ತಮಿಳುನಾಡಿನ ಔಷಧ ಕಾರ್ಖಾನೆಯಲ್ಲಿ ಮಧ್ಯಪ್ರದೇಶದ SIT ತನಿಖೆ
ಕೆಮ್ಮಿನ ಸಿರಪ್ ಸೇವಿಸಿ ಮಕ್ಕಳು ಸಾವನ್ನಪ್ಪಿದ ಪ್ರಕರಣ
ಸಾಂದರ್ಭಿಕ ಚಿತ್ರ
ಭೋಪಾಲ್, ಅ. 8: ಮಧ್ಯಪ್ರದೇಶದಲ್ಲಿ ಕೆಮ್ಮಿನ ಸಿರಪ್ ಸೇವಿಸಿ 20 ಮಕ್ಕಳು ಸಾವನ್ನಪ್ಪಿದ ಕುರಿತಂತೆ ಪೊಲೀಸ್ ಉಪ ಆಯುಕ್ತರ ನೇತೃತ್ವದಲ್ಲಿ ಮಧ್ಯಪ್ರದೇಶದ 7 ಸದಸ್ಯರ ವಿಶೇಷ ತನಿಖಾ ತಂಡ (ಎಸ್‌ಐಟಿ) ಚೆನ್ನೈ ಸಮೀಪದ ಔಷಧ ಉತ್ಪಾದನಾ ಕಾರ್ಖಾನೆಯಲ್ಲಿ ಬುಧವಾರ ತನಿಖೆ ನಡೆಸಿದೆ.
ಅನಂತರ ಸಿಟ್ ದಾಖಲೆಗಳು ಹಾಗೂ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲು ಕಂಪೆನಿಯ ಚೆನ್ನೈಯಲ್ಲಿರುವ ನೋಂದಾಯಿತ ಕಚೇರಿಗೆ ಭೇಟಿ ನೀಡಿತು. ಕಾರ್ಖಾನೆಯ ಮಾಲಕ ಮೂರು ದಿನಗಳ ಹಿಂದೆ ತೆರಳಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಸಿಟ್ ಗೆ ತಿಳಿಸಿದರು.
ಪರಿಶೀಲನೆ ಸಂದರ್ಭ ಸಿಟ್ ಗೆ ತಮಿಳುನಾಡು ಪೊಲೀಸರು ನೆರವು ನೀಡಿದರು. ಚೆನ್ನೈ ಮೂಲದ ಈ ಔಷದ ಉತ್ಪಾದನಾ ಕಂಪೆನಿ ಕೆಮ್ಮಿನ ಔಷಧ ಕೋಲ್ಡ್ರಿಫ್ ಅನ್ನು ಪುದುಚೇರಿ, ಮಧ್ಯಪ್ರದೇಶ ರಾಜಸ್ಥಾನ ಹಾಗೂ ಇತರ ರಾಜ್ಯಗಳ ಮಾರುಕಟ್ಟೆಗಳಿಗೆ ಪೂರೈಸುತ್ತಿತ್ತು.
ತಮಿಳುನಾಡು ಸರಕಾರ ಈ ಹಿಂದೆ ಮಂಗಳವಾರ ಸಂಜೆ ಕಾಂಚಿಪುರಂ ಜಿಲ್ಲೆಯಲ್ಲಿರುವ ಔಷಧ ಕಾರ್ಖಾನೆಗೆ ಬೀಗ ಮುದ್ರೆ ಹಾಕಿತ್ತು.
ಮಧ್ಯಪ್ರದೇಶದ ಉಪ ಮುಖ್ಯಮಂತ್ರಿ ರಾಜೇಂದ್ರ ಶುಕ್ಲಾ ಮಂಗಳವಾರ, ಸಿರಪ್ ಸೇವಿಸಿದ ಬಳಿಕ ಮೂತ್ರ ಪಿಂಡ ವೈಫಲ್ಯದಿಂದ ಒಟ್ಟು 20 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ತಮಿಳುನಾಡು ಆಹಾರ ಸುರಕ್ಷೆ ಹಾಗೂ ಔಷಧ ಆಡಳಿತ ಇಲಾಖೆ ನಡೆಸಿದ ಪರೀಕ್ಷೆಯಲ್ಲಿ ಕಾರ್ಖಾನೆಯ ಸಿರಪ್ ಮಾದರಿ ಕಲುಷಿತಗೊಂಡಿರುವುದು ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ಉತ್ಪಾದನೆಯನ್ನು ಕೂಡಲೇ ನಿಲ್ಲಿಸುವಂತೆ ಆದೇಶಿಸಲಾಗಿತ್ತು.