ಕೇರಳ| ಅಪಘಾತದ ಗಾಯಾಳುವಿಗೆ ರಸ್ತೆಯಲ್ಲೇ ತುರ್ತು ಶಸ್ತ್ರಚಿಕಿತ್ಸೆ ನಡೆಸಿ ಜೀವ ಉಳಿಸಿದ ಮೂವರು ವೈದ್ಯರು
ಸಾಂದರ್ಭಿಕ ಚಿತ್ರ
ತಿರುವನಂತಪುರ: ಕೊಚ್ಚಿಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡ ಯುವಕನ ಜೀವವನ್ನು ಉಳಿಸಲು ಮೂವರು ವೈದ್ಯರು ರಸ್ತೆಯಲ್ಲಿಯೇ ತುರ್ತು ಶಸ್ತ್ರಚಿಕಿತ್ಸೆ ನಡೆಸಿದ ಘಟನೆ ಮಾನವೀಯ ಸ್ಪಂದನೆಯ ಅಪೂರ್ವ ಉದಾಹರಣೆಯಾಗಿ ಪ್ರಶಂಸೆಗೆ ಪಾತ್ರವಾಗಿದೆ.
ರವಿವಾರ ರಾತ್ರಿ ಉದಯಂಪೇರೂರ್ ನಲ್ಲಿ ನಡೆದ ಅಪಘಾತದಲ್ಲಿ ಕೊಲ್ಲಂ ಜಿಲ್ಲೆಯ ಲಿನು ಎಂಬ ಯುವಕನಿಗೆ ಮುಖದ ಭಾಗದಲ್ಲಿ ತೀವ್ರ ಗಾಯಗಳಾಗಿತ್ತು. ರಕ್ತ ಹೆಪ್ಪುಗಟ್ಟಿದ್ದರಿಂದ ಉಸಿರಾಟ ಸಂಪೂರ್ಣ ಸ್ಥಗಿತಗೊಳ್ಳುವ ಅಪಾಯ ಎದುರಾಗಿತ್ತು.
ಅಪಘಾತದ ವೇಳೆ ಆ ಮಾರ್ಗವಾಗಿ ಸಂಚರಿಸುತ್ತಿದ್ದ ಕೊಟ್ಟಾಯಂ ಸರಕಾರಿ ವೈದ್ಯಕೀಯ ಕಾಲೇಜಿನ ಹೃದಯ ಶಸ್ತ್ರಚಿಕಿತ್ಸಾ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಬಿ. ಮನೂಪ್ ಹಾಗೂ ಕೊಚ್ಚಿಯ ಇಂದಿರಾ ಗಾಂಧಿ ಸಹಕಾರಿ ಆಸ್ಪತ್ರೆಯ ವೈದ್ಯ ದಂಪತಿಗಳಾದ ಡಾ. ಥಾಮಸ್ ಪೀಟರ್ ಮತ್ತು ಡಾ. ಧಿಡಿಯಾ ಕೆ. ಥಾಮಸ್ ಅವರು ತಕ್ಷಣ ಸ್ಥಳಕ್ಕೆ ಧಾವಿಸಿ ಗಾಯಾಳುವನ್ನು ಪರಿಶೀಲಿಸಿದರು.
ಲಿನುವಿನ ಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿದ ವೈದ್ಯರು, ಲಭ್ಯವಿದ್ದ ಸೀಮಿತ ಸಂಪನ್ಮೂಲಗಳ ನಡುವೆಯೂ ಸ್ಥಳದಲ್ಲೇ ಸರ್ಜಿಕಲ್ ಕ್ರಿಕೋಥೈರಾಯ್ಡಟಮಿ ನಡೆಸಲು ನಿರ್ಧರಿಸಿದರು. ಸ್ಥಳೀಯರು ಮತ್ತು ಪೊಲೀಸರ ಸಹಕಾರದಿಂದ ರೇಝರ್ ಬ್ಲೇಡ್ ಮತ್ತು ಪ್ಲಾಸ್ಟಿಕ್ ಸ್ಟ್ರಾ ಬಳಸಿ ಉಸಿರಾಟಕ್ಕೆ ವ್ಯವಸ್ಥೆ ಮಾಡಲಾಯಿತು. ಮೊಬೈಲ್‌ಗಳ ಫ್ಲ್ಯಾಷ್ ಲೈಟ್ ಗಳನ್ನು ಬೆಳಕಿಗಾಗಿ ಬಳಸಲಾಯಿತು. ರಸ್ತೆಯಲ್ಲಿಯೇ ನಡೆದ ಶಸ್ತ್ರಚಿಕಿತ್ಸೆಯನ್ನು ಯಾರೊಬ್ಬರೂ ಸಾರ್ವಜನಿಕರು ವಿಡಿಯೋ ಮಾಡದೇ ತಮಗೂ ಜವಾಬ್ದಾರಿಯಿದೆ ಎನ್ನುವುದನ್ನು ತೋರಿಸಿಕೊಟ್ಟರು.
ಶಸ್ತ್ರಚಿಕಿತ್ಸೆಯ ನಂತರ ಲಿನುವನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಲಾಗಿದ್ದು, ಡಾ. ಮನೂಪ್ ಅವರು ಆಂಬ್ಯುಲೆನ್ಸ್‌ನಲ್ಲೇ ರೋಗಿಯೊಂದಿಗೆ ತೆರಳಿದರು. ಪ್ರಸ್ತುತ ಲಿನುವಿನ ಸ್ಥಿತಿ ಸ್ಥಿರವಾಗಿದೆ ಎಂದು ತಿಳಿದುಬಂದಿದೆ.
ಈ ಮಾನವೀಯ ಕಾರ್ಯಕ್ಕೆ Indian Medical Association (IMA) ಮೆಚ್ಚುಗೆ ವ್ಯಕ್ತಪಡಿಸಿದೆ. “ಲಭ್ಯವಿರುವ ಸಂಪನ್ಮೂಲಗಳೊಂದಿಗೆ ಅಪಘಾತದ ಸಂತ್ರಸ್ತನಿಗೆ ತಕ್ಷಣದ ಆರೈಕೆ ಒದಗಿಸುವ ಮೂಲಕ ವೈದ್ಯರು ಸಮಾಜಕ್ಕೆ ಮಾದರಿಯಾಗಿದ್ದಾರೆ” ಎಂದು ಸಂಘದ ರಾಜ್ಯ ಅಧ್ಯಕ್ಷ ಡಾ. ಎಂ. ಎನ್. ಮೆನನ್ ಮತ್ತು ರಾಜ್ಯ ಕಾರ್ಯದರ್ಶಿ ಡಾ. ರಾಯ್ ಆರ್. ಚಂದ್ರನ್ ಶ್ಲಾಘಿಸಿದ್ದಾರೆ.