2025ರ ವಿಶ್ವಕಪ್ ನಂತರ ಏಕದಿನ ಕ್ರಿಕೆಟ್ ನಿಂದ ನಿವೃತ್ತಿಯಾಗಲು ಕಿವೀಸ್ ನಾಯಕಿ ಸೋಫಿ ಡಿವೈನ್ ನಿರ್ಧಾರ
ಸೋಫಿ ಡಿವೈನ್ |PC : BCCI
ವೆಲ್ಲಿಂಗ್ಟನ್: ಈ ವರ್ಷಾಂತ್ಯದಲ್ಲಿ ನಡೆಯಲಿರುವ ವಿಶ್ವಕಪ್ ಟೂರ್ನಿಯ ನಂತರ ಏಕದಿನ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ನಿವೃತ್ತಿಯಾಗುವೆ. ಪಂದ್ಯದಿಂದ ದೂರ ಸರಿಯಲು ಇದು ‘ಸರಿಯಾದ ಸಮಯ’ ಎಂದು ನ್ಯೂಝಿಲ್ಯಾಂಡ್ ಮಹಿಳೆಯರ ಕ್ರಿಕೆಟ್ ತಂಡದ ನಾಯಕಿ ಸೋಫಿ ಡಿವೈನ್ ಮಂಗಳವಾರ ಹೇಳಿದ್ದಾರೆ.
2020ರಿಂದ ನಾಯಕಿಯಾಗಿರುವ ಡಿವೈನ್ ಕಳೆದ ವರ್ಷ ದುಬೈನಲ್ಲಿ ನಡೆದಿದ್ದ ಟಿ-20 ವಿಶ್ವಕಪ್ ನಲ್ಲಿ ನ್ಯೂಝಿಲ್ಯಾಂಡ್ ತಂಡವು ಪ್ರಶಸ್ತಿ ಗೆಲ್ಲುವಲ್ಲಿ ನೇತೃತ್ವವಹಿಸಿದ್ದರು.
‘‘ನಿವೃತ್ತಿಯಾಗಲು ಇದು ಸೂಕ್ತ ಸಮಯವಾಗಿದೆ ಎಂದು ನನಗಿಸುತ್ತಿದೆ. ನಿವೃತ್ತಿಯಾಗುವ ಮೊದಲು ಈಗಿನ ತಂಡಕ್ಕೆ ನಾನು ಎಲ್ಲವನ್ನೂ ಸಮರ್ಪಿಸುವ ಕುರಿತಂತೆ ಗಮನ ನೀಡುತ್ತಿರುವೆ ಎಂದು ಎಲ್ಲರಿಗೂ ಗೊತ್ತಿದೆ. ಮುಂದಿನ ಆರರಿಂದ 9 ತಿಂಗಳಲ್ಲಿ ಯುವ ಆಟಗಾರ್ತಿಯರೊಂದಿಗೆ ನನ್ನಿಂದ ಸಾಧ್ಯವಾದಷ್ಟು ಉತ್ತಮ ಪ್ರದರ್ಶನ ನೀಡಲು ಎದುರು ನೋಡುತ್ತಿರುವೆ ’’ಎಂದು ಡಿವೈನ್ ಹೇಳಿದ್ದಾರೆ.
ಡಿವೈನ್ ಅವರು 152 ಏಕದಿನ ಹಾಗೂ 146 ಟಿ-20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.
ಟಿ-20 ಕ್ರಿಕೆಟ್ ಗೆ ಲಭ್ಯವಿರಲಿರುವ ಡಿವೈನ್ ತನ್ನ ಮಾನಸಿಕ ಆರೋಗ್ಯಕ್ಕೆ ಆದ್ಯತೆ ನೀಡಲು ಈ ವರ್ಷಾರಂಭದಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ನಿಂದ ವಿರಾಮ ಪಡೆದಿದ್ದರು. 2021ರಲ್ಲೂ ಇದೇ ಕಾರಣಕ್ಕೆ 2 ತಿಂಗಳು ವಿರಾಮ ಪಡೆದಿದ್ದರು.
ಮಹಿಳೆಯರ ಏಕದಿನ ವಿಶ್ವಕಪ್ ಟೂರ್ನಿಯು ಈ ವರ್ಷದ ಸೆಪ್ಟಂಬರ್‌ನಲ್ಲಿ ಆರಂಭವಾಗಿ ನವೆಂಬರ್ ತನಕ ಭಾರತ ಹಾಗೂ ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿದೆ.