ಮಧ್ಯಪ್ರದೇಶ | ಸರ್ಕಾರಕ್ಕೆ ತಲೆನೋವಾದ ಮಾದಕ ವಸ್ತು ಪತ್ತೆ ಪ್ರಕರಣ; ಆರೋಪಿ ಸಚಿವೆಯ ಸಹೋದರ ಎಂದ ಕಾಂಗ್ರೆಸ್
Photo Credit : NDTV
ಭೋಪಾಲ್, ಡಿ. 9: ಸಚಿವೆ ಪ್ರತಿಮಾ ಬಾಗ್ರಿ ಅವರ ಸಹೋದರ ಅನಿಲ್ ಬಾಗ್ರಿ ಮಾದಕವಸ್ತು ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನಕ್ಕೊಳಗಾದ ಹಿನ್ನೆಲೆಯಲ್ಲಿ, ಯುವ ಕಾಂಗ್ರೆಸ್ ಕಾರ್ಯಕರ್ತರು ಮಂಗಳವಾರ ಭೋಪಾಲ್ ನಲ್ಲಿರುವ ಅವರ ನಿವಾಸದ ಮುಂದೆ ಪ್ರತಿಭಟನೆ ನಡೆಸಿ ಸಚಿವರ ರಾಜೀನಾಮೆಗೆ ಆಗ್ರಹಿಸಿದರು.
ಸಚಿವೆ ಪ್ರತಿಮಾ ಅವರು ಅಧಿಕಾರದಲ್ಲಿ ಮುಂದುವರೆದರೆ ನ್ಯಾಯಯುತ ತನಿಖೆ ಸಾದ್ಯವಿಲ್ಲವೆಂದು ಅನುಮಾನ ವ್ಯಕ್ತಪಡಿಸಿದ ಪ್ರತಿಭಟನಾಕಾರರು, “ನೈತಿಕ ಜವಾಬ್ದಾರಿಯ ಹೊತ್ತು ತಕ್ಷಣ ರಾಜೀನಾಮೆ ನೀಡಲಿ. ಸಿಎಂ ಮೋಹನ್ ಯಾದವ್ ಸರ್ಕಾರ ಯುವಕರ ಭವಿಷ್ಯವನ್ನು ಹಾಳುಮಾಡುತ್ತಿದೆ; ಅವರ ಸಚಿವರ ಆಪ್ತರಿಂದಲೇ ಈ ರೀತಿಯ ಕೃತ್ಯಗಳು ಬೆಳಕಿಗೆ ಬರುತ್ತಿವೆ,” ಎಂದು ಯುವ ಕಾಂಗ್ರೆಸ್ ನಾಯಕರು ಇದೇ ಸಂದರ್ಭದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರು ಗೇಟ್ ಮೂಲಕ ನಿವಾಸಕ್ಕೆ ನುಗ್ಗಲು ಯತ್ನಿಸಿದಾಗ ಪೊಲೀಸರು ಮಧ್ಯಪ್ರವೇಶಿಸಿ ಅವರನ್ನು ತಡೆಯುವ ಸಂದರ್ಭವಾಗಿ ಸ್ವಲ್ಪ ಉದ್ವಿಗ್ನತೆ ಉಂಟಾಯಿತು. ಸ್ಥಳದಲ್ಲಿ ಬ್ಯಾರಿಕೇಡ್ಗಳನ್ನು ಹಾಕಿ ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಮಧ್ಯಾಹ್ನ NSUI ಕಾರ್ಯಕರ್ತರು ಕಾಂಗ್ರೆಸ್ ಕಚೇರಿ ಹೊರಗೆ ಆಯೋಜಿಸಿದ್ದ ಪ್ರತಿಭಟನೆಯ ಬಳಿಕ, ಸಿಎಂ ಮೋಹನ್ ಯಾದವ್ ಅವರಿಗೆ ಸಾಂಕೇತಿಕವಾಗಿ ಮಾದಕ ವಸ್ತುಗಳ ಹಾರ ಅರ್ಪಿಸಲು ಸಿಎಂ ನಿವಾಸದತ್ತ ತೆರಳಲು ಪ್ರಯತ್ನಿಸಿದರು. ಆದರೆ ರೆಡ್ಕ್ರಾಸ್ ಚೌಕದಲ್ಲಿ ಪೊಲೀಸರು ಅವರನ್ನು ತಡೆದು, ಕೆಲವರನ್ನು ಬಂಧಿಸಿ ಉಳಿದವರನ್ನು ಬೇರೆಡೆಗೆ ಸ್ಥಳಾಂತರಿಸಿದರು.
ಗಾಂಜಾ ಪ್ರಕರಣದಲ್ಲಿ ಸಹೋದರನ ಬಂಧನದ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವೆ ಪ್ರತಿಮಾ ಬಾಗ್ರಿ, “ಪೊಲೀಸರು ತಮ್ಮ ಕೆಲಸವನ್ನು ಮಾಡುತ್ತಿದ್ದಾರೆ. ತಪ್ಪಿತಸ್ಥರು ಯಾರೇ ಆಗಿರಲಿ ಕಠಿಣ ಕ್ರಮ ಕೈಗೊಳ್ಳಲಾಗುವುದು. ಅಪರಾಧದಲ್ಲಿ ಭಾಗಿಯಾದವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ,” ಎಂದು ANIಗೆ ಪ್ರತಿಕ್ರಿಯಿಸಿದರು.