ಪಂಜಾಬ್‌ನಲ್ಲಿ ಗ್ರೆನೇಡ್ ದಾಳಿ ಸಂಚನ್ನು ವಿಫಲಗೊಳಿಸಿದ ಲೂಧಿಯಾನ ಪೊಲೀಸರು : 10 ಮಂದಿ ಶಂಕಿತರ ಬಂಧನ
ಸಾಂದರ್ಭಿಕ ಚಿತ್ರ | Photo Credit : freepik.com
ಲುಧಿಯಾನ,ನ.13: ನಗರದ ಜನನಿಬಿಡ ಪ್ರದೇಶದಲ್ಲಿ ಗ್ರೆನೇಡ್ ದಾಳಿಯನ್ನು ನಡೆಸುವ ಮೂಲಕ ರಾಜ್ಯದಲ್ಲಿ ಅಶಾಂತಿಯನ್ನು ಸೃಷ್ಟಿಸುವ ಸಂಚನ್ನು ಪಂಜಾಬ್ ಪೊಲೀಸರು ವಿಫಲಗೊಳಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿ 10 ಮಂದಿಯನ್ನು ಬಂಧಿಸಲಾಗಿದೆ.
ವಿಶ್ವಾಸನೀಯ ಬೇಹುಗಾರಿಕಾ ಮಾಹಿತಿಗಳ ಆಧಾರದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಆಕ್ಟೋಬರ್ 27ರಂದು ಎಫ್‌ಐಆರ್ ದಾಖಲಿಸಿದ್ದರು. ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)ಯ ಸೆಕ್ಷನ್ 112 ಹಾಗೂ ಸ್ಫೋಟಕಗಳ ಕಾಯ್ದೆಯ 3,4 ಮತ್ತು 5 ಸೆಕ್ಷನ್‌ಗಳಡಿ ಪೊಲೀಸರು ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯನ್ನು ಕೂಡಾ ಹೇರಲಾಗಿದ್ದು, ವಿದೇಶಿ ಮೂಲದ ಶಂಕಿತ ಆರೋಪಿಗಳಿಗೆ ರೆಡ್ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿದೆಯೆಂದು ಲೂಧಿಯಾನದ ಪೊಲೀಸ್ ಆಯುಕ್ತ ಸ್ವಪನ್ ಶರ್ಮಾ ತಿಳಿಸಿದ್ದಾರೆ.
ಪೊಲೀಸರು ದಾಖಲಿಸಿದ ಎಫ್‌ಐಆರ್‌ನಲ್ಲಿ ಶ್ರೀ ಮುಕ್ತಸರ್ ಸಾಹಿಬ್‌ನ ನಿವಾಸಿಗಳಾದ ಕುಲದೀಪ್‌ಸಿಂಗ್, ಶೇಖರ್ ಸಿಂಗ್ ಹಾಗೂ ಅಜಯ್ ಸಿಂಗ್ ಅವರನ್ನು ಪ್ರಮುಖ ಆರೋಪಿಗಳೆಂದು ಹೆಸರಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಪರಿಣಾಮಕಾರಿ ಕ್ರಮಗಳನ್ನು ಕೈಗೊಳ್ಳುವುದನ್ನು ಖಾತರಿಪಡಿಸಲು ಡಿಸಿಪಿ (ತನಿಖಾ ವಿಭಾಗ) ಹಾಗೂ ಡಿಸಿಪಿ (ನಗರ) ನೇತೃತ್ವದಲ್ಲಿ ವಿಶೇಷ ತನಿಖಾ ತಂಡಗಳನ್ನು ರಚಿಸಲಾಗಿದೆ.
