×
Ad

ಮಧ್ಯಪ್ರದೇಶ| ಅತ್ಯಾಚಾರ ಆರೋಪಿಯಿಂದ ಬಾಲಕಿಯ ತಂದೆ ಮತ್ತು ಸಹೋದರನ ಹತ್ಯೆ; ಸಂತ್ರಸ್ತೆ ನಾಪತ್ತೆ

Update: 2024-03-17 15:30 IST

ಜಬಲ್ಪುರ್ (ಮಧ್ಯಪ್ರದೇಶ): 52 ವರ್ಷದ ರೈಲ್ವೆ ಉದ್ಯೋಗಿ ಹಾಗೂ ಅವರ 8 ವರ್ಷದ ಪುತ್ರನನ್ನು 19 ವರ್ಷದ ಅತ್ಯಾಚಾರ ಆರೋಪಿಯೊಬ್ಬ ಹತ್ಯೆಗೈದಿರುವ ಘಟನೆ ಮಧ್ಯಪ್ರದೇಶದ ಜಬಲ್ಪುರ್ ಜಿಲ್ಲೆಯಲ್ಲಿ ಶುಕ್ರವಾರ ನಡೆದಿದೆ. ಆರೋಪಿಯು ರೈಲ್ವೆ ಉದ್ಯೋಗಿಯ ಅಪ್ರಾಪ್ತ ಪುತ್ರಿಯ ಮೇಲೆ ಅತ್ಯಾಚಾರ ನಡೆಸಿದ ಆರೋಪ ಎದುರಿಸುತ್ತಿದ್ದು, ಅತ್ಯಾಚಾರ ಸಂತ್ರಸ್ತೆಯು ನಾಪತ್ತೆಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ತನ್ನ ತಂದೆ ಹಾಗೂ ಸಹೋದರನನ್ನು ಅತ್ಯಾಚಾರ ಆರೋಪಿ ಮುಕುಲ್ ಕುಮಾರ್ ಹತ್ಯೆಗೈದ ಮಾಹಿತಿಯನ್ನು ಧ್ವನಿ ಸಂದೇಶದ ಮೂಲಕ ಅತ್ಯಾಚಾರ ಸಂತ್ರಸ್ತೆಯು ತನ್ನ ತಾತನಿಗೆ ರವಾನಿಸಿದ ನಂತರ ಈ ಘಟನೆ ಬೆಳಕಿಗೆ ಬಂದಿದ್ದು, ಆರೋಪಿಯು ಅವರ ನೆರೆಮನೆಯವನೇ ಎಂದು ಹೇಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಾಥಮಿಕ ತನಿಖೆಗಳ ಪ್ರಕಾರ, ತಂದೆ ಹಾಗೂ ಪುತ್ರನನ್ನು ಹರಿತವಾದ ಆಯುಧದಿಂದ ಇರಿದು ಹತ್ಯೆಗೈದಿರುವುದು ಕಂಡು ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

“ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಆರೋಪಿ ಮುಕುಲ್ ಕುಮಾರ್ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ನಂತರ, ಆತನ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ ಗಳು ಹಾಗೂ ಪೋಕ್ಸೊ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಆತನನ್ನು ಬಂಧಿಸಿ ಕಾರಾಗೃಹಕ್ಕೆ ರವಾನಿಸಲಾಗಿತ್ತಾದರೂ, ಇತ್ತೀಚೆಗಷ್ಟೆ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ” ಎಂದು ಜಬಲ್ಪುರ್ ಪೊಲೀಸ್ ವರಿಷ್ಠಾಧಿಕಾರಿ ಆದಿತ್ಯ ಪ್ರತಾಪ್ ಸಿಂಗ್ ತಿಳಿಸಿದ್ದಾರೆ.

ರೈಲ್ವೆ ಉದ್ಯೋಗಿಯ ಮನೆಯ ಹೊರಗೆ ಅಳವಡಿಸಲಾಗಿರುವ ಸಿಸಿಟಿವಿ ವಿಡಿಯೊ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದ್ದು, ಈ ಸಂಬಂಧ ವಿಸ್ತೃತ ತನಿಖೆ ಜಾರಿಯಲ್ಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News