ಕುವೈತ್ ನಿಂದ ಗಡಿಪಾರಾಗಿದ್ದ ಬೆಂಗಳೂರಿನ ವ್ಯಕ್ತಿಯ ನಾಪತ್ತೆ ಪ್ರಕರಣ: ಎಸ್ಐಟಿ ತನಿಖೆಗೆ ಕೇರಳ ಹೈಕೋರ್ಟ್ ಆದೇಶ
“ನೆನಪಿನ ಶಕ್ತಿ ಕಳೆದುಕೊಂಡಿದ್ದ ವ್ಯಕ್ತಿಯನ್ನು ಕೊಚ್ಚಿಯಲ್ಲಿ ಇಳಿಸಿದ್ದು ಹೇಗೆ?” ಎಂದು ಪ್ರಶ್ನಿಸಿದ ನ್ಯಾಯಾಲಯ
ಕೇರಳ ಹೈಕೋರ್ಟ್ | Photo Credit : PTI
ತಿರುವನಂತಪುರಂ: ಈ ತಿಂಗಳ ಆರಂಭದಲ್ಲಿ ಕುವೈತ್ ನಿಂದ ಗಡಿಪಾರಾಗಿದ್ದ ಬೆಂಗಳೂರು ಮೂಲದ ವ್ಯಕ್ತಿ ಎರ್ನಾಕುಲಂನಿಂದ ನಾಪತ್ತೆಯಾಗಿರುವ ಪ್ರಕರಣದ ಕುರಿತು ತನಿಖೆ ನಡೆಸಲು ವಿಶೇಷ ತನಿಖಾ ತಂಡವನ್ನು ರಚಿಸುವಂತೆ ಕೊಚ್ಚಿ ಪೊಲೀಸ್ ಆಯುಕ್ತರಿಗೆ ಶನಿವಾರ ಕೇರಳ ಹೈಕೋರ್ಟ್ ಆದೇಶಿಸಿದೆ.
ವಿಶೇಷ ತನಿಖಾ ತಂಡದ ನೇತೃತ್ವವನ್ನು ಉಪ ಪೊಲೀಸ್ ಆಯುಕ್ತರ ದರ್ಜೆಗಿಂತ ಕೆಳಗಿನ ಅಧಿಕಾರಿಗೆ ವಹಿಸಬಾರದು ಎಂದು ನ್ಯಾ. ದೇವನ್ ರಾಮಚಂದ್ರನ್ ಹಾಗೂ ನ್ಯಾ. ಎಂ.ಬಿ.ಸ್ನೇಹಲತಾ ಅವರನ್ನೊಳಗೊಂಡ ವಿಭಾಗೀಯ ನ್ಯಾಯಪೀಠ ನಿರ್ದೇಶನ ನೀಡಿದೆ.
ಇದಕ್ಕೂ ಮುನ್ನ, ಕುವೈತ್ ನಿಂದ ಗಡಿಪಾರಾಗಿದ್ದ ನಾಪತ್ತೆಯಾಗಿರುವ ಬೆಂಗಳೂರು ಮೂಲದ ವ್ಯಕ್ತಿ, ತಾನು ವಾಸಿಸುತ್ತಿದ್ದ ಬೆಂಗಳೂರಿನ ಬದಲು ಕೊಚ್ಚಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದು ಹೇಗೆ ಎಂಬ ಕುರಿತು ತನಿಖೆ ನಡೆಸುವಂತೆ ಕೇಂದ್ರ ಗೃಹ ವ್ಯವಹಾರಗಳ ಸಚಿವಾಲಯಕ್ಕೆ ನ್ಯಾಯಾಲಯ ಸೂಚನೆ ನೀಡಿತ್ತು.
ಸೂರಜ್ ಲಾಮಾ ಎಂಬುವವರ ಪುತ್ರ ಸ್ಯಾಂಟನ್ ಲಾಮಾ ಎಂಬುವವರು ದಾಖಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಯ ವೇಳೆ ನ್ಯಾಯಾಲಯ ಈ ಆದೇಶ ನೀಡಿದೆ.
ಸ್ಯಾಂಟನ್ ಲಾಮಾ ದಾಖಲಿಸಿದ್ದ ಅರ್ಜಿಯ ಪ್ರಕಾರ, ಮದ್ಯ ಸೇವನೆ ನಂಜಿಗೊಳಗಾಗಿದ್ದ ಸೂರಜ್ ಲಾಮಾರನ್ನು ಆಗಸ್ಟ್ ತಿಂಗಳಲ್ಲಿ ಕುವೈತ್ ನಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ಮದ್ಯ ಸೇವನೆ ನಂಜಿನಿಂದ ಅಪಾಯಕಾರಿ ಲ್ಯುಕೊಎನ್ಸೆಫಲೊಪತಿಗೊಳಗಾಗಿದ್ದ ಸೂರಜ್ ಲಾಮಾ, ನೆನಪಿನಶಕ್ತಿ ಕಳೆದುಕೊಂಡು ಮಾತನಾಡಲೂ ಸಮಸ್ಯೆ ಎದುರಿಸುತ್ತಿದ್ದರು ಎಂದು ಹೇಳಲಾಗಿದೆ.
