×
Ad

ಮುಂಬೈನಲ್ಲಿ ಬಾಲಿವುಡ್- ಫುಟ್‌ಬಾಲ್ ಸಂಗಮದಲ್ಲಿ ಲಿಯೊನೆಲ್ ಮೆಸ್ಸಿ ರ‍್ಯಾಂಪ್ ವಾಕ್ !

Update: 2025-12-10 16:18 IST

ಲಿಯೊನೆಲ್ ಮೆಸ್ಸಿ | Photo Credit : PTI 

ಫುಟ್‌ಬಾಲ್ ದಿಗ್ಗಜ ಲಿಯೊನೆಲ್ ಮೆಸ್ಸಿಯ ಭಾರತ ಪ್ರವಾಸಕ್ಕೆ ಬಾಲಿವುಡ್ ಸಜ್ಜಾಗುತ್ತಿದೆ. ಜಾಗತಿಕ ಫುಟ್‌ಬಾಲ್ ದಿಗ್ಗಜರು ಬಾಲಿವುಡ್ ಗ್ಲಾಮರ್‌ ಜೊತೆಗೆ ಮೇಳೈಸುವ ಅದ್ದೂರಿ ಕಾರ್ಯಕ್ರಮಕ್ಕಾಗಿ ಮನರಂಜನಾ ಜಗತ್ತು ಸಿದ್ಧವಾಗುತ್ತಿದೆ. ಲಿಯೊನೆಲ್ ಮೆಸ್ಸಿ ಭಾರತ ಪ್ರವಾಸದ ಸಂದರ್ಭದಲ್ಲಿ ಇತರ ಫುಟ್‌ಬಾಲ್ ಆಟಗಾರರಾದ ಲೂಯಿಸ್ ಸೌರೆಜ್ ಮತ್ತು ರೊಡ್ರಿಗೊ ಡಿ ಪಾಲ್ ಅವರೊಂದಿಗೆ ಮುಂಬೈನಲ್ಲಿ ರ‍್ಯಾಂಪ್ ವಾಕ್ ಮಾಡಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಬಾಲಿವುಡ್‌ನ ದಿಗ್ಗಜರು ಭಾಗವಹಿಸುವ ನಿರೀಕ್ಷೆಯಿದೆ.

ಬಾಲಿವುಡ್‌-ಫುಟ್‌ಬಾಲ್ ಸಂಗಮ

ಮೆಸ್ಸಿ ಮತ್ತು ಇತರ ಫುಟ್‌ಬಾಲ್ ಆಟಗಾರರು ಡಿಸೆಂಬರ್ 14ರಂದು ಮುಂಬೈನಲ್ಲಿ 45 ನಿಮಿಷಗಳ ಫ್ಯಾಷನ್‌ ಶೋನಲ್ಲಿ ಭಾಗವಹಿಸಲಿದ್ದಾರೆ. ಇದು ದತ್ತಿ ಕಾರ್ಯಕ್ರಮವಾಗಿದ್ದು, ಟೈಗರ್ ಶ್ರಾಫ್, ಜಾಕಿ ಶ್ರಾಫ್ ಮತ್ತು ಜಾನ್‌ ಅಬ್ರಾಹಾಂ ಸೇರಿದಂತೆ ಬಾಲಿವುಡ್‌ನ ಖ್ಯಾತನಾಮರು ರ‍್ಯಾಂಪ್ ಮೇಲೆ ನಡೆಯಲಿದ್ದಾರೆ.

