ಲೋಕಸಭೆಯಲ್ಲಿ ನೂತನ ಹಾಜರಾತಿ ವ್ಯವಸ್ಥೆಯಿಂದ ಪ್ರಧಾನಿ, ಸಚಿವರಿಗೇಕೆ ವಿನಾಯಿತಿ?: ಪ್ರಶ್ನಿಸಿದ ಕಾಂಗ್ರೆಸ್ ಸಂಸದ
ಲೋಕಸಭ | PC : PTI
ಹೊಸದಿಲ್ಲಿ: ಮುಂಬರುವ ಮಳೆಗಾಲದ ಅಧಿವೇಶನದಿಂದ ಬಹು ಮಾಧ್ಯಮ ಸಾಧನ ಆಧಾರಿತ ಹಾಜರಾತಿ ವ್ಯವಸ್ಥೆ ಜಾರಿಗೊಳಿಸಲು ಲೋಕಸಭೆ ಸಜ್ಜಾಗಿದ್ದು, ಇದೊಂದು ‘ದೋಷಪೂರಿತ’ ಕ್ರಮ ಎಂದು ಮಂಗಳವಾರ ಬಣ್ಣಿಸಿರುವ ಕಾಂಗ್ರೆಸ್ ಸಚೇತಕ ಮಾಣಿಕಂ ಟಾಗೋರ್ ಅವರು, ಉತ್ತರದಾಯಿತ್ವವನ್ನು ಖಚಿತಪಡಿಸುವುದು ಗುರಿಯಾಗಿದ್ದರೆ ಪ್ರಧಾನಿ ಮತ್ತು ಸಚಿವರಿಗೆ ಏಕೆ ವಿನಾಯಿತಿಯನ್ನು ನೀಡಲಾಗಿದೆ ಎಂದು ಪ್ರಶ್ನಿಸಿದ್ದಾರೆ.
ನೂತನ ವ್ಯವಸ್ಥೆಯಲ್ಲಿ ಸಂಸದರು ತಮಗೆ ಹಂಚಿಕೆಯಾದ ಆಸನಗಳಿಂದ ವಿದ್ಯುನ್ಮಾನ ರೂಪದಲ್ಲಿ ತಮ್ಮ ಉಪಸ್ಥಿತಿಯನ್ನು ದಾಖಲಿಸಬೇಕಾಗುತ್ತದೆ. ಇದು ಲಾಬಿಯಲ್ಲಿ ಹಾಜರಿ ಪುಸ್ತಕದಲ್ಲಿ ಸಹಿ ಹಾಕುವ ಈಗಿನ ಪದ್ಧತಿಯನ್ನು ಬದಲಿಸಲಿದೆ.
ಲಾಬಿಯಲ್ಲಿ ಹಲವೊಮ್ಮೆ ಸಂಸದರ ದಟ್ಟಣೆಯಿರುವುದರಿಂದ ನೂತನ ಕ್ರಮವು ಸಮಯವನ್ನು ಉಳಿಸುತ್ತದೆ ಎಂದು ತಿಳಿಸಿದ ಅಧಿಕಾರಿಗಳು,ಕೆಲವು ಸಂಸದರು ಹಾಜರಿ ಪುಸ್ತಕದಲ್ಲಿ ಸಹಿ ಹಾಕಿದರೂ ಕಲಾಪಗಳಿಗೆ ಹಾಜರಾಗದೆ ಹೊರಟು ಹೋಗುತ್ತಾರೆ ಎಂದು ತಿಳಿಸಿದರು.
ಆದರೆ,ಟಾಗೋರ್ ಎಕ್ಸ್ ಪೋಸ್ಟ್ ನಲ್ಲಿ ವಕ್ಫ್ ಮಂಡಳಿ ಮೇಲೆ ಮತದಾನದ ಸಂದರ್ಭದಲ್ಲಿ ವ್ಯವಸ್ಥೆ ವಿಫಲಗೊಂಡಿದ್ದ ಹಿಂದಿನ ನಿದರ್ಶನವನ್ನು ಉಲ್ಲೇಖಿಸಿ ಕಳವಳಗಳನ್ನು ವ್ಯಕ್ತಪಡಿಸಿದ್ದಾರೆ. ದೋಷಪೂರಿತ ವ್ಯವಸ್ಥೆಯ ಪುನರಾವರ್ತನೆ ಏಕೆ ಎಂದು ಪ್ರಶ್ನಿಸಿದ್ದಾರೆ.
ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಹಾಜರಾತಿ ದಾಖಲಿಸುವಿಕೆಯ ಉದ್ದೇಶವಾಗಿದ್ದರೆ ಪ್ರಧಾನಿ ಮತ್ತು ಸಚಿವರಿಗೇಕೆ ವಿನಾಯಿತಿ ನೀಡಲಾಗಿದೆ ಎಂದು ಪ್ರಶ್ನಿಸಿರುವ ಅವರು,ಪ್ರಧಾನಿ ಸಾಮಾನ್ಯವಾಗಿ ಅಧಿವೇಶನದಲ್ಲಿ 18ರಿಂದ 28 ದಿನಗಳಲ್ಲಿ ಕೇವಲ 3-4 ದಿನಗಳಷ್ಟೇ ಉಪಸ್ಥಿತರಿರುತ್ತಾರೆ. ಪ್ರಧಾನಿ ಪ್ರಕ್ರಿಯೆಗಿಂತ ಮೇಲಿರುವ ಬದಲು ಮಾದರಿಯಾಗಿ ಮುನ್ನಡೆಸಬೇಕಲ್ಲವೇ ಎಂದು ಹೇಳಿದ್ದಾರೆ.
ವಾಡಿಕೆಯಂತೆ ಸಚಿವರು ಮತ್ತು ಪ್ರತಿಪಕ್ಷ ನಾಯಕರು ಹಾಜರಿ ಪುಸ್ತಕದಲ್ಲಿ ಸಹಿ ಹಾಕುವ ಅಗತ್ಯವಿಲ್ಲ ಎನ್ನುವುದನ್ನು ಇಲ್ಲಿ ಗಮನಿಸಬಹುದಾಗಿದೆ.
ಅಧಿವೇಶನಗಳ ಸಂದರ್ಭದಲ್ಲಿ ಸಂಸರು ತಮ್ಮ ದೈನಂದಿನ ಭತ್ತೆಯನ್ನು ಸ್ವೀಕರಿಸಲು ಹಾಜರಿಯನ್ನು ದಾಖಲಿಸುವುದು ಕಡ್ಡಾಯವಾಗಿದೆ.
ಸಂಸತ್ತಿನ ಮಳೆಗಾಲದ ಅಧಿವೇಶನವು ಜು.21ರಿಂದ ಆ.21ರವರೆಗೆ ನಡೆಯಲಿದೆ.