ವಿಧಾನಸಭಾ ಚುನಾವಣೆ: ಮಧ್ಯಪ್ರದೇಶ, ಛತ್ತೀಸ್ ಗಢದಲ್ಲಿ ಮತದಾನ ಆರಂಭ
Photo: ANI
ಭೋಪಾಲ್: ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಬಹುತೇಕ ನೇರ ಸ್ಪರ್ಧೆ ಇರುವ ಮಧ್ಯಪ್ರದೇಶ ಹಾಗೂ ಛತ್ತೀಸ್ಗಢ ರಾಜ್ಯ ವಿಧಾನಸಭಾ ಚುನಾವಣೆಯ ಮತದಾನ ಶುಕ್ರವಾರ ಮುಂಜಾನೆ ಆರಂಭವಾಗಿದೆ.
ಮಧ್ಯಪ್ರದೇಶದ 230 ವಿಧಾನಸಭಾ ಸ್ಥಾನಗಳಿಗೆ ಹಾಗೂ ಛತ್ತೀಸ್ಗಢ ವಿಧಾನಸಭಾ ಚುನಾವಣೆಯ ಎರಡನೇ ಹಂತದಲ್ಲಿ 90 ಸ್ಥಾನಗಳ ಪೈಕಿ 70 ಕ್ಷೇತ್ರಗಳಲ್ಲಿ ಮತದಾನ ಬೆಳಿಗ್ಗೆ 7ಕ್ಕೆ ಶುರು ಆಗಿದೆ.
ಮಧ್ಯಪ್ರದೇಶದಲ್ಲಿ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ನಿಕಟಪೂರ್ವ ಮುಖ್ಯಮಂತ್ರಿ ಹಾಗೂ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ಕಮಲನಾಥ್ ಸೇರಿದಂತೆ 2533 ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರವಾಗಲಿದೆ. ಮತದಾನ ಮುಕ್ತ ಹಾಗೂ ಶಾಂತಿಯುತವಾಗಿ ನಡೆಯಲು ಅನುವಾಗುವಂತೆ ಕೇಂದ್ರೀಯ ಪಡೆಗಳ 700ಕ್ಕೂ ಹೆಚ್ಚು ತುಕಡಿಗಳನ್ನು ಮತ್ತು 2 ಲಕ್ಷಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಸುಮಾರು 42 ಸಾವಿರ ಮತಗಟ್ಟೆಗಳಲ್ಲಿ ವೆಬ್ಕಾಸ್ಟಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ರಾಜ್ಯಾದ್ಯಂತ ಮತದಾನ ಮುಂಜಾನೆ 7ರಿಂದ ಸಂಜೆ 6ರವರೆಗೆ ನಡೆಯಲಿದೆ.
ಕಳೆದ 20 ವರ್ಷಗಳ ಪೈಕಿ 18 ವರ್ಷಗಳ ಕಾಲ ರಾಜ್ಯದ ಆಡಳಿತ ನಡೆಸಿದ ಬಿಜೆಪಿ ಹಾಗೂ ಶಿವರಾಜ್ ಸಿಂಗ್ ಚೌಹಾಣ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯುವ ಪ್ರಯತ್ನದಲ್ಲಿರುವ ಕಾಂಗ್ರೆಸ್ ನಡುವೆ ತುರುಸಿನ ಸ್ಪರ್ಧೆ ಏರ್ಪಟ್ಟಿದೆ.
ಛತ್ತೀಸ್ಗಢ ವಿಧಾನಸಭೆಯ 90 ಸ್ಥಾನಗಳ ಪೈಕಿ 70ಕ್ಕೆ ಮತದಾನ ಆರಂಭವಾಗಿದೆ. ಮೊದಲ ಹಂತದಲ್ಲಿ 20 ಸ್ಥಾನಗಳಲ್ಲಿ ಮತದಾನ ನಡೆದಿತ್ತು. ಮುಖ್ಯಮಂತ್ರಿ ಭೂಪೇಂದ್ರ ಬಘೇಲ್, ರಾಜ್ಯ ವಿಧಾನಸಭೆ ಸ್ಪೀಕರ್ ಸೇರಿದಂತೆ ಹಲವು ಗಣ್ಯರ ಭವಿಷ್ಯ ಇಂದು ನಿರ್ಧಾರವಾಗಲಿದೆ. ರಾಯಪುರ ನಗರ ಪಶ್ಚಿಮ ಕ್ಷೇತ್ರದಲ್ಲಿ ಗರಿಷ್ಠ ಅಂದರೆ 26 ಮಂದಿ ಹುರಿಯಾಳುಗಳಿದ್ದರೆ, ದುಂಡಿಲೊಹರ ಕ್ಷೇತ್ರದಲ್ಲಿ ಅತ್ಯಂತ ಕಡಿಮೆ ಅಂದರೆ ನಾಲ್ವರು ಕಣದಲ್ಲಿದ್ದಾರೆ.