ಲಕ್ನೋ | ರಾಂಗ್ ನಂಬರ್‌ನೊಂದಿಗೆ ಆರಂಭವಾದ ಪ್ರೇಮಸಂಬಂಧ ಕೊಲೆಯಲ್ಲಿ ಅಂತ್ಯ
ಲಕ್ನೋ: ರಾಂಗ್‍ನಂಬರ್ ಕರೆಯೊಂದಿಗೆ ಆರಂಭವಾದ ರಹಸ್ಯ ಪ್ರೇಮಸಂಬಂಧವೊಂದು 30 ವರ್ಷದ ಮಹಿಳೆಯ ಕೊಲೆಯಲ್ಲಿ ಪರ್ಯವಸಾನಗೊಂಡ ಪ್ರಕರಣ ಹರ್ದೋಯಿಯಲ್ಲಿ ಬೆಳಕಿಗೆ ಬಂದಿದೆ. ಇಬ್ಬರು ಶಂಕಿತರನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಿ, ಅಸ್ಥಿಪಂಜರವನ್ನು ಶುಕ್ರವಾರ ಬಾವಿಯೊಂದರಿಂದ ವಶಪಡಿಸಿಕೊಳ್ಳುವ ಮೂಲಕ ಪ್ರಕರಣ ಬಹಿರಂಗವಾಗಿದೆ.
"2023ರ ಫೆಬ್ರವರಿಯಲ್ಲಿ ಮಹಿಳೆ ತಪ್ಪು ಸಂಖ್ಯೆಗೆ ಕರೆ ಮಾಡಿದ್ದು, ಈ ಪ್ರೇಮಸಂಬಂಧ ಅಂಕುರವಾಗಲು ಕಾರಣವಾಯಿತು. ಮಸೀದುಲ್ ಎಂಬುವವರು ಈ ಕರೆಗೆ ಉತ್ತರಿಸಿದ್ದರು. ಇಬ್ಬರೂ ಸಂಭಾಷಣೆ ನಡೆಸಿದ ಬಳಿಕ ನಿಯತವಾಗಿ ಪರಸ್ಪರ ಮಾತನಾಡಲಾರಂಭಿಸಿದರು. ಸೋನಮ್ ಹಾಗೂ ಮಸೀದುಲ್ ಇಬ್ಬರೂ ವಿವಾಹಿತರಾಗಿದ್ದು, ಇಬ್ಬರ ನಡುವೆ ಆರಂಭವಾದ ಸ್ನೇಹಸಂಬಂದ ರಹಸ್ಯ ಪ್ರೇಮಸಂಬಂಧವಾಗಿ ಬೆಳೆಯಿತು" ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.
ಮಸೀದುಲ್ ಹರ್ದೋಯಿಯವರಾದರೆ ಸೋನಮ್ ಪತಿ ಉತ್ತರ ಪ್ರದೇಶದ ಹೊರವಲಯದಿಂದ ಹೊರಗೆ ಕೆಲಸ ಮಾಡುತ್ತಿದ್ದರು. 2023ರ ಆಗಸ್ಟ್ 6ರಂದು ಸೋನಮ್ ನಾಪತ್ತೆಯಾದರು, ಈ ಸಂಬಂಧ ಆಕೆಯ ಮಾವ ಅಪಹರಣ ಪ್ರಕರಣ ದಾಖಲಿಸಿದ್ದರು. ಆರು ಮಂದಿ ಅಧಿಕಾರಿಗಳು ತನಿಖೆ ನಡೆಸಿದ ಬಳಿಕವೂ ಪತ್ತೆಯಾಗಿರಲಿಲ್ಲ.
ಈ ವರ್ಷದ ಜೂನ್‍ನಲ್ಲಿ ಪೂರ್ವ ಎಸಿಪಿ ನೃಪೇಂದ್ರ ಅವರು ಪ್ರಕರಣವನ್ನು ಮರು ತನಿಖೆ ಆರಂಭಿಸುವಂತೆ ಆದೇಶಿಸಿದ್ದರು. ಸ್ಥಳೀಯ ವೃತ್ತಾಧಿಕಾರಿ ಸಂತೋಷ್ ಸಿಂಗ್ 3000 ಕರೆ ದಾಖಲೆಗಳನ್ನು ಪರಿಶೀಲಿಸಿ ಸೋನಮ್ ಜತೆ ಒಂದೇ ಒಂದು ಬಾರಿ ಸಂಪರ್ಕ ಸಾಧಿಸಿದ್ದ ಸಂಖ್ಯೆಯನ್ನು ಪತ್ತೆ ಮಾಡಿದ್ದರು.
ಈ ಸಂಖ್ಯೆ ಪೊಲೀಸರನ್ನು ಗುಜರಾತ್‍ನತ್ತ ಕರೆದೊಯ್ದಿತು. ಆದರೆ ಈ ಸಂಖ್ಯೆಯಲ್ಲಿ ಆರಂಭದಲ್ಲಿ ಬಳಸುತ್ತಿದ್ದ ವ್ಯಕ್ತಿ ಸಂಪರ್ಕ ಕಡಿತಗೊಳಿಸಿದ ಬಳಿಕ ಬೇರೆಯವರಿಗೆ ಹಂಚಿಕೆ ಮಾಡಿತ್ತು. ಮೊದಲು ಈ ಸಂಖ್ಯೆಯನ್ನು ಮಸೀದುಲ್ ಬಳಸುತ್ತಿದ್ದುದು ಪತ್ತೆಯಾಯಿತು. ಬಳಿಕ ಅವರ ಒಬ್ಬ ಸಂಬಂಧಿ ಅದನ್ನು ಬಳಸುತ್ತಿದ್ದರು. ಆ ದಿನ ರಾತ್ರಿ ಮಸೀದುಲ್ ಅವರ ಕರೆಯನ್ನು ಸೋನಮ್ ಸ್ವೀಕರಿಸಿದ್ದರು.
ನಾಪತ್ತೆಯಾದ ಬಳಿಕ ಮಹಿಳೆ ಮಸೀದುಲ್ ಜತೆ ರಹಸ್ಯವಾಗಿ ವಾಸಿಸಲು ಆರಂಭಿಸಿದ್ದರು. ಮೊದಲು ದೆಹಲಿಗೆ ತೆರಳಿ ಬಳಿಕ ಮಸೀದಿಲ್ ಮನೆಯಲ್ಲಿ ವಾಸಿಸುತ್ತಿದ್ದರು. 2023ರ ಆಗಸ್ಟ್ 8ರಂದು ಇಬ್ಬರ ನಡುವೆ ಜಗಳವಾಗಿದ್ದು, ಆಗ ಸಹೋದರ ಶಂಶೀದುಲ್ ಹಾಗೂ ತಂದೆ ಅಯೂಬ್ ಸಹಾಯದೊಂದಿಗೆ ಆಕೆಯನ್ನು ಕೊಂದ ಮಸೀದಿಲ್ ಮೃತದೇಹವನ್ನು ಬಾವಿಗೆ ಎಸೆದಿದ್ದ" ಎಂದು ಪೊಲೀಸರು ವಿವರಿಸಿದ್ದಾರೆ.
ಶಂಶೀದುಲ್ ಹಾಗೂ ಅಯೂಬ್ ರನ್ನು ಬಂಧಿಸಿದ್ದು, ಮಸೀದುಲ್ ತಲೆ ಮರೆಸಿಕೊಂಡಿದ್ದಾನೆ ಎಂದು ತಿಳಿದು ಬಂದಿದೆ.