ಚೀನಾ ಸಾಲದ ಆ್ಯಪ್ ಹಗರಣ | ನಿಷ್ಕ್ರಿಯ ಖಾತೆಗಳ ಮೂಲಕ ಅಕ್ರಮವಾಗಿ 718 ಕೋಟಿ ರೂ. ವರ್ಗಾಯಿಸಲು ನೆರವು ನೀಡಿದ್ದ ಇಬ್ಬರು ಕೇರಳೀಯರು!
ಸಾಂದರ್ಭಿಕ ಚಿತ್ರ | PC : PTI
ಕೊಚ್ಚಿ: ಚೀನಾ ಸಾಲದ ಆ್ಯಪ್ ಗಳ ಅಕ್ರಮ ಹಣ ವರ್ಗಾವಣೆ ಕುರಿತು ತನಿಖೆ ಕೈಗೊಂಡಿದ್ದ ಜಾರಿ ನಿರ್ದೇಶನಾಲಯ(ಈಡಿ)ವು, 2023ರವರೆಗೆ 479 ನಿಷ್ಕ್ರಿಯ ಬ್ಯಾಂಕ್ ಖಾತೆಗಳ ಮೂಲಕ 718 ಕೋಟಿ ರೂ. ಮೊತ್ತದ ವಹಿವಾಟುಗಳಿಗೆ ಇಬ್ಬರು ಕೇರಳ ವ್ಯಕ್ತಿಗಳು ನೆರವು ನೀಡಿರುವುದನ್ನು ಬಯಲಿಗೆಳೆದಿದೆ. ಈ ಪೈಕಿ ಗಮನಾರ್ಹ ಪ್ರಮಾಣದ ಮೊತ್ತವನ್ನು ಕ್ರಿಪ್ಟೊಕರೆನ್ಸಿ ಮೂಲಕ ಚೀನಾಗೆ ವರ್ಗಾಯಿಸಲಾಗಿತ್ತು ಎಂದು newindianexpress.com ವರದಿ ಮಾಡಿದೆ.
ಬಂಧಿತ ಆರೋಪಿಗಳಾದ ಕೋಯಿಕ್ಕೋಡ್ ನ ಅಯಂಚೇರಿ ನಿವಾಸಿ ಸಯೀದ್ ಮುಹಮ್ಮದ್ ಎಂ.ಎಂ. (36) ಹಾಗೂ ಎರ್ನಾಕುಲಂನ ಫೋರ್ಟ್ ಕೊಚ್ಚಿ ನಿವಾಸಿ ವರ್ಗೀಸ್ ಟಿ.ಜಿ (35) ಅನ್ನು ಶುಕ್ರವಾರ ಜಾರಿ ನಿರ್ದೇಶನಾಲಯ(ಈಡಿ)ದ ವಿಶೇಷ ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಯಿತು. ನಂತರ, ನ್ಯಾಯಾಲಯ ಅವರಿಬ್ಬರನ್ನೂ ನಾಲ್ಕು ದಿನಗಳ ಕಾಲ ಜಾರಿ ನಿರ್ದೇಶನಾಲಯ(ಈಡಿ)ದ ವಶಕ್ಕೆ ಒಪ್ಪಿಸಿತು.
ಇದಕ್ಕೂ ಮುನ್ನ, ಚೀನಾ ಮೂಲದ ವಂಚಕ ಸಾಲದ ಆ್ಯಪ್ ಗಳಿಗಾಗಿ ನಿರ್ವಹಿಸಲಾಗುತ್ತಿದ್ದ ಶೆಲ್ ಕಂಪನಿಗಳ ಕುರಿತು ತನಿಖೆ ನಡೆಸಿದ್ದ ಜಾರಿ ನಿರ್ದೇಶನಾಲಯ(ಈಡಿ), ಅವುಗಳನ್ನು ಕಾರ್ಯಾಚರಿಸುತ್ತಿದ್ದ ತಮಿಳುನಾಡಿನ ನಾಲ್ವರನ್ನು ಬಂಧಿಸಿತ್ತು.
ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳ ಪ್ರಕಾರ, ಚೀನಾದ ಸಾಲ ನಿರ್ವಾಹಕರಿಗಾಗಿ ಸಯೀದ್ 289 ನಿಷ್ಕ್ರಿಯ ಖಾತೆಗಳನ್ನು ಹೊಂದಿಸಿದ್ದ. ಈ ಖಾತೆಗಳ ಮೂಲಕ 377 ಕೋಟಿ ರೂ. ಮೌಲ್ಯದ ವಹಿವಾಟುಗಳು ನಡೆದಿದ್ದವು. ಅದಕ್ಕಾಗಿ ಆತ 2 ಕೋಟಿ ರೂ. ಸಂಭಾವನೆಯನ್ನು ಪಡೆದಿದ್ದ. ಅದೇ ರೀತಿ, ವರ್ಗೀಸ್ 190 ನಿಷ್ಕ್ರಿಯ ಖಾತೆಗಳನ್ನು ಹೊಂದಿಸಿದ್ದ. ಈ ಖಾತೆಗಳ ಮೂಲಕ 2023ರವರೆಗೆ 341 ಕೋಟಿ ರೂ. ಮೊತ್ತದ ವಹಿವಾಟುಗಳು ನಡೆದಿದ್ದವು. ಅದಕ್ಕಾಗಿ ಆತನಿಗೆ 70 ಲಕ್ಷ ರೂ. ಪಾವತಿಸಲಾಗಿತ್ತು ಎಂದು ಹೇಳಲಾಗಿದೆ.
“ಬ್ಯಾಂಕ್ ಖಾತೆದಾರನ ಹೆಸರು, ಎಟಿಎಂ ಕಾರ್ಡ್ ನಂಬರ್ ಹಾಗೂ ಎಟಿಎಂ ಪಿನ್ ಸೇರಿದಂತೆ ನಿಷ್ಕ್ರಿಯ ಬ್ಯಾಂಕ್ ಖಾತೆಯ ವಿವರಗಳನ್ನು ಲೀಮಾ ಹಾಗೂ ಏಂಜೆಲ್ ಎಂಬ ಇಬ್ಬರು ವ್ಯಕ್ತಿಗಳಿಗೆ ವಾಟ್ಸ್ ಆ್ಯಪ್ ಮೂಲಕ ರವಾನಿಸಲಾಗಿತ್ತು. ನಿಷ್ಕ್ರಿಯ ಖಾತೆಗಳನ್ನು ಹೊಂದಿಸಿದ್ದಕ್ಕಾಗಿ 2 ಕೋಟಿ ರೂ. ಸಂಭಾವನೆ ಪಡೆದಿದ್ದ ಸಯೀದ್, ಈ ವಂಚಕ ಚಟುವಟಿಕೆಗಳಿಗಾಗಿ ತಮ್ಮ ಬ್ಯಾಂಕ್ ಖಾತೆಗಳ ವಿವರಗಳನ್ನು ನೀಡಿದ್ದ ಜನರಿಗೆ 30 ಲಕ್ಷ ರೂ. ಹಂಚಿದ್ದ” ಎಂದು ಮೂಲಗಳು ತಿಳಿಸಿವೆ.
ಅಪರಾಧದ ಕೃತ್ಯಗಳನ್ನು ಸಯೀದ್ ಹಾಗೂ ವರ್ಗೀಸ್ ಹೊಂದಿಸಿದ್ದ ಬ್ಯಾಂಕ್ ಖಾತೆಗಳ ಮೂಲಕ ನಡೆಸಲಾಗಿತ್ತು ಎಂಬ ಸಂಗತಿ ಜಾರಿ ನಿರ್ದೇಶನಾಲಯ(ಈಡಿ)ದ ತನಿಖೆಯಲ್ಲಿ ಬಯಲಾಗಿದೆ.
