1,000 ಕೋಟಿ.ರೂ. ಬ್ಯಾಂಕ್ ವಂಚನೆ ಪ್ರಕರಣ: ಕೋಲ್ಕತ್ತಾದ ಹಲವು ಸ್ಥಳಗಳಲ್ಲಿ ಸಿಬಿಐ ದಾಳಿ
ಸಾಂದರ್ಭಿಕ ಚಿತ್ರ | Photo Credit : PTI
ಕೋಲ್ಕತಾ, ಜ. 29: ಸುಮಾರು 1,000 ಕೋ.ರೂ.ಗಳ ಬ್ಯಾಂಕ್ ವಂಚನೆ ಆರೋಪದ ಕುರಿತ ತನಿಖೆಗೆ ಸಂಬಂಧಿಸಿ ಸಿಬಿಐ ಗುರುವಾರ ಇಲ್ಲಿನ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋಲ್ಕತಾ ಮೂಲದ ಹಣಕಾಸು ಕಂಪೆನಿಯ ಪ್ರವರ್ತಕರ ಕಚೇರಿಗಳು ಹಾಗೂ ನಿವಾಸಗಳ ಮೇಲೆ ಏಕ ಕಾಲದಲ್ಲಿ ಶೋಧ ಕಾರ್ಯ ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.
ಶೋಧ ಕಾರ್ಯಾಚರಣೆ ನಡೆಯುತ್ತಿರುವ ಸಂದರ್ಭ ಸ್ಥಳದಲ್ಲಿ ಹೆಚ್ಚುವರಿ ಕೇಂದ್ರ ಪಡೆಗಳನ್ನು ನಿಯೋಜಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.
‘‘ಸಾರ್ವಜನಿಕ ರಂಗ ದ ಬ್ಯಾಂಕ್ಗೆ ದೊಡ್ಡ ಮಟ್ಟದಲ್ಲಿ ವಂಚಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಲಿಪೋರೆ ಸೇರಿದಂತೆ ಹಲವು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಯಿತು’’ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಪೂರ್ವ ಕೋಲ್ಕತಾ ಮೂಲದ ಹಣಕಾಸು ಕಂಪೆನಿಯೊಂದು ಸಾಲದ ಹೆಸರಿನಲ್ಲಿ ಹಣ ವಂಚಿಸಿದೆ ಎಂದು ಬ್ಯಾಂಕ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಸಿಬಿಐ ತನಿಖೆ ಆರಂಭಿಸಿತ್ತು.
2020 ಹಾಗೂ 2024ರ ನಡುವೆ ಹಣವನ್ನು ಬೇರೆಡೆ ವರ್ಗಾಯಿಸಲಾಗಿದೆ ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಹಣಕಾಸು ಕಂಪೆನಿಯ ಇಬ್ಬರು ನಿರ್ದೇಶಕರು ಹಾಗೂ ಅದರ ಒಂದು ಸಹ ಸಂಸ್ಥೆಯ ವಿರುದ್ಧ ಈ ಆರೋಪ ಮಾಡಲಾಗಿದೆ. ಎರಡು ಕಂಪೆನಿಗಳು ಸಾಲಕ್ಕಾಗಿ ಸಾರ್ವಜನಿಕ ರಂಗ ದ ಬ್ಯಾಂಕ್ವೊಂದನ್ನು ಸಂಪರ್ಕಿಸಿವೆ ಹಾಗೂ ತಮ್ಮ ಅರ್ಜಿಗೆ ಬೆಂಬಲವಾಗಿ ದಾಖಲೆಗಳನ್ನು ಸಲ್ಲಿಸಿವೆ.
ಬ್ಯಾಂಕ್ನ ದೂರಿನ ಪ್ರಕಾರ, ಒಂದು ಕಂಪೆನಿ ಆರಂಭದಲ್ಲಿ 730.82 ಕೋ.ರೂ ಮಂಗಡ ಪಡೆದುಕೊಂಡಿತ್ತು. ಸಹವರ್ತಿ ಕಂಪೆನಿ 260.20 ಕೋ.ರೂ. ಸಾಲ ಪಡೆದುಕೊಂಡಿತ್ತು. ಹೆಚ್ಚುವರಿ ಸಾಲವನ್ನು ಬ್ಯಾಂಕ್ ಹಂತ ಹಂತವಾಗಿ ಮಂಜೂರು ಮಾಡಿತ್ತು ಎಂದು ಸಿಬಿಐ ಅಧಿಕಾರಿಗಳು ತಿಳಿಸಿದ್ದಾರೆ.
ಎರಡೂ ಕಂಪೆನಿಗಳು ಸಾಲ ಒಪ್ಪಂದವನ್ನು ಉಲ್ಲಂಘಿಸಿವೆ ಹಾಗೂ ಕಂತುಗಳನ್ನು ಸಕಾಲಿಕವಾಗಿ ಮರು ಪಾವತಿಸುವಲ್ಲಿ ವಿಫಲವಾಗಿವೆ ಎಂದು ಅವರು ಹೇಳಿದ್ದಾರೆ.
ಪ್ರಾಥಮಿಕ ವಿಚಾರಣೆಯ ನಂತರ, ಎರಡೂ ಕಂಪೆನಿಗಳು ಕನಿಷ್ಠ ಆರು ಇತರ ಬ್ಯಾಂಕ್ಗಳಿಂದ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದಿವೆ. ಆದರೆ, ಮರು ಪಾವತಿಸಿಲ್ಲ ಎಂದು ಸಿಬಿಐ ಹೇಳಿದೆ.
1,000 ಕೋಟಿ. ರೂ. ವಂಚನೆಗೆ ಸಂಬಂಧಿಸಿ 2023ರಲ್ಲಿ ಸಾರ್ವಜನಿಕ ರಂಗ ದ ಬ್ಯಾಂಕ್ನ ಇಬ್ಬರು ಅಧಿಕಾರಿಗಳು ಸಿಬಿಐಗೆ ಔಪಚಾರಿಕ ದೂರು ಸಲ್ಲಿಸಿದ್ದರು. ಅನಂತರ ಸಿಬಿಐ ಎರಡು ಕಂಪೆನಿಗಳು ಹಾಗೂ ಅದರ ಪ್ರವರ್ತಕರ ವಿರುದ್ಧ ಪ್ರಕರಣ ದಾಖಲಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.