ಮಧ್ಯ ಪ್ರದೇಶ | ಕಲುಷಿತ ಕೆಮ್ಮಿನ ಸಿರಪ್ ಸೇವಿಸಿ ಅಸ್ವಸ್ಥಗೊಂಡಿರುವ ಮಕ್ಕಳ ಚಿಕಿತ್ಸಾ ವೆಚ್ಚ ಭರಿಸಲಿರುವ ಸರಕಾರ
ಸಾಂದರ್ಭಿಕ ಚಿತ್ರ | Photo Credit : freepik.com
ಭೋಪಾಲ,ಅ.7: ಛಿಂದ್ವಾರಾ ಮತ್ತು ಬೇತುಲ್ ಜಿಲ್ಲೆಗಳಲ್ಲಿ ಕಲುಷಿತ ಕೆಮ್ಮಿನ ಸಿರಪ್ ಸೇವಿಸಿದ ಬಳಿಕ ಮೂತ್ರಪಿಂಡ ಸೋಂಕುಗಳಿಂದ ನರಳುತ್ತಿರುವ ಮಕ್ಕಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಮಧ್ಯಪ್ರದೇಶ ಸರಕಾರವು ಭರಿಸಲಿದೆ ಎಂದು ಅಧಿಕಾರಿಯೋರ್ವರು ಮಂಗಳವಾರ ತಿಳಿಸಿದರು.
ಅಧಿಕಾರಿಗಳ ಪ್ರಕಾರ ‘ವಿಷಯುಕ್ತ’ ಕೋಲ್ಡ್ರಿಫ್ ಕೆಮ್ಮಿನ ಸಿರಪ್ ಸೇವನೆಯಿಂದಾಗಿ ಶಂಕಿತ ಮೂತ್ರಪಿಂಡ ವೈಫಲ್ಯದಿಂದ ಛಿಂದ್ವಾರಾದಲ್ಲಿ 14 ಮತ್ತು ಬೇತುಲ್‌ನಲ್ಲಿ ಇಬ್ಬರು ಮಕ್ಕಳು ಅಸುನೀಗಿದ್ದಾರೆ. ಮೂತ್ರಪಿಂಡ ಸೋಂಕಿಗೆ ತುತ್ತಾಗಿರುವ ಛಿಂದ್ವಾರಾದ ಒಂಭತ್ತು ಮತ್ತು ಬೇತುಲ್‌ನ ಇಬ್ಬರು ಮಕ್ಕಳು ನೆರೆಯ ಮಹಾರಾಷ್ಟ್ರದ ನಾಗ್ಪುರದಲ್ಲಿಯ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಮಕ್ಕಳ ಸಂಪೂರ್ಣ ಚಿಕಿತ್ಸಾ ವೆಚ್ಚವನ್ನು ಆಡಳಿತವು ಭರಿಸುತ್ತದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಮಂಗಳವಾರ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದರು.
ಸೂಕ್ತ ಚಿಕಿತ್ಸೆ ದೊರೆಯುವಂತೆ ನೋಡಿಕೊಳ್ಳಲು ಕಾರ್ಯಕಾರಿ ದಂಡಾಧಿಕಾರಿಗಳು ಮತ್ತು ವೈದ್ಯರ ಜಂಟಿ ತಂಡವನ್ನು ನಾಗ್ಪುರದ ವಿವಿಧ ಆಸ್ಪತ್ರೆಗಳಲ್ಲಿ ನಿಯೋಜಿಸಲಾಗಿದೆ. ಮಕ್ಕಳ ಚಿಕಿತ್ಸೆಗೆ ಸೂಕ್ತ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳಲು ಈ ತಂಡವು ಪೀಡಿತ ಕುಟುಂಬಗಳು ಮತ್ತು ಆಸ್ಪತ್ರೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ ಎಂದರು.