14 ವರ್ಷಗಳ ನಂತರದ ಆಗಮನ

ಮುಂಬೈಗೆ ಬಂದಿಳಿಯಲಿರುವ ಮೆಸ್ಸಿ ಪ್ರಸಿದ್ಧ ವಾಂಖೆಡೆ ಸ್ಟೇಡಿಯಂನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಂತರ ಕೋಲ್ಕತ್ತಾ, ಹೈದರಾಬಾದ್ ಮತ್ತು ಹೊಸದಿಲ್ಲಿಗೂ ಭೇಟಿ ನೀಡಲಿದ್ದಾರೆ. ಈ ಹಿಂದೆ 2011ರಲ್ಲಿ ಮೆಸ್ಸಿ ಭಾರತಕ್ಕೆ ಆಗಮಿಸಿದ್ದರು. ಆಗ ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಅರ್ಜೆಂಟಿನಾದ ತಂಡ ವೆನೆಜುವೆಲಾ ವಿರುದ್ಧ ಸ್ನೇಹಪರ ಪಂದ್ಯದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಸ್ಟೇಡಿಯಂ ತುಂಬಿ ತುಳುಕಿತ್ತು ಮತ್ತು ಫುಟ್‌ಬಾಲ್ ಪ್ರೇಮಿಗಳು ಬಹಳ ಹುರುಪಿನಿಂದ ಭಾಗವಹಿಸಿದ್ದರು.

ಇದೀಗ ಡಿಸೆಂಬರ್‌ನಲ್ಲಿ 14 ವರ್ಷಗಳ ನಂತರ ಮೆಸ್ಸಿ ಭಾರತ ಪ್ರವಾಸದಲ್ಲಿ ಒಂದೇ ಪಂದ್ಯದಲ್ಲಿ ಆಡಲಿದ್ದಾರೆ. ಇದು ಕ್ರೀಡೆಗಿಂತ ಹೆಚ್ಚಾಗಿ ಅಭಿಮಾನಿಗಳನ್ನು ರಂಜಿಸಲಿರುವ ಆಗಮನವಾಗಲಿದೆ. ಅಭಿಮಾನಿಗಳನ್ನು ಭೇಟಿಯಾಗುವ ಸೆಶನ್‌ಗಳು, ಯುವ ಫುಟ್‌ಬಾಲ್ ಕ್ಲಿನಿಕ್‌ಗಳು, ಕಾರ್ಯಾಗಾರಗಳು ಮತ್ತು ಇತರ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಹೈದರಾಬಾದ್‌ನಲ್ಲಿ ಗೋಟ್ ಕಪ್‌

ಹೈದರಾಬಾದ್‌ನಲ್ಲಿ ಅವರು ಸಂಜೆ 7 ಗಂಟೆಯಿಂದ ಉಪ್ಪಲ್‌ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈದರಾಬಾದ್ ಗೋಟ್ ಕಪ್‌ನಲ್ಲಿ ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಭಾಗವಹಿಸುವ ನಿರೀಕ್ಷೆಯಿದೆ.

ಮೆಸ್ಸಿಮಯವಾಗಲಿರುವ ಕೋಲ್ಕತ್ತಾ

ಕೋಲ್ಕತ್ತಾದ ಶ್ರೀಭೂಮಿಯಲ್ಲಿ ತಮ್ಮ 70 ಅಡಿಯ ಪ್ರತಿಮೆಯನ್ನು ಲಿಯೊನೆಲ್ ಮೆಸ್ಸಿ ಉದ್ಘಾಟಿಸಲಿದ್ದಾರೆ. ಭದ್ರತಾ ಕಾರಣಗಳಿಂದಾಗಿ ಮೆಸ್ಸಿ ತಮ್ಮ ಹೊಟೇಲ್‌ನಿಂದಲೇ ವರ್ಚುವಲ್ ಆಗಿ ಇದನ್ನು ಉದ್ಘಾಟಿಸಲಿದ್ದಾರೆ. ಸ್ಥಳದಲ್ಲಿ ಉದ್ಘಾಟನೆಗೆ ಪೊಲೀಸರು ಅನುಮತಿ ನೀಡಲಿಲ್ಲ.

ಕೋಲ್ಕತ್ತಾ ಕ್ರೀಡಾಂಗಣದ ಕಾರ್ಯಕ್ರಮದಲ್ಲಿ 70,000ಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಟಿಕೆಟ್‌ಗೆ ಅತಿಯಾದ ಬೇಡಿಕೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News