“ಈ ಮೊತ್ತಗಳ ಒಂದು ಭಾಗವನ್ನು ಅಂತರ್ ಗಡಿ ರವಾನೆಗಾಗಿ ವರ್ಚುಯಲ್ ಡಿಜಿಟಲ್ ಸ್ವತ್ತುಗಳು ಹಾಗೂ ಕ್ರಿಪ್ಟೊಕರೆನ್ಸಿಗಳನ್ನು ಖರೀದಿಸಲೆಂದು WazirX ಎಂದೂ ಕರೆಯಲಾಗುವ ಕ್ರಿಪ್ಟೊಕರೆನ್ಸಿ ವೇದಿಕೆಯಾದ ಝಾನ್ಮೈ ಲ್ಯಾಬ್ಸ್ ಪ್ರೈವೇಟ್ ಲಿಮಿಟೆಡ್ ಗೆ ಸಂಬಂಧಿಸಿದ ಖಾತೆಗಳಿಗೆ ವರ್ಗಾಯಿಸಲಾಗಿತ್ತು. ಅಮೆರಿಕ ಡಾಲರ್ ಅನ್ನು ಪ್ರತಿನಿಧಿಸುವ ಕ್ರಿಪ್ಟೊಕರೆನ್ಸಿಯಾದ USDT ಅನ್ನು WazirX ವೇದಿಕೆಯಲ್ಲಿ ಖರೀದಿಸಲಾಗಿತ್ತು. ನಂತರ, ಅದನ್ನು ನಾಲ್ಕು ವಿದೇಶಿ ವ್ಯಾಲೆಟ್ ಗಳಿಗೆ ವರ್ಗಾಯಿಸುವುದಕ್ಕೂ ಮುನ್ನ, ಅದನ್ನು ಈಥರ್ ಕ್ರಿಪ್ಟೊಕರೆನ್ಸಿಯಾಗಿ ಪರಿವರ್ತಿಸಲಾಗಿತ್ತು. ಈ ಕಾರ್ಯವಿಧಾನವನ್ನು ಅನುಸರಿಸಿ ಸಯೀದ್ ಹಾಗೂ ವರ್ಗೀಸ್ ರೊಂದಿಗೆ ಸಕ್ರಿಯ ಸಂಪರ್ಕದಲ್ಲಿದ್ದ ವಂಚಕರು, ಅವರು ಒದಗಿಸಿದ್ದ ನಿಷ್ಕ್ರಿಯ ಖಾತೆಗಳೊಂದಿಗೆ ಸಂಪರ್ಕ ಹೊಂದಿದ್ದ 26 ಬ್ಯಾಂಕ್ ಗಳ ಮೂಲಕ 115.68 ಕೋಟಿ ರೂ. ಮೊತ್ತವನ್ನು ರವಾನಿಸಿದ್ದರು” ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ಮಾಹಿತಿಯಲ್ಲಿ ಜಾರಿ ನಿರ್ದೇಶನಾಲಯ(ಈಡಿ) ಉಲ್ಲೇಖಿಸಿದೆ.
ಅಕ್ರಮವಾಗಿ ವರ್ಗಾಯಿಸಲಾಗಿದ್ದ ಹಣದ ಪೈಕಿ ಒಂದು ಭಾಗವನ್ನು ಕ್ಸೋಡಸ್ ಸಲ್ಯೂಷನ್ಸ್, ವಿಕ್ಕಿ ವೆಂಕಟರ್ ಟೆಕ್ನಾಲಜಿ ಹಾಗೂ ವಿಕ್ರಾಹ್ ಟ್ರೇಡಿಂಗ್ ಎಂಟರ್ ಪ್ರೈಸ್ ಸೇರಿದಂತೆ ಶೆಲ್ ಕಂಪನಿಗಳ ಮೂಲಕ ವರ್ಗಾಯಿಸಿರುವುದನ್ನೂ ಜಾರಿ ನಿರ್ದೇಶನಾಲಯ(ಈಡಿ) ಪತ್ತೆ ಹಚ್ಚಿದೆ. ನಕಲಿ ಇನ್ವಾಯ್ಸ್ ಗಳನ್ನು ಬಳಸಿ ಸಾಫ್ಟ್ ವೇರ್ ಹಾಗೂ ಡಿಜಿಟಲ್ ಸಾಮಗ್ರಿಗಳನ್ನು ಆಮದು ಮಾಡಿಕೊಳ್ಳುವ ಸೋಗಿನಲ್ಲಿ ಸಾಮಾನ್ಯ ಬ್ಯಾಂಕ್ ಸಂಪರ್ಕಗಳ ಮೂಲಕ ನಿಧಿಗಳನ್ನು ವಿದೇಶಗಳಿಗೆ ರವಾನಿಸಲಾಗಿದೆ.
