ಕುಕಿ ಗುಂಪುಗಳೊಂದಿಗಿನ ಶಾಂತಿ ಒಪ್ಪಂದ ರದ್ದು ಪಡಿಸಲು 4 ಸಂಘಟನೆಗಳ ಮನವಿ
PC : ANI
ಗುವಾಹಟಿ: ಕುಕಿ ಉಗ್ರಗಾಮಿ ಗುಂಪುಗಳೊಂದಿಗೆ ಮಾಡಿಕೊಂಡಿರುವ ‘ಕಾರ್ಯಾಚರಣೆ ಅಮಾನತು’ ಒಪ್ಪಂದಗಳನ್ನು ನವೀಕರಿಸಬಾರದು ಎಂದು ಮೆತೈ, ನಾಗಾ ಮತ್ತು ತಡೌ ಸಮುದಾಯಗಳನ್ನು ಪ್ರತಿನಿಧಿಸುವ ಮಣಿಪುರದ ನಾಲ್ಕು ಸಂಘಟನೆಗಳು ಕೆಂದ್ರ ಸರಕಾರಕ್ಕೆ ಮನವಿ ಮಾಡಿವೆ. ಕುಕಿ ಉಗ್ರಗಾಮಿಗಳು ಒಪ್ಪಂದದ ಶರತ್ತುಗಳನ್ನು ಪದೇ ಪದೇ ಉಲ್ಲಂಘಿಸಿದ್ದಾರೆ ಹಾಗೂ ಕಾನೂನು ಮತ್ತು ವ್ಯವಸ್ಥೆ ಪಾಲನೆಯಲ್ಲಿ ವಿಫಲರಾಗಿದ್ದಾರೆ ಎಂಬುದಾಗಿ ಈ ಸಂಘಟನೆಗಳು ಆರೋಪಿಸಿವೆ.
ಇಂಡೀಜನಸ್ ಪೀಪಲ್ಸ್ ಫೋರಮ್ ಮಣಿಪುರ, ಮೆತೈ ಅಲಯನ್ಸ್, ಫೂಟ್‌ಹಿಲ್ ನಾಗಾ ಕೋಆರ್ಡಿನೇಶನ್ ಕಮಿಟಿ ಮತ್ತು ತಡೌ ಇನ್ಪಿ ಮಣಿಪುರ ಸಂಘಟನೆಗಳು ಈ ಮನವಿ ಮಾಡಿವೆ.
ಕುಕಿ ಗುಂಪುಗಳೊಂದಿಗಿನ ಶಾಂತಿ ಒಪ್ಪಂದಗಳನ್ನು ರದ್ದುಪಡಿಸಬೇಕೆಂದು ಕೋರುವ ಜಂಟಿ ಮನವಿಯನ್ನು ಈ ಸಂಘಟನೆಗಳು ಗುರುವಾರ ಕೇಂದ್ರ ಗೃಹ ಸಚಿವ ಅಮಿತ್ ಶಾರಿಗೆ ಸಲ್ಲಿಸಿವೆ.
ಚುರಚಾಂದ್‌ಪುರದಲ್ಲಿ 2023 ಮೇ 3ರಂದು ಆರಂಭವಾದ ಹಿಂಸಾಚಾರವನ್ನು ಪ್ರಚೋದಿಸಿರುವುದು ಕುಕಿ ನ್ಯಾಶನಲ್ ಆರ್ಗನೈಸೇಶನ್ (ಕೆಎನ್‌ಒ) ಅಡಿಯಲ್ಲಿ ಬರುವ 25 ಗುಂಪುಗಳು ಎಂದು ಈ ನಾಲ್ಕು ಗುಂಪುಗಳು ಹೇಳಿವೆ.