗೂ “ಮೇಕ್ ಇನ್ ಇಂಡಿಯಾ” ಕಾರ್ಯಕ್ರಮಗಳ ಕುರಿತು ಹಂಚಿಕೊಂಡಿದ್ದು ತಮ್ಮ ವೈಯಕ್ತಿಕ ವಿಶ್ಲೇಷಣೆ ಮಾತ್ರವೆಂದು ಅವರು ತಿಳಿಸಿದರು.
ಪುರಿ 2015ರ ಫೆಬ್ರವರಿ 4, 2016ರ ಜನವರಿ 6 ಹಾಗೂ 2017ರ ಮೇ 19ರಂದು ನ್ಯೂಯಾರ್ಕ್ನ ಎಪ್ಸ್ಟೀನ್ ನಿವಾಸದಲ್ಲಿ ಸಭೆ ನಡೆಸಿದ್ದರು. ಈ ಸಭೆಗಳು ಎಪ್ಸ್ಟೀನ್ ಸಹಾಯಕ ಲೆಸ್ಲಿ ಗ್ರಾಫ್ ಮೂಲಕ ನಿಗದಿಪಡಿಸಲ್ಪಟ್ಟಿದ್ದವು. 2015ರ ಜನವರಿ 9ರಂದು ನಿಗದಿಯಾಗಿದ್ದ ಮತ್ತೊಂದು ಸಭೆ ರದ್ದುಗೊಂಡಿತ್ತು.
2014ರ ಡಿಸೆಂಬರ್ನಲ್ಲಿ ಪುರಿ ಬರೆದ ಈಮೇಲ್ನಲ್ಲಿ “ನೀವು ನಿಮ್ಮ ವಿಲಕ್ಷಣ ದ್ವೀಪದಿಂದ ಹಿಂತಿರುಗಿದಾಗ ತಿಳಿಸಿ” ಎಂಬ ಉಲ್ಲೇಖವೂ ದಾಖಲೆಗಳಲ್ಲಿ ಕಂಡುಬಂದಿದೆ. ಇದಕ್ಕೆ ಪ್ರತಿಕ್ರಿಯಿಸಿದ ಪುರಿ, ತಾವು ಆ ದ್ವೀಪವನ್ನು ಭೇಟಿ ಮಾಡಿಲ್ಲ; ವರ್ಣನಾತ್ಮಕವಾಗಿ ಆ ಪದ ಬಳಸಿದ್ದೆ ಎಂದು ಹೇಳಿದ್ದಾರೆ.
ಪುರಿ ಮತ್ತು ಎಪ್ಸ್ಟೀನ್ ನಡುವಿನ ಕೊನೆಯ ಈಮೇಲ್ 2017ರ ಜೂನ್ನಲ್ಲಿ ನಡೆದಿತ್ತು. ಮೋದಿ ಸರಕಾರಕ್ಕೆ ಸೇರುವ ಮೊದಲು ನಡೆದ ಸಭೆಗಳೇ ಇವು ಎಂದು ಪುರಿ ಒತ್ತಿ ಹೇಳಿದ್ದು, ನಂತರ ಯಾವುದೇ ಸಂಪರ್ಕ ಇರಲಿಲ್ಲ ಎಂದೂ ತಿಳಿಸಿದ್ದಾರೆ. ಈ ಸಂಪರ್ಕ ಇಂಟರ್ನ್ಯಾಷನಲ್ ಪೀಸ್ ಇನ್ಸ್ಟಿಟ್ಯೂಟ್ ಮುಖಾಂತರ ಸಂಭವಿಸಿತು ಎಂದೂ ಹೇಳಿದ್ದಾರೆ.
ನ್ಯಾಯ ಇಲಾಖೆಯ ದಾಖಲೆಗಳಲ್ಲಿ ಯುಕೆಯ ಮಾಜಿ ಪ್ರಧಾನಿ ಗೋರ್ಡನ್ ಬ್ರೌನ್, ಸಿಐಎ ಮಾಜಿ ನಿರ್ದೇಶಕ ಬಿಲ್ ಬರ್ನ್ಸ್, ಅಮೆರಿಕದ ಮಾಜಿ ಖಜಾನೆ ಕಾರ್ಯದರ್ಶಿ ಲ್ಯಾರಿ ಸಮ್ಮರ್ಸ್ ಸೇರಿದಂತೆ ಹಲವು ಜಾಗತಿಕ ನಾಯಕರ ಹೆಸರುಗಳೂ ಉಲ್ಲೇಖಗೊಂಡಿವೆ. ಹರ್ದೀಪ್ ಸಿಂಗ್ ಪುರಿ 2009ರಿಂದ 2013ರವರೆಗೆ ವಿಶ್ವಸಂಸ್ಥೆಯಲ್ಲಿ ಭಾರತದ ಖಾಯಂ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದರು.
ಸೌಜನ್ಯ: thewire.in