ಕೆನಡದ ಸರ್ರೆಯಲ್ಲಿ ‘‘ಖಾಲಿಸ್ತಾನಿ ರಾಯಭಾರ ಕಚೇರಿ’’!
Image Source: X/@OnTheNewsBeat
ಒಟ್ಟಾವ (ಕೆನಡ), ಆ. 5: ‘ಸಿಖ್ಸ್ ಫಾರ್ ಜಸ್ಟೀಸ್’ (ಎಸ್ಎಫ್ಜೆ) ಎಂಬ ಖಾಲಿಸ್ತಾನಿ ಸಂಘಟನೆಯು ಗುರು ನಾನಕ್ ಸಿಖ್ ಗುರುದ್ವಾರ ದೇವಾಲಯದ ಜೊತೆಗೆ ಕೈಜೋಡಿಸಿ ಕೆನಡದ ಸರ್ರೆ ನಗರದಲ್ಲಿ ‘ಖಾಲಿಸ್ತಾನಿ ರಾಯಭಾರ ಕಚೇರಿ’ಯೊಂದನ್ನು ಸ್ಥಾಪಿಸಿದೆ.
ಈ ತಥಾಕಥಿತ ರಾಯಭಾರ ಕಚೇರಿಗೆ ‘‘ರಿಪಬ್ಲಿಕ್ ಆಫ್ ಖಾಲಿಸ್ತಾನ್’’ ಎಂಬ ಹೆಸರಿನ ನಾಮಫಲಕವನ್ನು ಹಾಕಲಾಗಿದೆ. ಗುರು ನಾನಕ್ ಸಿಖ್ ಗುರುದ್ವಾರದ ಆವರಣದಲ್ಲಿರುವ ಕಟ್ಟಡವೊಂದರಲ್ಲಿ ಈ ‘‘ರಾಯಭಾರ ಕಚೇರಿ’’ಯನ್ನು ತೆರೆಯಲಾಗಿದೆ.
ಕೆನಡದ ಬ್ರಿಟಿಶ್ ಕೊಲಂಬಿಯ ರಾಜ್ಯದ ಸರಕಾರ ಒದಗಿಸಿರುವ ನಿಧಿಯಿಂದ ‘‘ರಾಯಭಾರ ಕಚೇರಿ’’ ಇರುವ ಕಟ್ಟಡವನ್ನು ನಿರ್ಮಿಸಲಾಗಿತ್ತು ಎಂದು ಸ್ಥಳೀಯರು ಹೇಳಿದ್ದಾರೆ. ಕಟ್ಟಡದಲ್ಲಿ ಲಿಫ್ಟ್ ನಿರ್ಮಿಸಲು 1,50,000 ಡಾಲರ್ (ಸುಮಾರು 1.31 ಕೋಟಿ ರೂಪಾಯಿ) ಮೊತ್ತವನ್ನು ಬ್ರಿಟಿಶ್ ಕೊಲಂಬಿಯ ಇತ್ತೀಚೆಗೆ ನೀಡಿತ್ತು ಎಂಬುದಾಗಿಯೂ ಅವರು ತಿಳಿಸಿದ್ದಾರೆ.
ಖಾಲಿಸ್ತಾನಿ ಉಗ್ರಗಾಮಿಗಳು ಮುಖ್ಯವಾಗಿ ಭಾರತವನ್ನು ಗುರಿಯಾಗಿಸುವ ಹಿಂಸಾತ್ಮಕ ಕೃತ್ಯಗಳನ್ನು ರೂಪಿಸಲು, ಅವುಗಳಿಗೆ ಬೆಂಬಲ ನೀಡಲು ಮತ್ತು ನಿಧಿ ಸಂಗ್ರಹಿಸಲು ಕೆನಡದ ನೆಲವನ್ನು ಬಳಸುವುದನ್ನು ಮುಂದುವರಿಸಿದ್ದಾರೆ ಎಂಬುದಾಗಿ ಈ ವರ್ಷದ ಜೂನ್ ನಲ್ಲಿ ಕೆನಡದ ಉನ್ನತ ಗುಪ್ತಚರ ಸಂಸ್ಥೆ ‘ಕೆನಡಿಯನ್ ಸೆಕ್ಯುರಿಟಿ ಇಂಟಲಿಜನ್ಸ್ ಸರ್ವಿಸ್’ (ಸಿಎಸ್ಐಎಸ್) ಮೊದಲ ಬಾರಿಗೆ ಅಧಿಕೃತವಾಗಿ ಸಾರ್ವಜನಿಕ ಎಚ್ಚರಿಕೆ ನೀಡಿತ್ತು.
ಕೆನಡದ ನೆಲದಿಂದ ಖಾಲಿಸ್ತಾನಿ ಉಗ್ರಗಾಮಿಗಳು ಕಾರ್ಯಾಚರಿಸುತ್ತಿರುವ ಬಗ್ಗೆ ಭಾರತವು ಹಲವು ವರ್ಷಗಳಿಂದ ಕಳವಳವನ್ನು ವ್ಯಕ್ತಪಡಿಸುತ್ತಾ ಬಂದಿದೆ.
ಪಂಜಾಬ್ ನ ಒಳಗೆ ಖಾಲಿಸ್ತಾನ್ ಎಂಬ ಸ್ವತಂತ್ರ ದೇಶವೊಂದನ್ನು ಸ್ಥಾಪಿಸುವುದಕ್ಕಾಗಿ ಹಿಂಸಾತ್ಮಕ ವಿಧಾನಗಳನ್ನು ಬಳಸುವ ಮತ್ತು ಅವುಗಳಿಗೆ ಬೆಂಬಲ ನೀಡುವ ನಿಟ್ಟಿನಲ್ಲಿ ಕೆನಡದಲ್ಲಿ ನೆಲೆಸಿರುವ ಖಾಲಿಸ್ತಾನಿ ಉಗ್ರಗಾಮಿಗಳು 1980ರ ದಶಕದ ಮಧ್ಯ ಭಾಗದಿಂದಲೂ ಅಭಿಯಾನ ನಡೆಸುತ್ತಿದ್ದಾರೆ.