ಯುಎಇ | ವರದಕ್ಷಿಣೆ ಕಿರುಕುಳ : ಮಗುವನ್ನು ಹತ್ಯೆ ಮಾಡಿ ಆತ್ಮಹತ್ಯೆ ಮಾಡಿಕೊಂಡ ಕೇರಳದ ಮಹಿಳೆ
Photo | indiatoday
ಶಾರ್ಜಾ: ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾದಲ್ಲಿ ಕೇರಳದ ಮಹಿಳೆಯೋರ್ವರು ತನ್ನ ಪುಟ್ಟ ಮಗುವನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನನ್ನ ಮಗಳಿಗೆ ವರದಕ್ಷಿಣೆಗಾಗಿ ಕಿರುಕುಳ ನೀಡಲಾಗಿದೆ ಎಂದು ಮಹಿಳೆಯ ತಾಯಿ ಕೇರಳದಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜುಲೈ 8ರಂದು ಶಾರ್ಜಾದ ಅಲ್ ನಹ್ದಾದಲ್ಲಿ ವಿಪಂಜಿಕಾ ಮಣಿ(32) ತನ್ನ ಒಂದೂವರೆ ವರ್ಷದ ಮಗಳು ವೈಭವಿಯೊಂದಿಗೆ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ. ಮಗುವಿನ ಕೊಲೆ ಬಳಿಕ ತಾಯಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು.
ಈ ಕುರಿತು ಕೊಲ್ಲಂ ಜಿಲ್ಲೆಯ ಕುಂದರ ಪೊಲೀಸ್ ಠಾಣೆಯಲ್ಲಿ ವಿಪಂಜಿಕಾ ಪತಿ ನಿಧೀಶ್, ಆತನ ಸಹೋದರಿ ನೀತು ಮತ್ತು ಆತನ ತಂದೆಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ವರದಕ್ಷಿಣೆಗಾಗಿ ವಿಪಂಜಿಕಾಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡಲಾಗಿದೆ. ಆಕೆಯ ಕೂದಲನ್ನು ಕತ್ತರಿಸಿ ಚಿತ್ರಹಿಂಸೆ ನೀಡಲಾಗಿದೆ. ಪತಿಯ ವಿವಾಹೇತರ ಸಂಬಂಧಗಳನ್ನು ಪ್ರಶ್ನಿಸಿದ್ದಕ್ಕೆ ವಿಚ್ಛೇದನ ನೋಟಿಸ್ ಕಳುಹಿಸಲಾಗಿತ್ತು ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ ಸೆಕ್ಷನ್ 85, ಸೆಕ್ಷನ್ 108 ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ-1961ರಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಆತ್ಮಹತ್ಯೆಗೆ ಮೊದಲು ವಿಪಂಜಿಕಾ ಅನುಭವಿಸಿದ ಚಿತ್ರಹಿಂಸೆ ಬಗ್ಗೆ ಡೆತ್‌ನೋಟ್‌ನಲ್ಲಿ ಬರೆದಿದ್ದಾರೆ ಎಂದು ಹೇಳಲಾಗಿದೆ.
ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಿಪಂಜಿಕಾ ತಾಯಿ, ʼಮಗಳು ಅನುಭವಿಸಿದ ದೌರ್ಜನ್ಯದ ಬಗ್ಗೆ ನಮಗೆ ಮೊದಲು ತಿಳಿದಿರಲಿಲ್ಲ. ಆರೋಪಿಗಳಿಗೆ ಸೂಕ್ತ ಶಿಕ್ಷೆ ನೀಡಬೇಕು. ಆಗ ಮಾತ್ರ ನನ್ನ ಮಗಳಿಗೆ ಶಾಂತಿ ದೊರೆಯುತ್ತದೆʼ ಎಂದು ಹೇಳಿದ್ದಾರೆ.