ಉತ್ತರ ಪ್ರದೇಶ| 2 ಪ್ರತ್ಯೇಕ ಕಾರ್ಯಾಚರಣೆ: ಕೊಡೈನ್ ಮಿಶ್ರಿತ ಕೆಮ್ಮಿನ ಸಿರಪ್ ವಶ; 6 ಮಂದಿ ಬಂಧನ
ಸಾಂದರ್ಭಿಕ ಚಿತ್ರ | Photo Credit : freepik
ಎಟಾ, ಡಿ. 22: ಕೊಡೈನ್ ಮಿಶ್ರಿತ ಕೆಮ್ಮಿನ ಸಿರಪ್ ಅಕ್ರಮ ವ್ಯಾಪಾರದ ವಿರುದ್ಧ ಉತ್ತರಪ್ರದೇಶ ಪೊಲೀಸರು ತಮ್ಮ ಕಾರ್ಯಾಚರಣೆ ಚುರುಕುಗೊಳಿಸಿದ್ದಾರೆ. ಎಟ ಹಾಗೂ ಮಿರ್ಝಾಪುರ ಜಿಲ್ಲೆಗಳಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ ಒಟ್ಟು 6 ಮಂದಿಯನ್ನು ಬಂಧಿಸಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಆಗ್ರಾ ಮಾದಕ ದ್ರವ್ಯ ವಿರೋಧಿ ಘಟಕ ಹಾಗೂ ಅಲಿಗಂಜ್ ಪೊಲೀಸ್‌ನ ಜಂಟಿ ತಂಡ ಎಟಾದ ಅಲಿಗಂಜ್ ಪೊಲೀಸ್ ಠಾಣಾ ವ್ಯಾಪ್ತಿಯ ತಂಬಾಕು ಗೋದಾಮಿನಿಂದ ಅಂದಾಜು ಸುಮಾರು 50 ಲಕ್ಷ ರೂ. ಮೌಲ್ಯದ ಕೊಡೈನ್ ಮಿಶ್ರಿತ ಕೆಮ್ಮಿನ ಸಿರಪ್‌ನ 47 ಪೆಟ್ಟಿಗೆಗಳನ್ನು ರವಿವಾರ ರಾತ್ರಿ ವಶಪಡಿಸಿಕೊಂಡಿದೆ ಹಾಗೂ ನಾಲ್ವರನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತ್ಯೇಕ ಬೆಳವಣಿಗೆಯೊಂದರಲ್ಲಿ ಮಿರ್ಝಾಪುರ ಪೊಲೀಸರು ಅದಾಲತ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಕೊಡೈನ್ ಮಿಶ್ರಿತ ಕೆಮ್ಮಿನ ಸಿರಪ್ ಅನ್ನು ಅಕ್ರಮವಾಗಿ ಪೂರೈಕೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳಾದ ಅಜಿತ್ ಯಾದವ್ ಹಾಗೂ ಅಕ್ಷತ್ ಯಾದವ್‌ನನ್ನು ಬಂಧಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.