×
Ad

ಭಾರತ 'ಹಿಂದೂ ರಾಷ್ಟ್ರ' ಅಲ್ಲ ಎಂಬುದನ್ನು ಲೋಕಸಭಾ ಚುನಾವಣಾ ಫಲಿತಾಂಶ ದೃಢಪಡಿಸಿದೆ: ನೊಬೆಲ್ ಪುರಸ್ಕೃತ ಅಮರ್ತ್ಯ ಸೇನ್‌

Update: 2024-06-27 11:38 IST

ಅಮರ್ತ್ಯ ಸೇನ್‌ (Photo: PTI)

ಕೊಲ್ಕತ್ತಾ: ಭಾರತವು 'ಹಿಂದೂ ರಾಷ್ಟ್ರ' ಅಲ್ಲ ಎಂಬುದನ್ನು ಇತ್ತೀಚೆಗೆ ನಡೆದ ಲೋಕಸಭಾ ಚುನಾವಣಾ ಫಲಿತಾಂಶ ದೃಢಪಡಿಸಿದೆ ಎಂದು ನೋಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೇನ್‌ ಹೇಳಿದ್ದಾರೆ.

ವಿಚಾರಣೆಯಿಲ್ಲದೆ ಜನರನ್ನು ಜೈಲಿನಲ್ಲಿರಿಸುವುದು ದೇಶದಲ್ಲಿ ಬ್ರಿಟಿಷರ ಕಾಲದಿಂದ ನಡೆದು ಬರುತ್ತಿದೆಯಾದರೂ ಕಾಂಗ್ರೆಸ್‌ ಆಡಳಿತದ ಅವಧಿಗೆ ಹೋಲಿಸಿದಾಗ ಬಿಜೆಪಿ ಆಡಳಿತದಡಿಯಲ್ಲಿ ಇದು ಹೆಚ್ಚಾಗಿದೆ ಎಂದು ಅವರು ಹೇಳಿದರು.

ಬಂಗಾಳಿ ಸುದ್ದಿ ಸಂಸ್ಥೆಯೊಂದರ ಜೊತೆಗೆ ಮಾತನಾಡಿದ ಸೇನ್‌, ಚುನಾವಣೆ ಕುರಿತು ಮಾತನಾಡಿ, “ಪ್ರತಿ ಚುನಾವಣೆಯ ನಂತರ ನಾವು ಬದಲಾವಣೆ ನೋಡಲು ಬಯಸುತ್ತೇವೆ. ಜನರನ್ನು ವಿಚಾರಣೆಯಿಲ್ಲದೆ ಬಂಧಿಸುವುದು ಹಾಗೂ ಶ್ರೀಮಂತರು ಮತ್ತು ಬಡವರ ನಡುವಿನ ಅಂತರ ಹೆಚ್ಚುತ್ತಿರುವುದು ಮುಂದುವರಿದಿದೆ, ಅದು ನಿಲ್ಲಬೇಕು,” ಎಂದು ಹೇಳಿದರು.

“ಭಾರತವು ಜಾತ್ಯತೀತ ಸಂವಿಧಾನ ಹೊಂದಿದ ಜಾತ್ಯತೀತ ದೇಶವಾಗಿರುವಾಗ ರಾಜಕೀಯವಾಗಿ ಮುಕ್ತ ಮನಸ್ಸು ಹೊಂದಿರುವುದು ಮುಖ್ಯ. ಭಾರತವನ್ನು ಹಿಂದೂ ರಾಷ್ಟ್ರವಾಗಿಸುವ ಪರಿಕಲ್ಪನೆ ಸರಿಯಲ್ಲ ಎಂದು ನನ್ನ ಭಾವನೆ,” ಎಂದು ಅವರು ಹೇಳಿದರು.

ಈಗಿನ ಕೇಂದ್ರ ಸಚಿವ ಸಂಪುಟ ಹಿಂದಿನ ಸಂಪುಟದ ನಕಲು ಆಗಿದೆ ಎಂದು ಅವರು ಹೇಳಿದರು.

“ಸಚಿವರು ಅದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ. ಅಲ್ಪ ಬದಲಾವಣೆಯಿದ್ದರೂ ರಾಜಕೀಯವಾಗಿ ಪ್ರಬಲರು ಈಗಲೂ ಹಾಗೆಯೇ ಮುಂದುವರಿದಿದ್ದಾರೆ,” ಎಂದು ಸೇನ್‌ ಹೇಳಿದರು.

ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಿಸಿದ ಹೊರತಾಗಿಯೂ ಅಯೋಧ್ಯೆಯನ್ನೊಳಗೊಂಡ ಫೈಝಾಬಾದ್‌ ಕ್ಷೇತ್ರದಲ್ಲಿ ಬಿಜೆಪಿ ಸೋಲಿನ ಬಗ್ಗೆ ಪ್ರತಿಕ್ರಿಯಿಸಿದ ಅವರು “ಮಹಾತ್ಮ ಗಾಂಧಿ, ರವೀಂದ್ರನಾಥ್‌ ಠಾಗೋರ್‌, ನೇತಾಜಿ ಸುಭಾಸ್‌ಚಂದ್ರ ಬೋಸ್‌ ಅವರ ನಾಡಿನಲ್ಲಿ ಇಷ್ಟೊಂದು ಹಣ ಖರ್ಚು ಮಾಡಿ ರಾಮ ಮಂದಿರ ನಿರ್ಮಿಸಿ ಭಾರತವನ್ನು ʼಹಿಂದೂ ರಾಷ್ಟ್ರʼ ಎಂಬಂತೆ ಬಿಂಬಿಸಿರುವುದು ಸರಿಯಲ್ಲ. ಭಾರತದ ನಿಜವಾದ ಅಸ್ಮಿತೆಯನ್ನು ಕಡೆಗಣಿಸುವ ಯತ್ನವನ್ನು ಅದು ತೋರಿಸುತ್ತದೆ, ಇದು ಬದಲಾಗಬೇಕು.” ಎಂದು ಅವರು ಹೇಳಿದರು.

ದೇಶದಲ್ಲಿ ನಿರುದ್ಯೋಗ ಹೆಚ್ಚಾಗುತ್ತಿದೆ, ಪ್ರಾಥಮಿಕ ಶಿಕ್ಷಣ ಮತ್ತು ಪ್ರಾಥಮಿಕ ಆರೋಗ್ಯ ಸೇವೆ ಕ್ಷೇತ್ರಗಳನ್ನು ಕಡೆಗಣಿಸಲಾಗುತ್ತಿದೆ ಎಂದು ಅವರು ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News