ಆರೋಪಿಗಳು ಪಾಕಿಸ್ತಾನದ ಬೇಹುಗಾರಿಕಾ ಸಂಸ್ಥೆ ಐಎಸ್‌ಐನ ನಿರ್ದೇಶನದಂತೆ ಕಾರ್ಯಾಚರಿಸುತ್ತಿದ್ದರೆಂದು ಪ್ರಾಥಮಿಕ ತನಿಖೆಗಳಿಂದ ತಿಳಿದು ಬಂದಿರುವುದಾಗಿ ಪಂಜಾಬ್ ಪೊಲೀಸರು ತಿಳಿಸಿದ್ದಾರೆ. ಸಾರ್ವಜನಿಕರಲ್ಲಿ ಗಾಬರಿ ಹಾಗೂ ಭೀತಿಯನ್ನು ಸೃಷ್ಟಿಸುವುದಕ್ಕಾಗಿ ಗ್ರೆನೇಡ್ ದಾಳಿಯನ್ನು ನಡೆಸುವಂತೆ ಅವರಿಗೆ ಸೂಚಿಸಲಾಗಿದೆ.
ಪಂಜಾಬ್‌ನಲ್ಲಿ ಗ್ರೆನೇಡ್ ದಾಳಿಯನ್ನು ನಡೆಸುವ ಸಂಚಿನ ರೂವಾರಿಗಳು ವಿದೇಶದಲ್ಲಿ ನೆಲೆಸಿದವರಾಗಿದ್ದು ಅವರನ್ನು ಅಜಯ್, ಜಸ್ ಬೆಹಬಾಲ್ ಹಾಗೂ ಪವನ್‌ದೀಪ್ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಪ್ರಸಕ್ತ ಮಲೇಶ್ಯದ ನಿವಾಸಿಗಳಾಗಿದ್ದು ಮೂಲತಃ ರಾಜಸ್ಥಾನದ ಗಂಗಾನಗರದವರಾಗಿದ್ದಾರೆ.
ಈ ಮೂವರು ಆರೋಪಿಗಳು, ಈ ಹಿಂದೆ ಡ್ರಗ್ಸ್ ಕಳ್ಳಸಾಗಣೆಯಲ್ಲಿ ಶಾಮೀಲಾಗಿದ್ದ ಸ್ಥಳೀಯರಾದ ಅಮ್ರಿಕ್ ಸಿಂಗ್ ಹಾಗೂ ಪರಮಿಂದರ್ ಅವರೊಂದಿಗೆ ಸಂಪರ್ಕವನ್ನು ಇರಿಸಿಕೊಂಡಿದ್ದರು. ಪಂಜಾಬ್‌ನಲ್ಲಿ ಭಯೋತ್ಪಾದಕ ಕೃತ್ಯವನ್ನು ಎಸಗಲು ಹ್ಯಾಂಡ್ ಗ್ರೆನೇಡ್ ಪೂರೈಕೆಗೆ ನಿಯೋಜಿತವಾಗಿದ್ದ ಸ್ಥಳೀಯ ಜಾಲವನ್ನು ಕೂಡಾ ಪೊಲೀಸರು ಭೇದಿಸಿದ್ದಾರೆ. ಬಂಧಿತ ಆರೋಪಿಗಳ ಪೈಕಿ ಸುಖಜಿತ್ ಸಿಂಗ್ ಹಾಗೂ ಸುಖವೀಂದರ್‌ಸಿಂಗ್ ಇಬ್ಬರೂ ಪಂಜಾಬ್‌ನ ಫರೀದ್ ಕೋಟ್ ನಿವಾಸಿಗಳು. ಕರಣ್‌ವೀರ್ ರಾಜಸ್ಥಾನದ ಶ್ರೀಗಂಗಾನಗರದಲ್ಲಿ ಹಾಗೂ ಸಜನ್ ಕುಮಾರ್ ಮುಕ್ತಸರ ಸಾಹಿಬ್‌ನಲ್ಲಿ ವಾಸವಾಗಿದ್ದರು.
ಆರೋಪಿಗಳಿಂದ ಚೀನಿ ನಿರ್ಮಿತ ಕೈಗ್ರೆನೇಡ್, ಕಪ್ಪು ಕಿಟ್ ಹಾಗೂ ಆರೋಪಿಗಳಿಂದ ಜೋಡಿ ಕೈಗವಸುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.