×
Ad

ಇಸ್ರೇಲ್-ಇರಾನ್ ಉದ್ವಿಗ್ನತೆ ಮಧ್ಯೆ ಜಾಗತಿಕವಾಗಿ ಗಮನ ಸೆಳೆದ ಖೊಮೇನಿ ಅವರ ಉತ್ತರಪ್ರದೇಶ ಬಾಂಧವ್ಯ

Update: 2025-06-20 19:50 IST

Photo | indiatoday

ಹೊಸದಿಲ್ಲಿ : ಇಸ್ರೇಲ್ ಮತ್ತು ಇರಾನ್ ನಡುವೆ ಉದ್ವಿಗ್ನತೆ ಮುಂದುವರಿದಿದೆ. ವಾಯುದಾಳಿಗಳು, ಬೆದರಿಕೆಗಳು ಮತ್ತು ವ್ಯಾಪಕ ವಿನಾಶಗಳ ಮಧ್ಯೆ ಭಾರತದ ಒಂದು ಸಣ್ಣ ಹಳ್ಳಿಯು ಜಾಗತಿಕ ಚರ್ಚೆಯ ಭಾಗವಾಗಿದೆ.

ಉತ್ತರ ಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿರುವ ಕಿಂತೂರ್ 1979ರ ಇಸ್ಲಾಮಿಕ್ ಕ್ರಾಂತಿಯ ಶಿಲ್ಪಿ ಮತ್ತು ಇಸ್ಲಾಮಿಕ್ ಗಣರಾಜ್ಯ ಇರಾನ್‌ನ ಸ್ಥಾಪಕ ಪಿತಾಮಹ ಅಯತೊಲ್ಲಾ ರುಹೊಲ್ಲಾ ಖೊಮೇನಿಯ ಪೂರ್ವಜರ ಜೊತೆ ಸಂಪರ್ಕವನ್ನು ಹೊಂದಿದೆ.

ಈ ಕಥೆಯು 1830ರ ಸುಮಾರಿಗೆ ಪ್ರಾರಂಭವಾಗಿದೆ. ಶಿಯಾ ಧರ್ಮಗುರು ಮತ್ತು ವಿದ್ವಾಂಸ ʼಸೈಯದ್ ಅಹ್ಮದ್ ಮುಸಾವಿ ಹಿಂದಿʼ ಉತ್ತರಪ್ರದೇಶದ ಬಾರಾಬಂಕಿ ಜಿಲ್ಲೆಯಲ್ಲಿರುವ ಕಿಂತೂರಿನಲ್ಲಿ ಜನಿಸಿದರು. ಬ್ರಿಟಿಷ್ ವಸಾಹತುಶಾಹಿ ಶಕ್ತಿ ವಿಸ್ತರಿಸುತ್ತಿದ್ದ ಮತ್ತು ಮೊಘಲ್ ಆಳ್ವಿಕೆ ಕ್ಷೀಣಿಸುತ್ತಿದ್ದ ಸಮಯದಲ್ಲಿ ಮುಸಾವಿ ಕಿಂತೂರನ್ನು ತೊರೆದು ಇರಾಕ್‌ನ ಪವಿತ್ರ ನಗರವಾದ ನಜಾಫ್‌ಗೆ ಭೇಟಿ ನೀಡಿದರು, ಅಲ್ಲಿ ಇಮಾಮ್ ಅಲಿಯ ಸಮಾಧಿ ಇತ್ತು. ಆ ಬಳಿಕ ಅವರು ಎಂದಿಗೂ ಭಾರತಕ್ಕೆ ಹಿಂತಿರುಗಲಿಲ್ಲ. ಅಲ್ಲಿಂದ ಅವರು ಇರಾನ್‌ಗೆ ತೆರಳಿದರು. ತಮ್ಮ ಹೆಸರಿಗೆ ʼಹಿಂದಿʼ ಎಂದು ಸೇರಿಸುವ ಮೂಲಕ ತಮ್ಮ ಭಾರತೀಯ ಗುರುತನ್ನು ಉಳಿಸಿಕೊಂಡಿದ್ದರು.

