ಜಮೀನು ವಿವಾದ: ವ್ಯಕ್ತಿಯ ಮೇಲೆ ಟ್ರ್ಯಾಕ್ಟರ್ ಹರಿಸಿ ಕೊಲೆ
Photo : twitter/eOrganiser
ಜೈಪುರ: ಎರಡು ಕುಟುಂಬಗಳ ನಡುವಿನ ಜಮೀನು ವಿವಾದಕ್ಕೆ ಸಂಬಂಧಿಸಿ ಬುಧವಾರ ರಾಜಸ್ಥಾನದ ಭರತ್ಪುರದಲ್ಲಿ ನಡೆದ ಘರ್ಷಣೆಯಲ್ಲಿ, ಓರ್ವ ವ್ಯಕ್ತಿಯನ್ನು ಟ್ರ್ಯಾಕ್ಟರ್ ಮೂಲಕ ಪದೇ ಪದೇ ನೆಲಕ್ಕುರುಳಿಸುವುದನ್ನು ತೋರಿಸುವ ವೀಡಿಯೊ ಒಂದು ವೈರಲ್ ಆಗಿದೆ.
ಟ್ರ್ಯಾಕ್ಟರ್ ಚಾಲಕನು ನರ್ಪತ್ ಸಿಂಗ್ ಗುಜ್ಜರ್ ಎಂಬವರ ಮೇಲೆ ಕನಿಷ್ಠ 8 ಬಾರಿ ಟ್ರ್ಯಾಕ್ಟರ್ ಚಲಾಯಿಸುತ್ತಿರುವುದನ್ನು ವೀಡಿಯೊ ತೋರಿಸುತ್ತದೆ. ನರ್ಪತ್ ಸಿಂಗ್ ಗುಜ್ಜರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಆರೋಪಿ ಸೇರಿದಂತೆ ಐವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಘರ್ಷಣೆಯಲ್ಲಿ ಗಾಯಗೊಂಡಿರುವ ಸುಮಾರು ಆರು ಮಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಹಾದುರ್ ಸಿಂಗ್ ಗುರ್ಜರ್ ಮತ್ತು ಅತರ್ ಸಿಂಗ್ ಗುರ್ಜರ್ ಕುಟುಂಬಗಳ ನಡುವೆ ಜಮೀನು ವಿಚಾರದಲ್ಲಿ ಮೂರು ದಿನಗಳ ಹಿಂದೆ ಘರ್ಷಣೆಯಾಗಿತ್ತು. ಬುಧವಾರ, ಬಹಾದುರ್ ಕುಟುಂಬವು ಟ್ರ್ಯಾಕ್ಟರ್ನಲ್ಲಿ ವಿವಾದಿತ ಸ್ಥಳಕ್ಕೆ ಬಂತು. ಎದುರಾಳಿ ಕುಟುಂಬವೂ ಸ್ಥಳಕ್ಕೆ ಬಂದಾಗ ಮತ್ತೊಮ್ಮೆ ಮತ್ತೆ ಘರ್ಷಣೆಯಾಯಿತು. ಎರಡೂ ಕುಟುಂಬಗಳ ಸದಸ್ಯರು ಪರಸ್ಪರ ಹೊಡೆದಾಡಿಕೊಂಡರು. ಅತರ್ ಸಿಂಗ್ರ ಮಗ ನರ್ಪತ್ ಘರ್ಷಣೆಯ ವೇಳೆ ಕೆಳಗೆ ಬಿದ್ದಾಗ ಟ್ರ್ಯಾಕ್ಟರ್ ಚಾಲಕನು ಅವರ ಮೇಲೆ ನಿರಂತರವಾಗಿ ಟ್ರ್ಯಾಕ್ಟರ್ ಚಲಾಯಿಸಿದನು ಎನ್ನಲಾಗಿದೆ.