×
Ad

‘ದಿ ಕೇರಳ ಸ್ಟೋರಿ–2’ ಚಿತ್ರವನ್ನು ಜನರು ತಿರಸ್ಕರಿಸಬೇಕು: ಸಿಎಂ ಪಿಣರಾಯಿ ವಿಜಯನ್

"ಕೇರಳದ ಜಾತ್ಯತೀತ ಬುನಾದಿ ಸುಳ್ಳು ಪ್ರಚಾರದಿಂದ ಕುಸಿಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ"

Update: 2026-02-19 14:06 IST

ಕೇರಳ ಸಿಎಂ ಪಿಣರಾಯಿ ವಿಜಯನ್ (Photo: X/@pinarayivijayan)

ತಿರುವನಂತಪುರ: ‘ದಿ ಕೇರಳ ಸ್ಟೋರಿ’ ಚಿತ್ರದ ಎರಡನೇ ಭಾಗದ ನಿರ್ಮಾಣದ ಕುರಿತು ಕೇರಳ ಮುಖ್ಯಮಂತ್ರಿ ಪಿಣರಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಅದನ್ನು ಜನರು ತಿರಸ್ಕರಿಸಬೇಕು ಎಂದು ಕರೆ ನೀಡಿದ್ದಾರೆ. ಚಿತ್ರದ ಮೊದಲ ಭಾಗವು ರಾಜ್ಯದ ವಿರುದ್ಧ ದ್ವೇಷದ ವಾತಾವರಣ ಸೃಷ್ಟಿಸುವ ಹಾಗೂ ಕೇರಳದ ಜಾತ್ಯತೀತ ಸಂಪ್ರದಾಯವನ್ನು ದುರ್ಬಲಗೊಳಿಸುವ ಉದ್ದೇಶದಿಂದ ಮಾಡಲಾಗಿತ್ತು ಎಂದು ಅವರು ಆರೋಪಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿಗಳ ಕಚೇರಿ ನೀಡಿರುವ ಪ್ರಕಟನೆಯಲ್ಲಿ, “ಸಮಾಜದಲ್ಲಿ ಭಿನ್ನತೆ ಮತ್ತು ದ್ವೇಷ ಹರಡುವ ಉದ್ದೇಶದಿಂದ ಸೃಷ್ಟಿಸಲಾದ ಸಾಮರಸ್ಯ ಕೆಡಿಸುವ ಚಿತ್ರಗಳಿಗೆ ಪ್ರದರ್ಶನದ ಅವಕಾಶ ದೊರೆಯುತ್ತದೆ. ಆದರೆ ‘ಬೀಫ್’ ನಂತಹ ಸಿನಿಮಾಗಳಿಗೆ ಚಲನಚಿತ್ರೋತ್ಸವಗಳಲ್ಲಿ ಅವಕಾಶ ನಿರಾಕರಿಸಲಾಗುತ್ತದೆ,” ಎಂದು ಪಿಣರಾಯಿ ವಿಜಯನ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.

‘ದಿ ಕೇರಳ ಸ್ಟೋರಿ’ ಚಿತ್ರ ಬಿತ್ತರಿಸಿದ ಸುಳ್ಳು ನಿರೂಪಣೆಯನ್ನು ಸಂಘ ಪರಿವಾರವು ವ್ಯಾಪಕವಾಗಿ ಪಸರಿಸಿದೆ. ಪರಸ್ಪರ ಒಪ್ಪಿಗೆಯಿಂದಾದ ಮದುವೆಗಳನ್ನೂ ಕೋಮುವಾದ ಹಾಗೂ ಬಲವಂತದ ಧರ್ಮಾಂತರವೆಂದು ಬಿಂಬಿಸಿ ತಪ್ಪು ಪ್ರಚಾರ ಮಾಡಲಾಗುತ್ತಿದೆ ಎಂದು ವಿಜಯನ್ ಆರೋಪಿಸಿದ್ದಾರೆ.

ಯಾವುದೇ ಕೋಮು ಗಲಭೆಗಳಿಲ್ಲದೆ, ಸಮುದಾಯಗಳ ನಡುವೆ ಪರಸ್ಪರ ಗೌರವದ ಪರಂಪರೆ ನೆಲೆಸಿರುವ ಕೇರಳವನ್ನು ಕೆಲ ಶಕ್ತಿಗಳು ಹಗೆತನದಿಂದ ನೋಡುತ್ತಿವೆ. ರಾಜ್ಯದ ಶಾಂತಿ ಮತ್ತು ನೆಮ್ಮದಿಯನ್ನು ಕೆಡಿಸಲು ಯತ್ನಿಸುವವರು ‘ನಾಡಿನ ಶತ್ರುಗಳು’ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಸ್ಥಿರ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿರುವ ಹಾಗೂ ಕಾನೂನು–ಸುವ್ಯವಸ್ಥೆ ಕಾಪಾಡುವಲ್ಲಿ ಮಾದರಿಯಾಗಿರುವ ಧಾರ್ಮಿಕ ಸಾಮರಸ್ಯದ ಕೇರಳವನ್ನು ಭಯೋತ್ಪಾದನೆಯ ಕೇಂದ್ರವೆಂದು ಚಿತ್ರಿಸುವ ಪ್ರಯತ್ನವನ್ನು ತಿರಸ್ಕರಿಸಬೇಕು ಎಂದು ಅವರು ಕರೆ ನೀಡಿದ್ದಾರೆ.

“ಕೇರಳದ ಜಾತ್ಯತೀತ ಬುನಾದಿ ಸುಳ್ಳು ಪ್ರಚಾರದಿಂದ ಕುಸಿಯದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಜವಾಬ್ದಾರಿ. ಜಾತ್ಯತೀತತೆ ಮತ್ತು ಸಹೋದರತ್ವದ ಮೌಲ್ಯಗಳನ್ನು ಎತ್ತಿಹಿಡಿದು ಇಂತಹ ಪ್ರಯತ್ನಗಳನ್ನು ಎದುರಿಸಬೇಕು,” ಎಂದು ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News