ಶಾಲೆಗಳನ್ನು ʼಕೋಮುವಾದದ ಪ್ರಯೋಗಶಾಲೆʼಗಳಾಗಲು ಅವಕಾಶ ನೀಡುವುದಿಲ್ಲ: ಕೇರಳ ಸರಕಾರ
► ಸಂಘ ಪರಿವಾರ ನಡೆಸುತ್ತಿರುವ ಶಾಲೆಗಳಲ್ಲಿ ಕ್ರಿಸ್ಮಸ್ ಸಂಭ್ರಮಾಚರಣೆಗೆ ನಿರ್ಬಂಧ: ಆರೋಪ
ವಿ. ಶಿವನ್ ಕುಟ್ಟಿ | Photo Credit : PTI
ತಿರುವನಂತಪುರಂ: ಕೇರಳ ರಾಜ್ಯದ ಕೆಲವು ಖಾಸಗಿ ಶಾಲಾ ಆಡಳಿತ ಮಂಡಳಿಗಳು ಕ್ರಿಸ್ಮಸ್ ಸಂಭ್ರಮಾಚರಣೆಯ ಮೇಲೆ ನಿರ್ಬಂಧ ಹೇರಿ, ಅದಕ್ಕಾಗಿ ವಿದ್ಯಾರ್ಥಿಗಳಿಂದ ಸಂಗ್ರಹಿಸಿದ್ದ ಹಣವನ್ನು ವಾಪಸ್ಸು ನೀಡಿವೆ ಎಂಬ ವರದಿಗಳನ್ನು ಗಂಭೀರವಾಗಿ ಪರಿಗಣಿಸಿರುವ ಕೇರಳ ಸರಕಾರ, ಶಾಲೆಗಳು ಕೋಮುವಾದದ ಪ್ರಯೋಗಶಾಲೆಗಳಾಗಲು ಅವಕಾಶ ನೀಡುವುದಿಲ್ಲ ಎಂದು ರವಿವಾರ ಎಚ್ಚರಿಕೆ ನೀಡಿದೆ.
ಸಂಘ ಪರಿವಾರ ನಡೆಸುತ್ತಿರುವ ಶಾಲೆಗಳು ಹಾಗೂ ಹಿಂದೂಗಳ ಆಡಳಿತ ಮಂಡಳಿಯನ್ನು ಹೊಂದಿರುವ ಖಾಸಗಿ ಶಾಲೆಯೊಂದು ಕ್ರಿಸ್ಮಸ್ ಸಂಭ್ರಮಾಚರಣೆಯನ್ನು ಸ್ಥಗಿತಗೊಳಿಸಿವೆ ಎಂದು ಸಿಪಿಐ(ಎಂ)ನ ಮುಖವಾಣಿಯಾದ ‘ದೇಶಾಭಿಮಾನಿ’ ಪತ್ರಿಕೆಯಲ್ಲಿ ಆರೋಪಿಸಲಾಗಿತ್ತು. ಆದರೆ, ಈ ಆರೋಪವನ್ನು ಶಾಲೆಗಳು ಹಾಗೂ ಅವುಗಳ ಆಡಳಿತ ಮಂಡಳಿಗಳು ನಿರಾಕರಿಸಿದ್ದವು.
ಅತ್ಯಧಿಕ ಮಟ್ಟದ ಪ್ರಜಾಸತ್ತಾತ್ಮಕ ಜಾಗೃತಿ ಹಾಗೂ ಸುದೀರ್ಘ ಕಾಲದ ಜಾತ್ಯತೀತ ಪರಂಪರೆ ಇರುವ ಕೇರಳದಲ್ಲಿ ಇಂತಹ ಕ್ರಮಗಳು ಈ ಹಿಂದೆಂದೂ ಕೇಳಿ ಬಂದಿರಲಿಲ್ಲ ಎಂದು ಹೇಳಿರುವ ಕೇರಳ ಸರಕಾರ, ಈ ಆರೋಪಗಳ ಕುರಿತು ತುರ್ತು ತನಿಖೆಗೆ ಆದೇಶಿಸಿದೆ.
“ಕೇರಳ ಶಿಕ್ಷಣ ಸಂಸ್ಥೆಗಳಲ್ಲಿ ಧರ್ಮ ಅಥವಾ ಧಾರ್ಮಿಕ ನಂಬಿಕೆಯ ಆಧಾರದಲ್ಲಿ ಜನರನ್ನು ವಿಭಜಿಸುವ ಉತ್ತರ ಭಾರತದ ಮಾದರಿಯನ್ನು ಪರಿಚಯಿಸಲು ಯಾರಿಗೂ ಅವಕಾಶ ನೀಡುವುದಿಲ್ಲ” ಎಂದು ಕೇರಳ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಘೋಷಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ಶಾಲೆಗಳು ಮಕ್ಕಳು ಕಲಿಯುವ ಹಾಗೂ ಒಟ್ಟಾಗಿ ಬೆಳೆಯುವ ತಾಣಗಳಾಗಿವೆ. ಜಾತಿ ಮತ್ತು ಧರ್ಮದ ಆಧಾರದಲ್ಲಿ ವಿಭಜಿಸುವುದು ಹಾಗೂ ವಿದ್ಯಾರ್ಥಿಗಳಲ್ಲಿ ವಿಭಜನಾತ್ಮಕ ಪರಿಕಲ್ಪನೆಯನ್ನು ಬಿತ್ತಲು ಯತ್ನಿಸುವುದು ಸ್ವೀಕಾರಾರ್ಹವಲ್ಲ” ಎಂದು ಎಚ್ಚರಿಸಿದ್ದಾರೆ.
ಓಣಂ, ಕ್ರಿಸ್ಮಸ್ ಹಾಗೂ ಈದ್ ಅನ್ನು ರಾಜ್ಯದ ಶಾಲೆಗಳಲ್ಲಿ ಸಾಂಪ್ರದಾಯಿಕವಾಗಿ ಆಚರಿಸಿಕೊಂಡು ಬರಲಾಗುತ್ತಿದೆ. ಇದರಿಂದ ಮಕ್ಕಳು ಪರಸ್ಪರ ಗೌರವ, ಪ್ರೀತಿ ಮತ್ತು ಸಹಜೀವನವನ್ನು ಕಲಿಯಲು ಸಹಾಯಕವಾಗಿದೆ ಎಂದು ಹೇಳಿದ್ದಾರೆ.