×
Ad

ಸಿಎಂಆರ್‌ಎಲ್-ಎಕ್ಸಾಲಾಜಿಕ್ ವಿವಾದ | ಕೇರಳ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪಕ್ಕೆ ಸುಪ್ರೀಂ ಕೋರ್ಟ್‌ ನಕಾರ

Update: 2025-10-06 21:26 IST

 ಸುಪ್ರೀಂ ಕೋರ್ಟ್‌ ,  ಕೇರಳ ಹೈಕೋರ್ಟ್ | Photo Credit : ecommitteesci.gov.in


ಹೊಸದಿಲ್ಲಿ,ಅ.6: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರ ಪುತ್ರಿ ವೀಣಾ ವಿಜಯನ್ ಒಡೆತನದ ಐಟಿ ಕಂಪನಿ ಎಕ್ಸಾಲಾಜಿಕ್ ಸೊಲ್ಯೂಷನ್ಸ್ ಮತ್ತು ಕೊಚ್ಚಿನ್ ಮಿನರಲ್ಸ್ ಆ್ಯಂಡ್ ರುಟೈಲ್ ಲಿ.(ಸಿಎಂಆರ್‌ಎಲ್) ನಡುವಿನ ಮೋಸದ ಹಣಕಾಸು ವಹಿವಾಟುಗಳ ಆರೋಪಗಳ ಕುರಿತು ಹೆಚ್ಚಿನ ತನಿಖೆಯನ್ನು ಕೋರಿದ್ದ ಅರ್ಜಿಯನ್ನು ತಿರಸ್ಕರಿಸಿದ್ದ ಕೇರಳ ಉಚ್ಚ ನ್ಯಾಯಾಲಯದ ಆದೇಶದಲ್ಲಿ ಹಸ್ತಕ್ಷೇಪ ನಡೆಸಲು ಸರ್ವೋಚ್ಚ ನ್ಯಾಯಾಲಯವು ಸೋಮವಾರ ತಿರಸ್ಕರಿಸಿದೆ.

‘ನಿಮ್ಮ ರಾಜಕೀಯ ಕಾಳಗಗಳನ್ನು ಮತದಾರರ ಮುಂದೆ ಹೋರಾಡಿ, ನ್ಯಾಯಾಲಯದಲ್ಲಿ ಅಲ್ಲ ಎಂದು ನಾವು ನಿರಂತರವಾಗಿ ಹೇಳುತ್ತಿದ್ದೇವೆ’ ಎಂದು ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾ.ಕೆ.ವಿನೋದ ಚಂದ್ರನ್ ಅವರ ಪೀಠವು ಅರ್ಜಿದಾರರಾದ ಕಾಂಗ್ರೆಸ್ ಶಾಸಕ ಮ್ಯಾಥ್ಯೂ ಕುಳಲ್‌ನಾದನ್ ಅವರಿಗೆ ತಿಳಿಸಿತು.

ಶಾಸಕರ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಗುರು ಕೃಷ್ಣಕುಮಾರ ಅವರು, ಪರಿಶೀಲಿಸಬೇಕಾದ ವಿಷಯವೊಂದಿದೆ ಎಂದು ಒಂದು ಹಂತದಲ್ಲಿ ಹೈಕೋರ್ಟ್ ಕಂಡುಕೊಂಡಿತ್ತು ಎಂದು ಪೀಠಕ್ಕೆ ತಿಳಿಸಿದರಾದರೂ, ಅದನ್ನೊಪ್ಪದ ನ್ಯಾ.ಚಂದ್ರನ್,ಉಚ್ಚ ನ್ಯಾಯಾಲಯವು ಹಾಗೆ ಹೇಳಿಲ್ಲ ಎಂದು ಹೇಳಿದರು.

ಆದಾಗ್ಯೂ ಕೃಷ್ಣಕುಮಾರ,ಸಿಎಂಆರ್‌ಎಲ್ ಮತ್ತು ಎಕ್ಸಾಲಾಜಿಕ್ ನಡುವೆ ಒಪ್ಪಂದವೊಂದು ಏರ್ಪಟ್ಟಿತ್ತು ಎನ್ನುವುದು ಸತ್ಯ ಮತ್ತು ಎಕ್ಸಾಲಾಜಿಕ್‌ಗೆ 1.72 ಕೋ.ರೂ.ಗಳನ್ನು ಪಾವತಿಸಲಾಗಿತ್ತು ಎಂದು ಹೇಳಿದರು. ಎಕ್ಸಾಲಾಜಿಕ್ ಯಾವುದೇ ಸೇವೆಗಳನ್ನು ಒದಗಿಸಿರಲಿಲ್ಲ ಎಂದು ಸಿಎಂಆರ್‌ಎಲ್ ಆದಾಯ ತೆರಿಗೆ ಮಧ್ಯಂತರ ಇತ್ಯರ್ಥ ಮಂಡಳಿಯ ಮುಂದೆ ಒಪ್ಪಿಕೊಂಡಿತ್ತು ಎಂದು ಅವರು ಬೆಟ್ಟು ಮಾಡಿದರು.

ಶಾಸಕ ಕುಳಲ್‌ನಾದನ್ ಅವರು ಸಿಎಂಆರ್‌ಎಲ್ ವೀಣಾ ಮತ್ತು ಅವರ ಕಂಪೆನಿಯಿಂದ ಯಾವುದೇ ಸೇವೆಯನ್ನು ಪಡೆಯದಿದ್ದರೂ ಅವರಿಗೆ ಮಾಸಿಕ ಮೊತ್ತವನ್ನು ಪಾವತಿಸುತ್ತಿದೆ ಎಂಬ ಆರೋಪದ ಬಗ್ಗೆ ತನಿಖೆಯನ್ನು ಕೋರಿ ಜಾಗ್ರತ ನ್ಯಾಯಾಲಯದ ಮೊರೆ ಹೋಗಿದ್ದರು. ವಾಸ್ತವದಲ್ಲಿ ಈ ಹಣವನ್ನು ಮುಖ್ಯಮಂತ್ರಿಗಳಿಂದ ಅನುಕೂಲವನ್ನು ಪಡೆದುಕೊಳ್ಳಲು ಪಾವತಿಸಲಾಗುತ್ತಿದೆ ಎಂದು ಅವರು ವಾದಿಸಿದ್ದರು. ತನ್ನ ಅರ್ಜಿಯನ್ನು ಜಾಗ್ರತ ನ್ಯಾಯಾಲಯವು ತಿರಸ್ಕರಿಸಿದ ಬಳಿಕ ಅವರು ಉಚ್ಚ ನ್ಯಾಯಾಲಯದ ಮೆಟ್ಟಿಲೇರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News