ಇದಕ್ಕೂ ಮುನ್ನ, ಚೆನ್ನೈನ ಜವಾಹರ್ ನಗರದ ಕ್ಸೋಡಸ್ ಸಲ್ಯೂಷನ್ಸ್ ನಿರ್ದೇಶಕ ಡೇನಿಯಲ್ ಶಿವಕುಮಾರ್ (37), ಕಾಂಚೀಪುರಂನ ಮುದಿಚೂರ್ ನ ಫ್ಯೂಚರ್ ವಿಷನ್ ಮೀಡಿಯಾ ಸಲ್ಯೂಷನ್ಸ್ ನಿರ್ದೇಶಕ ಕತೀರವನ್ ರವಿ (42), ಕಾಂಚೀಪುರಂನ ಅಲಂದೂರ್ ನ ಗ್ಲೋಬಲ್ ಎಕ್ಸ್ ಪೊಸಿಷನ್ ಆ್ಯಂಡ್ ಇನ್ಪೋಮೀಡಿಯಾ ಸಲ್ಯೂಷನ್ ಮಾಲಕ ಆ್ಯಂಟೊ ಪಾಲ್ ಪ್ರಕಾಶ್ (32) ಹಾಗೂ ಕಾಂಚೀಪುರಂನ ಅಲಂದೂರ್ ನ ಎಪ್ರಿಲ್ ಕಿವಿ ಸಲ್ಯೂಷನ್ಸ್ ನಿರ್ದೇಶಕ ಅಲೆನ್ ಸ್ಯಾಮ್ಯುಯೆಲ್ (29) ಎಂಬುವವರನ್ನು ಜಾರಿ ನಿರ್ದೇಶನಾಲಯ(ಈಡಿ) ಬಂಧಿಸಿತ್ತು.
ಜಾರಿ ನಿರ್ದೇಶನಾಲಯ(ಈಡಿ)ದ ಅಧಿಕಾರಿಗಳ ಪ್ರಕಾರ, ತಮ್ಮ ಆ್ಯಪ್ ಗಳನ್ನು ಇನ್ಸ್ಟಾಲ್ ಮಾಡಿಕೊಳ್ಳುವಂತೆ ಜನರಿಗೆ ಆಮಿಷ ಒಡ್ಡಲು ಹಲವು ಚೀನಾ ಸಾಲದ ಆ್ಯಪ್ ಗಳು ಸುಲಭ ಸಾಲದ ಜಾಹೀರಾತುಗಳನ್ನು ಎಪಿಕೆ ಸ್ವರೂಪದಲ್ಲಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಹಂಚಿಕೊಂಡಿದ್ದವು. ಒಮ್ಮೆ ಈ ಆ್ಯಪ್ ಗಳನ್ನು ಇನ್ಸ್ಟಾಲ್ ಮಾಡಿದ ನಂತರ, ಈ ಆ್ಯಪ್ ಗಳು ಮೊಬೈಲ್ ಫೋನ್ ನ ಸೂಕ್ಷ್ಮ ದತ್ತಾಂಶಗಳ ಮೇಲೆ ಹಿಡಿತ ಸಾಧಿಸುತ್ತಿದ್ದವು ಎನ್ನಲಾಗಿದೆ.
ನಿಷ್ಕ್ರಿಯ ಖಾತೆಗಳು ಹಾಗೂ ನಕಲಿ ಜೂಜಾಟ ಮತ್ತು ಹೂಡಿಕೆ ಆ್ಯಪ್ ಗಳ ನಡುವಿನ ಸಂಬಂಧವನ್ನೂ ಈ ತನಿಖೆ ಬಹಿರಂಗಗೊಳಿಸಿದೆ. ಆ ಮೂಲಕ, ಈ ಅಕ್ರಮ ವಹಿವಾಟುಗಳ ಮೂಲಕ ನಡೆದಿದ್ದ ಹಣಕಾಸು ವಂಚನೆಯ ಪ್ರಮಾಣವನ್ನೂ ಬಯಲಿಗೆಳೆದಿದೆ.