ಅಂತಿಮವಾಗಿ ಇರಾನಿನ ಪಟ್ಟಣವಾದ ಖೊಮೇನ್‌ನಲ್ಲಿ ಅವರು ನೆಲೆಸಿದರು. ಅವರ ಮಗ ಮುಸ್ತಫಾ ಹಿಂದಿ ಕೂಡ ಇಸ್ಲಾಂ ಭೋದಕರಾದರು ಮತ್ತು ಅವರ ಮೊಮ್ಮಗ ರುಹೊಲ್ಲಾ ಖೊಮೇನಿ ಇರಾನ್‌ನ ರಾಜಕೀಯ ಮತ್ತು ಧಾರ್ಮಿಕ ಚಿತ್ರಣವನ್ನು ಶಾಶ್ವತವಾಗಿ ಬದಲಾಯಿಸಿದ ಕ್ರಾಂತಿಯನ್ನು ಮುನ್ನಡೆಸಿದರು.

ಉತ್ತರಪ್ರದೇಶದ ಕಿಂತೂರಿನ ಮಹಲ್ ಮೊಹಲ್ಲಾ ಎಂಬಲ್ಲಿ ಅಯತೊಲ್ಲಾ ಖೊಮೇನಿಯವರ ಕುಟುಂಬವು ಇನ್ನೂ ವಾಸಿಸುತ್ತಿದೆ. ನಿಹಾಲ್ ಕಾಝ್ಮಿ, ಡಾ. ರೆಹಾನ್ ಕಾಝ್ಮಿ ಮತ್ತು ಆದಿಲ್ ಕಾಝ್ಮಿ ತಮ್ಮ ಪೂರ್ವಜರಾದ ʼಅಹ್ಮದ್ ಮುಸಾವಿ ಹಿಂದಿʼ ಅವರನ್ನು ಹೆಮ್ಮೆಯಿಂದ ಗುರುತಿಸುತ್ತಾರೆ. ಆಧುನಿಕ ಇರಾನ್‌ಅನ್ನು ರೂಪಿಸಿದ ವ್ಯಕ್ತಿಯ ನೇರ ವಂಶಸ್ಥರು ಎಂದು ತಮ್ಮನ್ನು ಕರೆದುಕೊಳ್ಳುತ್ತಾರೆ. ಅವರ ಮನೆಯ ಗೋಡೆಗಳಲ್ಲಿ ಖೊಮೇನಿಯ ಪೋಟೊಗಳು ಇನ್ನೂ ಇದೆ. ಅವರು ಭಾರತಕ್ಕಾಗಿ ತಮ್ಮ ಹೃದಯ ಮಿಡಿಯುವುದನ್ನು ತೋರಿಸಲು ತಮ್ಮ ಹೆಸರಿಗೆ 'ಹಿಂದಿ' ಸೇರಿಸಿಕೊಂಡರು" ಎಂದು ಆದಿಲ್ ಕಝ್ಮಿ ಹೇಳುತ್ತಾರೆ.

ನಾವು ಇರಾನ್‌ಗೆ ಭೇಟಿ ನೀಡಿ ಕಿಂತೂರಿನವರು ಎಂದು ಅಲ್ಲಿನ ಜನರಿಗೆ ಹೇಳಿದಾಗ, ಅವರು ನಮ್ಮನ್ನು ಬಹಳ ಗೌರವದಿಂದ ಸ್ವಾಗತಿಸಿದರು ಎಂದು ಆದಿಲ್ ಕಝ್ಮಿ ಹೇಳಿದರು. ಇದರಿಂದ ಅವರು ತಮ್ಮ ನಾಯಕ ಎಲ್ಲಿಂದ ಬಂದವರು ಎಂಬುದನ್ನು ನೆನಪಿಸಿಕೊಳ್ಳುತ್ತಿದ್ದರು ಎಂಬುದು ಸ್ಪಷ್ಟವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News