ಉತ್ತರಾಖಂಡ | ಭಾರಿ ಮಳೆಯಿಂದಾಗಿ ಭೂಕುಸಿತ: ಬದ್ರಿನಾಥ್ ಹೆದ್ದಾರಿಯಲ್ಲಿ ಆರು ಕಿಮೀ ದೂರದವರೆಗೆ ಸಂಚಾರ ದಟ್ಟಣೆ!
PC | NDTV
ಡೆಹ್ರಾಡೂನ್: ಉತ್ತರಾಖಂಡದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಭೂಕುಸಿತ ವಲಯಗಳಲ್ಲಿ ಭೂಕುಸಿತ ಸಂಭವಿಸಿದ್ದು, ರಸ್ತೆ ಮೇಲೆ ಅವಶೇಷಗಳು ಕುಸಿದು ಬಿದ್ದಿವೆ. ಇದರಿಂದಾಗಿ, ಪ್ರವಾಸದ ಋತು ಪ್ರಾರಂಭಗೊಂಡಿರುವ ಈ ಸಮಯದಲ್ಲಿ ಭಾರಿ ಸಂಚಾರ ದಟ್ಟಣೆಯುಂಟಾಗಿದೆ.
ಭಾರಿ ಮಳೆಯಿಂದಾಗಿ ಸಂಭವಿಸಿರುವ ಭೂಕುಸಿತದಿಂದಾಗಿ, ಅಲಕಾನಂದ ನದಿಯ ದಂಡೆಯಲ್ಲಿರುವ ಧಾರಿ ದೇವಿ ದೇವಾಲಯದಿಂದ ಅರು ಕಿಮೀ ದೂರವಿರುವ ಖಂಕ್ರಾಗೆ ಸಾಗುವ ಬದ್ರಿನಾಥ್ ಹೆದ್ದಾರಿಯುದ್ದಕ್ಕೂ ಸಂಚಾರ ದಟ್ಟಣೆಯುಂಟಾಗಿದೆ.
ಸಂಜೆ ಸುಮಾರು ನಾಲ್ಕು ಗಂಟೆಗೆ ಬಿಡುಗಡೆಯಾಗಿರುವ ನೈಜ ಸಮಯದ ಗೂಗಲ್ ಸಂಚಾರ ದಟ್ಟಣೆ ಮಾಹಿತಿಯ ಪ್ರಕಾರ, ಋಷಿಕೇಶ, ದೇವಪ್ರಯಾಗ್, ರುದ್ರಪ್ರಯಾಗ್, ಕರ್ಣಪ್ರಯಾಗ್, ಚಮೋಲಿ, ಜೋಶಿಮಠ ಹಾಗೂ ಬದ್ರಿನಾಥ ಯಾತ್ರಾ ಸ್ಥಳಗಳನ್ನು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 7ರಲ್ಲಿ ವಾಡಿಕೆಯ ಸಂಚಾರ ದಟ್ಟಣೆಗಿಂತ ಭಾರಿ ಪ್ರಮಾಣದ ಸಂಚಾರ ದಟ್ಟಣೆಯುಂಟಾಗಿರುವುದು ಕಂಡು ಬಂದಿದೆ.
ಧಾರಿ ದೇವಿ ದೇವಾಲಯವು ಉತ್ತರಾಖಂಡದ ಶ್ರೀನಗರ ಹಾಗೂ ರುದ್ರಪ್ರಯಾಗದ ನಡುವಿನಲ್ಲಿದೆ. ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 7 ಅಲಕಾನಂದ ನದಿಯ ಮಾರ್ಗವಾಗಿ ಸಾಗುತ್ತದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ದೃಶ್ಯಾ್ವಳಿಗಳಲ್ಲಿ ಕಾರುಗಳು, ಫೋರ್ಸ್ ಟ್ರಾವೆಲ್ಲರ್ ವಾಹನಗಳು, ಟ್ರಕ್ ಗಳು ಸಾಲುಗಟ್ಟಿ ನಿಂತಿರುವುದು ಹಾಗೂ ಸಂಚಾರ ದಟ್ಟಣೆಯ ನಡುವೆ ತೆವಳುತ್ತಾ ಸಾಗುತ್ತಿರುವುದು ಸೆರೆಯಾಗಿದೆ. ಹಾಗೆಯೇ, ಹೆದ್ದಾರಿಯ ಮೇಲೆ ಬಿದ್ದಿರುವ ಬೆಟ್ಟದ ಅವಶೇಷಗಳನ್ನು ಜೆಸಿಬಿ ಮೂಲಕ ಸ್ವಚ್ಛಗೊಳಿಸುತ್ತಿರುವುದೂ ಈ ದೃಶ್ಯಾಕವಳಿಗಳಲ್ಲಿ ಕಂಡು ಬಂದಿದೆ.
ಈ ನಡುವೆ, ಮೇ 27ರವರೆಗೆ ಪಶ್ಚಿಮ ಮತ್ತು ಪೂರ್ವ ರಾಜಸ್ಥಾನದಾದ್ಯಂತ ಧೂಳಿನ ಬಿರುಗಾಳಿ ಬೀಸಲಿದ್ದರೆ, ಹಿಮಾಚಲ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಆಲಿಕಲ್ಲಿನ ಮಳೆಯಾಗಲಿದೆ ಎಂದು ಹವಾಮಾನ ಅಧಿಕಾರಿಗಳು ಮುನ್ಸೂಚನೆ ನೀಡಿದ್ದಾರೆ.