×
Ad

ಕೃಷ್ಣ ಜನ್ಮಭೂಮಿ ಪ್ರಕರಣ: ಮುಸ್ಲಿಮ್ ಕಕ್ಷಿದಾರರ ಅರ್ಜಿ ತಿರಸ್ಕರಿಸಿದ ಅಲಹಾಬಾದ್ ಹೈಕೋರ್ಟ್

Update: 2024-08-01 17:18 IST

ಅಲಹಾಬಾದ್ ಹೈಕೋರ್ಟ್ | PC : PTI

ಅಲಹಾಬಾದ್: ಮಥುರಾದ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದದಲ್ಲಿ ಹಿಂದುಗಳು ದಾಖಲಿಸಿರುವ ಮೊಕದ್ದಮೆಯ ಅಂಗೀಕಾರಾರ್ಹತೆಯನ್ನು ಪ್ರಶ್ನಿಸಿ ಮುಸ್ಲಿಮ್ ಕಕ್ಷಿದಾರರು ಸಲ್ಲಿಸಿದ್ದ ಅರ್ಜಿಯನ್ನು ಅಲಹಾಬಾದ್ ಉಚ್ಚ ನ್ಯಾಯಾಲಯವು ಗುರುವಾರ ತಿರಸ್ಕರಿಸಿದೆ.

ಆದೇಶ 7 ನಿಯಮ 11 ಸಿಪಿಸಿ ಅಡಿ ಶಾಹಿ ಈದ್ಗಾ ಮಸೀದಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ ಏಕ ನ್ಯಾಯಾಧೀಶ ಪೀಠವು, ಹಿಂದುಗಳ ಎಲ್ಲ 18 ಮೊಕದ್ದಮೆಗಳು ಅಂಗೀಕಾರಾರ್ಹವಾಗಿವೆ ಎಂದು ಹೇಳಿತು.

ಕೃಷ್ಣ ಜನ್ಮಭೂಮಿ ದೇವಸ್ಥಾನಕ್ಕೆ ಹೊಂದಿಕೊಂಡಿರುವ ಶಾಹಿ ಈದ್ಗಾ ಮಸೀದಿಯನ್ನು ‘ತೆಗೆದುಹಾಕುವಂತೆ’ ಹಲವಾರು ಮೊಕದ್ದಮೆಗಳಲ್ಲಿ ಕೋರಲಾಗಿದ್ದು, ಔರಂಗ್‌ಝೇಬ್ ಕಾಲದ ಮಸೀದಿಯನ್ನು ದೇವಸ್ಥಾನವನ್ನು ನೆಲಸಮಗೊಳಿಸಿದ ಬಳಿಕ ನಿರ್ಮಿಸಲಾಗಿತ್ತು ಎಂದು ಅರ್ಜಿದಾರರು ಪ್ರತಿಪಾದಿಸಿದ್ದಾರೆ.

ಮಸೀದಿ ಆಡಳಿತ ಸಮಿತಿಯು ತನ್ನ ಅರ್ಜಿಯಲ್ಲಿ ಈ ದಾವೆಗಳನ್ನು ಪ್ರಶ್ನಿಸಿತ್ತು.

ಹಿಂದು ಆರಾಧಕರು ಮತ್ತು ದೇವತೆ ಸಲ್ಲಿಸಿರುವ ದಾವೆಗಳು ಲಿಮಿಟೇಷನ್ ಕಾಯ್ದೆ ಅಥವಾ ಪೂಜಾಸ್ಥಳಗಳ ಕಾಯ್ದೆ ಅಥವಾ ಇತರ ಯಾವುದೇ ಕಾನೂನುಗಳಿಂದ ನಿರ್ಬಂಧಿಸಲ್ಪಟ್ಟಿಲ್ಲ ಎಂದು ಪೀಠವು ಘೋಷಿಸಿತು.

