×
Ad

ತಿರುವನಂತಪುರಂ ಸ್ಥಳೀಯ ಚುನಾವಣೆ | ಕೇರಳದ ಪ್ರಪ್ರಥಮ ಮಹಿಳಾ ಐಪಿಎಸ್ ಅಧಿಕಾರಿಯೀಗ ಬಿಜೆಪಿ ಅಭ್ಯರ್ಥಿ

Update: 2025-11-09 21:55 IST

PhotoCredit : X/@TMoolamattom

ತಿರುವನಂತಪುರಂ: ಪ್ರತಿಷ್ಠಿತ ತಿರುವನಂತಪುರಂ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸುವ ಮೂಲಕ, ಕೇರಳದ ಪ್ರಪ್ರಥಮ ಮಹಿಳಾ ಐಪಿಎಸ್ ಅಧಿಕಾರಿ ಆರ್.ಶ್ರೀಕಲಾ ಚುನಾವಣಾ ರಾಜಕೀಯಕ್ಕೆ ಧುಮುಕಿದ್ದಾರೆ.

ಕೇರಳದ ಪ್ರತಿಷ್ಠಿತ ತಿರುವನಂತಪುರಂ ಮಹಾನಗರ ಪಾಲಿಕೆಯನ್ನು ತನ್ನ ಕೈವಶ ಮಾಡಿಕೊಳ್ಳಲು ಶತಪ್ರಯತ್ನ ನಡೆಸುತ್ತಿರುವ ಬಿಜೆಪಿ, ಮಾಜಿ ಭಾರತೀಯ ಅಥ್ಲೀಟ್ ಪದ್ಮಿನಿ ಥಾಮಸ್ ಅವರನ್ನೂ ಚುನಾವಣಾ ಕಣಕ್ಕಿಳಿಸಿದೆ.

ಈಗಾಗಲೇ ಬಿಜೆಪಿಗೆ ಸ್ಪರ್ಧೆಯನ್ನು ಕಠಿಣಗೊಳಿಸುವ ಯೋಜನೆಯನ್ನು ಪ್ರಕಟಿಸಿರುವ ಕಾಂಗ್ರೆಸ್, ಸಿಪಿಎಂ ಆಡಳಿತಾರೂಢ ಮಹಾನಗರ ಪಾಲಿಕೆಯಲ್ಲಿ ತನ್ನ ಗತವೈಭವವನ್ನು ಮರಳಿ ಪಡೆಯಲು ಜನಪ್ರಿಯ ನಾಯಕ ಹಾಗೂ ಮಾಜಿ ಶಾಸಕ ಕೆ.ಎಸ್.ಶಬರಿನಾಥನ್ ಅವರನ್ನು ತನ್ನ ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ನಿರ್ಧರಿಸಿದೆ. ಯುವ ವೃತ್ತಿಪರ ಹಾಗೂ ಕಾಂಗ್ರೆಸ್ ಪಕ್ಷದ ಮಾಜಿ ನಾಯಕ ಜಿ.ಕಾರ್ತಿಕೇಯನ್ ಅವರ ಪುತ್ರರಾದ ಕೆ.ಎಸ್.ಶಬರಿನಾಥನ್ ಅವರನ್ನು ಮೇಯರ್ ಅಭ್ಯರ್ಥಿಯನ್ನಾಗಿಯೂ ಕಾಂಗ್ರೆಸ್ ಬಿಂಬಿಸಿದೆ.

100 ಸದಸ್ಯ ಬಲದ ತಿರುವನಂತಪುರಂ ಮಹಾನಗರ ಪಾಲಿಕೆಯಲ್ಲಿ ಸಿಪಿಎಂ ನೇತೃತ್ವದ ಡೆಮಾಕ್ರಟಿಕ್ ಫ್ರಂಟ್ 52 ಸ್ಥಾನಗಳನ್ನು ಹೊಂದಿದ್ದರೆ, ಬಿಜೆಪಿ ನೇತೃತ್ವದ ಎನ್ಡಿಎ 35 ಸ್ಥಾನ ಹಾಗೂ ಕಾಂಗ್ರೆಸ್ 10 ಸ್ಥಾನಗಳನ್ನು ಹೊಂದಿದೆ. 2010ರ ಚುನಾವಣೆಯಲ್ಲಿ ಕೇವಲ ಆರು ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಎನ್ಡಿಎ, 2015 ಹಾಗೂ 2020ರ ಚುನಾವಣೆಯಲ್ಲಿ ಮಹತ್ತರ ಮೇಲುಗೈ ಸಾಧಿಸುವ ಮೂಲಕ, ಎರಡೂ ಚುನಾವಣೆಗಳಲ್ಲೂ ತಲಾ 35 ಸ್ಥಾನಗಳಲ್ಲಿ ಗೆಲುವು ಸಾಧಿಸಿತ್ತು. ಆದರೆ, 2010ರ ಚುನಾವಣೆಯಲ್ಲಿ 42 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್, 2015ರಲ್ಲಿ 21 ಸ್ಥಾನ ಹಾಗೂ 2020ರಲ್ಲಿ ಕೇವಲ 10 ಸ್ಥಾನಗಳಿಗೆ ಕುಸಿದಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News