ಉತ್ತರಾಖಂಡದ ಪೌಡಿಯಲ್ಲಿ ಚಿರತೆ ಹಾವಳಿ: ಆನ್ ಲೈನ್ ತರಗತಿಗೆ ಬದಲಾದ 55 ಶಾಲೆಗಳು
Photo : Meta AI
ಡೆಹ್ರಾಡೂನ್: ಪದೇ ಪದೇ ನೈಸರ್ಗಿಕ ಪ್ರಕೋಪಗಳು ಮತ್ತು ಕಾಡ್ಗಿಚ್ಚುಗಳ ನಡುವೆ ಉತ್ತರಾಖಂಡದಲ್ಲಿ ಈಗ ಮಾನವ-ವನ್ಯಜೀವಿ ಸಂಘರ್ಷಗಳು ಆತಂತಕಾರಿಯಾಗಿ ಹೆಚ್ಚುತ್ತಿವೆ. ಪೌಡಿ ಜಿಲ್ಲೆಯಲ್ಲಿ ಚಿರತೆಯೊಂದರ ಹಾವಳಿಯಿಂದಾಗಿ ಶಿಕ್ಷಣ ಇಲಾಖೆಯು 55 ಶಾಲೆಗಳನ್ನು ತಾತ್ಕಾಲಿಕವಾಗಿ ಮುಚ್ಚಿದ್ದು, ವಿದ್ಯಾರ್ಥಿಗಳಿಗಾಗಿ ಆನ್ಲೈನ್ ತರಗತಿಗಳಿಗೆ ಮೊರೆ ಹೋಗಿದೆ.
ಚಿರತೆಯ ಭೀತಿಯೊಂದಾಗಿ ಪೌಡಿಯಲ್ಲಿ ಲಾಕ್ ಡೌನ್ ನಂತಹ ಸ್ಥಿತಿ ಸೃಷ್ಟಿಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ.
ಕಳೆದ ವಾರ ಹಾಡಹಗಲೇ ಚಿರತೆ ವ್ಯಕ್ತಿಯೋರ್ವನ ಮೇಲೆ ದಾಳಿ ನಡೆಸಿ ಕೊಂದುಹಾಕಿದ ಬಳಿಕ ಪರಿಸ್ಥಿತಿ ತೀರ ಉಲ್ಬಣಿಸಿದೆ. ಸ್ಥಳೀಯರು ತ್ವರಿತ ಕ್ರಮವನ್ನು ಕೈಗೊಳ್ಳುವಂತೆ ಮತ್ತು ನರಭಕ್ಷಕ ಚಿರತೆಯನ್ನು ತಕ್ಷಣ ಕೊಲ್ಲುವಂತೆ ಆಗ್ರಹಿಸಿ ಪ್ರತಿಭಟನೆಗಳನ್ನು ನಡೆಸಿದ್ದಾರೆ.
ಚಿರತೆಯನ್ನು ಸೆರೆ ಹಿಡಿಯಲು ಅಥವಾ ಕೊಲ್ಲಲು ಅರಣ್ಯ ಇಲಾಖೆ ಹೆಣಗಾಡುತ್ತಿದೆ, ಆದರೆ ಅದು ಮಾತ್ರ ಯಾರ ಕೈಗೂ ಸಿಕ್ಕಿಲ್ಲ. ಇದು ಪೌಡಿಯಾದ್ಯಂತ ಭೀತಿಯನ್ನು ಇನ್ನಷ್ಟು ಹೆಚ್ಚಿಸಿದೆ.