ಬಳಿಕ ಕುವೈತ್ ನಿಂದ ಗಡಿಪಾರಾಗಿದ್ದ ಸೂರಜ್ ಲಾಮಾ ಅವರು, ಅ. 5ರಂದು ಕೊಚ್ಚಿಗೆ ಬಂದಿಳಿದಿದ್ದರು. ನೆನಪಿನ ಶಕ್ತಿ ಕಳೆದುಕೊಂಡಿದ್ದರೂ, ಹೇಗೋ ವಿಮಾನ ನಿಲ್ದಾಣದಿಂದ ಹೊರ ಬಿದ್ದಿದ್ದರು. ಬಳಿಕ ಅವರು ಅಲುವಾ ಮೆಟ್ರೊ ನಿಲ್ದಾಣದ ಬಳಿ ಪತ್ತೆಯಾಗಿದ್ದರು ಎಂದು ಸೂರಜ್ ಲಾಮಾರ ಪುತ್ರ ಸ್ಯಾಂಟನ್ ಲಾಮಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಅನಸ್ವಾರ ಲೇನ್ ನಲ್ಲಿನ ಮನೆಯೊಂದರ ಎದುರು ಸೂರಜ್ ಲಾಮಾ ಬಿದ್ದುಕೊಂಡಿರುವುದನ್ನು ಸ್ಥಳೀಯ ನಿವಾಸಿಗಳು ಪತ್ತೆ ಹಚ್ಚಿದ ಬಳಿಕ, ಅವರನ್ನು ತಮ್ಮ ವಶಕ್ಕೆ ಪಡೆಯಲಾಗಿತ್ತು ಎಂದು ಅ.8ರಂದು ತ್ರಿಕ್ಕಕಾರ ಠಾಣೆಯ ಪೊಲೀಸರು ಹೇಳಿಕೆ ನೀಡಿದ್ದರು.
ಇದರ ಬೆನ್ನಿಗೇ, ಆತನನ್ನು ಆ್ಯಂಬುಲೆನ್ಸ್ ಒಂದರಲ್ಲಿ ಕಲಮಸ್ಸೇರಿಯಲ್ಲಿನ ಸರಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ, ಅ. 10ರಂದು ಸೂರಜ್ ಲಾಮಾ ತನ್ನೊಂದಿಗೆ ಯಾರೂ ಇಲ್ಲದಿದ್ದರೂ, ತುರ್ತು ಚಿಕಿತ್ಸಾ ವಾರ್ಡ್ ನಿಂದ ಹೊರ ಹೋಗುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿತ್ತು. ಅಲ್ಲಿಂದೀಚೆಗೆ ಅವರ ಪತ್ತೆಯಾಗಿಲ್ಲ.
ಸೂರಜ್ ಲಾಮಾ ನಾಪತ್ತೆಯಾಗಿದ್ದಾರೆ ಎಂದು ನೆಡುಂಬಸ್ಸೇರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ ಹೊರತಾಗಿಯೂ, ಅವರನ್ನು ಪತ್ತೆ ಹಚ್ಚಲು ಪೊಲೀಸರು ವಿಫಲಗೊಂಡಿದ್ದಾರೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ತ್ರಿಕ್ಕಕಾರ ಠಾಣೆಯ ಪೊಲೀಸರು ಹಾಗೂ ಆಸ್ಪತ್ರೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೂರಜ್ ಲಾಮಾ ನಾಪತ್ತೆಯಾಗಿದ್ದಾರೆ ಎಂದೂ ಅರ್ಜಿಯಲ್ಲಿ ಆರೋಪಿಸಲಾಗಿದೆ.
ತಮ್ಮ ತಂದೆ ಸೂರಜ್ ಲಾಮಾ ನಾಪತ್ತೆ ಪ್ರಕರಣದ ಕುರಿತು ಅರ್ಜಿ ಸಲ್ಲಿಸಲು ಸ್ಯಾಂಟನ್ ಲಾಮಾ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಮೊರೆ ಹೋಗಿದ್ದರು. ಈ ಸಂಬಂಧ, ಅ.18ರಂದು ಪೊಲೀಸ್ ಆಯುಕ್ತರಿಗೆ ಮನವಿ ಪತ್ರ ಸಲ್ಲಿಸಲು ಸ್ಯಾಂಟನ್ ಲಾಮಾಗೆ ಕೇರಳ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ನೆರವು ನೀಡಿತ್ತು.
ಅರ್ಜಿದಾರರ ಪರ ವಕೀಲೆ ಎ.ಪಾರ್ವತಿ ಮೆನನ್ ಹಾಗೂ ವಕೀಲ ಸಂಜಯ್ ನ್ಯಾಯಾಲಯದಲ್ಲಿ ಹಾಜರಿದ್ದರು. ಕೇಂದ್ರ ಸರಕಾರದ ಪರ ವಕೀಲ ಎಸ್.ಕೃಷ್ಣ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ಸೌಜನ್ಯ: barandbench.com