×
Ad

ಕೇರಳ | ಮಲಪ್ಪುರಂನಲ್ಲಿ ನಿಫಾ ಸೋಂಕು; 6 ಮಂದಿಯ ವರದಿ ನೆಗೆಟಿವ್

Update: 2025-05-09 23:04 IST

ಸಾಂದರ್ಭಿಕ ಚಿತ್ರ 

ಮಲಪ್ಪುರಂ: ಮಲಪ್ಪುರಂ ಜಿಲ್ಲೆಯಲ್ಲಿ ನಿಫಾ ವೈರಸ್ ಸೋಂಕಿತ ರೋಗಿಯೊಂದಿಗೆ ಸಂಪರ್ಕಕ್ಕೆ ಬಂದು, ನಿಫಾ ವೈರಸ್ ಸೋಂಕಿನ ರೋಗ ಲಕ್ಷಣಗಳನ್ನು ಪ್ರದರ್ಶಿಸಿದ್ದ ಆರು ಮಂದಿಗೆ ನಿಫಾ ಸೋಂಕು ತಗುಲಿಲ್ಲ ಎಂದು ವೈದ್ಯಕೀಯ ಪರೀಕ್ಷಾ ವರದಿ ಬಂದಿದೆ ಎಂದು ಶುಕ್ರವಾರ ಕೇರಳ ಸರಕಾರ ತಿಳಿಸಿದೆ.

ಮೂಲ ರೋಗಿಯ ಸ್ಥಿತಿ ಗಂಭೀರವಾಗಿಯೇ ಮುಂದುವರಿದ್ದರೂ, ಈ ಸುದ್ದಿ ಕೊಂಚ ಮಟ್ಟಿಗೆ ನಿರಾಳತೆಯನ್ನು ಮೂಡಿಸಿದೆ.

ಸಾರ್ವಜನಿಕರ ಸುರಕ್ಷತೆಯನ್ನು ಖಾತರಿ ಪಡಿಸಲು ಜಾರಿಗೊಳಿಸಲಾಗಿರುವ ಕಟ್ಟುನಿಟ್ಟಿನ ರೋಗ ನಿರೋಧಕ ಕ್ರಮಗಳು ಮಲಪ್ಪುರಂ ಜಿಲ್ಲೆಯಾದ್ಯಂತ ಮುಂದುವರಿಯಲಿವೆ ಎಂದು ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ಪ್ರಗತಿಯಲ್ಲಿರುವ ಮುಂಜಾಗ್ರತಾ ಕ್ರಮಗಳನ್ನು ಪರಾಮರ್ಶಿಸಲು ಮಲಪ್ಪುರಂ ಜಿಲ್ಲಾಡಳಿತ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಉನ್ನತ ಮಟ್ಟದ ಕೇಂದ್ರ ಸಮಿತಿಯ ಸಭೆಯ ಅಧ್ಯಕ್ಷತೆಯನ್ನು ಅವರು ವಹಿಸಿದ್ದರು.

ಅಧಿಕೃತ ಪ್ರಕಟಣೆಯ ಪ್ರಕಾರ, ನಿಫಾ ವೈರಸ್ ಸೋಂಕಿತರೊಂದಿಗೆ ಸಂಪರ್ಕಕ್ಕೆ ಬಂದಿರುವ ಒಟ್ಟು 49 ಮಂದಿ ಈಗಲೂ ನಿಗಾವಣೆಯಲ್ಲಿದ್ದಾರೆ ಎಂದು ಹೇಳಲಾಗಿದೆ.

ಈ ಪೈಕಿ, ಸೌಮ್ಯ ರೋಗ ಲಕ್ಷಣಗಳು ಕಂಡು ಬಂದಿದ್ದ ಐವರನ್ನು ಮಂಜೇಲಿ ವೈದ್ಯಕೀಯ ಕಾಲೇಜಿನ ಐಸೊಲೇಷನ್ ವಾರ್ಡ್ ಗೆ ದಾಖಲಿಸಲಾಗಿದೆ.

ಸದ್ಯ ಪೆರಿಂತಲ್ಮನ್ನ ಆಸ್ಪತ್ರೆಗೆ ದಾಖಲಾಗಿರುವ ಎರ್ನಾಕುಲಂನ ಓರ್ವ ಶುಶ್ರೂಷಕಿಯನ್ನೂ ಪ್ರತ್ಯೇಕವಾಗಿರಿಸಲಾಗಿದೆ. ಅವರ ರಕ್ತದ ಮಾದರಿಗಳನ್ನು ಪರೀಕ್ಷೆಗೆ ರವಾನಿಸಲಾಗಿತ್ತಾದರೂ, ಅದರಲ್ಲಿ ಯಾವುದೇ ಸೋಂಕಿನ ಲಕ್ಷಣಗಳು ಕಂಡು ಬಂದಿಲ್ಲ.

ವೈದ್ಯಕೀಯ ನಿಗಾವಣೆಯಲ್ಲಿರುವ 49 ಮಂದಿಯ ಪೈಕಿ 12 ಮಂದಿ ಹತ್ತಿರದ ಸಂಬಂಧಿಕರಾಗಿದ್ದಾರೆ. ಈ ಪೈಕಿ, 45 ಮಂದಿಯನ್ನು ಭಾರಿ ಅಪಾಯವಿರುವ ಸಂಪರ್ಕದ ವ್ಯಕ್ತಿಗಳನ್ನಾಗಿ ಅಧಿಕಾರಿಗಳು ವಿಂಗಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News