ಶಾಹಿ ಈದ್ಗಾ ಮಸೀದಿಯ ಹೆಸರಿನಲ್ಲಿಯ ಆಸ್ತಿಯನ್ನು ಯಾವುದೇ ಸರಕಾರಿ ದಾಖಲೆಯಲ್ಲಿ ಉಲ್ಲೇಖಿಸಿಲ್ಲ ಮತ್ತು ಮಸೀದಿಯು ಅತಿಕ್ರಮಣ ಕಟ್ಟಡವಾಗಿದೆ ಎಂದು ತಮ್ಮ ಅರ್ಜಿಯಲ್ಲಿ ಪ್ರತಿಪಾದಿಸಿರುವ ಹಿಂದು ಅರ್ಜಿದಾರರು, ಸದ್ರಿ ಆಸ್ತಿಯು ವಕ್ಫ್ ಆಸ್ತಿಯಾಗಿದ್ದರೆ ಮಸೀದಿ ಸಮಿತಿಯು ವಿವಾದಿತ ಆಸ್ತಿಯ ದಾನಿಯ ಕುರಿತು ಮಾಹಿತಿಯನ್ನು ಒದಗಿಸಬೇಕು ಎಂದು ವಾದಿಸಿದರು. ಪೂಜಾಸ್ಥಳಗಳ ಕಾಯ್ದೆ, ಲಿಮಿಟೇಷನ್ ಕಾಯ್ದೆ ಮತ್ತು ವಕ್ಫ್ ಕಾಯ್ದೆ ಈ ಪ್ರಕರಣದಲ್ಲಿ ಅನ್ವಯಿಸುವುದಿಲ್ಲ ಎಂದೂ ಅವರು ವಾದಿಸಿದರು.

ಮಥುರಾದಲ್ಲಿ 13.37 ಎಕರೆ ಸಂಕೀರ್ಣವನ್ನು ಕತ್ರಾ ಕೇಶವ ದೇವ ದೇವಸ್ಥಾನದೊಂದಿಗೆ ಹಂಚಿಕೊಂಡಿರುವ ಶಾಹಿ ಈದ್ಗಾ ಮಸೀದಿಯನ್ನು ಅಲ್ಲಿಂದ ತೆಗೆಯಬೇಕು ಎನ್ನುವುದು ಹಿಂದುಗಳು ದಾಖಲಿಸಿರುವ ದಾವೆಗಳಲ್ಲಿ ಸಾಮಾನ್ಯ ಕೋರಿಕೆಯಾಗಿದೆ. ಹೆಚ್ಚುವರಿ ಕೋರಿಕೆಗಳಲ್ಲಿ ಶಾಹಿ ಈದ್ಗಾ ಆವರಣವನ್ನು ಸ್ವಾಧೀನ ಪಡಿಸಿಕೊಳ್ಳುವುದು ಸೇರಿದೆ.

ಆಸ್ತಿಗಳನ್ನು ಅತಿಕ್ರಮಿಸಿಕೊಂಡು ಅವುಗಳನ್ನು ತನ್ನ ಸ್ವಂತದ್ದನ್ನಾಗಿ ಮಾಡಿಕೊಳ್ಳುವುದು ವಕ್ಫ್‌ನ ಅಭ್ಯಾಸವಾಗಿದೆ. ಇದಕ್ಕೆ ಅವಕಾಶ ನೀಡಕೂಡದು. ವಿವಾದಿತ ಆಸ್ತಿಯು ವಕ್ಫ್ ಆಸ್ತಿ ಎಂದ ವರ್ಗೀಕರಣಗೊಂಡಿಲ್ಲ, ಹೀಗಾಗಿ ವಕ್ಫ್ ಕಾಯ್ದೆಯ ನಿಬಂಧನೆಗಳನ್ನು ಈ ಪ್ರಕರಣದಲ್ಲಿ ಅನ್ವಯಿಸಬಾರದು ಎಂದೂ ಹಿಂದು ಅರ್ಜಿದಾರರು ವಾದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News