×
Ad

ಕರ್ನಾಟಕ-ತಮಿಳುನಾಡು ನಡುವಿನ ಪೆನ್ನೈಯಾರ್ ನದಿ ವಿವಾದ | ನ್ಯಾಯಮಂಡಳಿ ರಚಿಸಲು ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸೂಚನೆ

Update: 2026-02-02 12:34 IST

ಸುಪ್ರೀಂ ಕೋರ್ಟ್‌ | Photo Credit : PTI 

ಹೊಸದಿಲ್ಲಿ, ಫೆ. 2: ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳ ನಡುವೆ ಮುಂದುವರಿದಿರುವ ಪೆನ್ನೈಯಾರ್ ನದಿ ನೀರಿನ ಹಂಚಿಕೆ ವಿವಾದವನ್ನು ಇತ್ಯರ್ಥಪಡಿಸಲು ಅಂತರರಾಜ್ಯ ಜಲ ವಿವಾದ ನ್ಯಾಯಮಂಡಳಿಯನ್ನು ರಚಿಸುವಂತೆ ಸುಪ್ರೀಂ ಕೋರ್ಟ್ ಕೇಂದ್ರ ಸರಕಾರಕ್ಕೆ ಸೋಮವಾರ ಸೂಚಿಸಿದೆ.

ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಪೀಠವು, ಒಂದು ತಿಂಗಳೊಳಗೆ ಅಧಿಸೂಚನೆ ಹೊರಡಿಸಿ ನ್ಯಾಯಮಂಡಳಿ ರಚಿಸಬೇಕೆಂದು ನಿರ್ದೇಶಿಸಿದೆ. ತಮಿಳುನಾಡು ಸಲ್ಲಿಸಿರುವ ದೂರನ್ನು ನ್ಯಾಯಮಂಡಳಿಯ ಮುಂದೆ ಪರಿಗಣನೆಗೆ ತೆಗೆದುಕೊಳ್ಳಬಹುದು ಎಂದು ಪೀಠ ಹೇಳಿದೆ.

ಪೆನ್ನೈಯಾರ್ ನದಿಗೆ ಸಂಬಂಧಿಸಿದ ಅಣೆಕಟ್ಟುಗಳು ಹಾಗೂ ನೀರಿನ ತಿರುವು ರಚನೆಗಳ ವಿಚಾರವಾಗಿ ಕರ್ನಾಟಕ ಕೈಗೊಂಡ ಕ್ರಮಗಳಿಂದ ತಮಿಳುನಾಡಿನ ಹಿತಾಸಕ್ತಿಗೆ ಧಕ್ಕೆಯಾಗುತ್ತಿದೆ ಎಂದು ಆರೋಪಿಸಿ 2018ರಲ್ಲಿ ತಮಿಳುನಾಡು ಸರಕಾರವು ಸುಪ್ರೀಂ ಕೋರ್ಟ್‌ ಮೊರೆ ಹೋಗಿತ್ತು. ನದಿ ನೀರನ್ನು ತಮಿಳುನಾಡಿನ ಜನರಿಗೆ ಹಾನಿಯಾಗುವ ರೀತಿಯಲ್ಲಿ ಬಳಸುವ ಹಕ್ಕು ಕರ್ನಾಟಕಕ್ಕೆ ಇಲ್ಲ ಎಂದು ವಾದಿಸಿತ್ತು.

ಅಂತರರಾಜ್ಯ ನದಿಗಳ ನೀರಿನ ಹರಿವು ರಾಷ್ಟ್ರೀಯ ಆಸ್ತಿಯಾಗಿದ್ದು, ಯಾವುದೇ ಒಂದು ರಾಜ್ಯವೂ ಅದರ ಮೇಲೆ ವಿಶೇಷ ಮಾಲೀಕತ್ವ ಹಕ್ಕು ಹೊಂದಲು ಸಾಧ್ಯವಿಲ್ಲ ಎಂದು ತಮಿಳುನಾಡು ನ್ಯಾಯಾಲಯದ ಗಮನಕ್ಕೆ ತಂದಿತ್ತು. 1892ರ ಒಪ್ಪಂದವು ಸಂಬಂಧಿತ ರಾಜ್ಯಗಳಿಗೆ ಮಾನ್ಯ ಹಾಗೂ ಬದ್ಧವಾಗಿದ್ದು, ನದಿಗೆ ನೇರವಾಗಿ ಅಥವಾ ಪರೋಕ್ಷವಾಗಿ ನೀರು ಒದಗಿಸುವ ಹೊಳೆಗಳು, ಉಪನದಿಗಳು ಸೇರಿದಂತೆ ಇತರ ಜಲಮಾರ್ಗಗಳನ್ನೂ ಅದರ ವ್ಯಾಪ್ತಿಗೆ ಒಳಪಡಿಸುತ್ತದೆ ಎಂದು ಹೇಳಿತ್ತು.

ಕರ್ನಾಟಕ ಮತ್ತು ತಮಿಳುನಾಡು ಎರಡೂ ರಾಜ್ಯಗಳಲ್ಲಿ ಜಲಾನಯನ ಪ್ರದೇಶ ಹೊಂದಿರುವ ಪ್ರಮುಖ ಉಪನದಿ ಮಾರ್ಕಂಡೇಯ ನದಿಯನ್ನು ಒಪ್ಪಂದದ ವ್ಯಾಪ್ತಿಯಿಂದ ಹೊರಗಿಡಲು ಸಾಧ್ಯವಿಲ್ಲ. ಆದ್ದರಿಂದ ಮಾರ್ಕಂಡೇಯ ನದಿಯ ಹರಿವನ್ನು ತಡೆಯುವ ಯಾವುದೇ ಹೊಸ ನಿರ್ಮಾಣ ಕಾರ್ಯಗಳು 1892ರ ಒಪ್ಪಂದದ ನಿಯಂತ್ರಣಕ್ಕೆ ಒಳಪಡುತ್ತವೆ ಎಂದು ತಮಿಳುನಾಡು ವಾದಿಸಿತ್ತು.

ಮಾರ್ಕಂಡೇಯ ನದಿಗೆ ಅಡ್ಡಲಾಗಿ ತಿರುವು ರಚನೆಗಳು ಅಥವಾ ದೊಡ್ಡ ಅಣೆಕಟ್ಟುಗಳನ್ನು ನಿರ್ಮಿಸಲು ಕರ್ನಾಟಕಕ್ಕೆ ಸ್ವಾತಂತ್ರ್ಯ ಇದೆ ಎನ್ನುವ ನಿಲುವು ಅಸಂಗತ ಎಂದು ತಮಿಳುನಾಡು ಸುಪ್ರೀಂ ಕೋರ್ಟ್ ಮುಂದೆ ಅಭಿಪ್ರಾಯಪಟ್ಟಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News