ಕರೂರು ಕಾಲ್ತುಳಿತ ಪ್ರಕರಣ | ಟಿವಿಕೆ ನಾಯಕರಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಮದ್ರಾಸ್ ಹೈಕೋರ್ಟ್
Photo credit: PTI
ಚೆನ್ನೈ: ತಮಿಳುನಾಡಿನ ಕರೂರ್ಜಿಲ್ಲೆಯ ವೇಲುಚಾಮಿಪುರಂನಲ್ಲಿ ನಟ-ರಾಜಕಾರಣಿ ವಿಜಯ್ ಅವರ ರ್‍ಯಾಲಿಯ ವೇಳೆ ಸಂಭವಿಸಿದ ಭೀಕರ ಕಾಲ್ತುಳಿತ ಪ್ರಕರಣದಲ್ಲಿ ತಮಿಳಗ ವೆಟ್ರಿ ಕಳಗಂ (ಟಿವಿಕೆ) ನಾಯಕರಿಗೆ ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ನೀಡಲು ನಿರಾಕರಿಸಿದೆ.
ಮಧುರೈ ಪೀಠದ ನ್ಯಾಯಮೂರ್ತಿ ಎಂ. ಜೋತಿರಾಮನ್ ಅವರು ಟಿವಿಕೆ ಪ್ರಧಾನ ಕಾರ್ಯದರ್ಶಿ ಎನ್. ಆನಂದ್ ಮತ್ತು ಜಂಟಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ಆರ್. ನಿರ್ಮಲ್ ಕುಮಾರ್ ಸಲ್ಲಿಸಿದ ಅರ್ಜಿಗಳನ್ನು ತಿರಸ್ಕರಿಸಿದರು. “ಘಟನೆಯ ಸ್ವರೂಪ ಹಾಗೂ ಅದರ ಗಂಭೀರತೆ ಪರಿಗಣಿಸಿದಾಗ ನಿರೀಕ್ಷಣಾ ಜಾಮೀನು ನೀಡುವುದು ಸೂಕ್ತವಲ್ಲ,” ಎಂದು ನ್ಯಾಯಮೂರ್ತಿಯವರು ತಮ್ಮ ಆದೇಶದಲ್ಲಿ ಹೇಳಿದ್ದಾರೆ.
ನ್ಯಾಯಾಲಯವು, ತನಿಖೆ ಇನ್ನೂ ಪ್ರಾರಂಭಿಕ ಹಂತದಲ್ಲಿದ್ದು, ಘಟನೆಯಲ್ಲಿ ಗಾಯಗೊಂಡವರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಉಲ್ಲೇಖಿಸಿದೆ. “ಪ್ರಕರಣದಲ್ಲಿ ಪ್ರಸ್ತುತಪಡಿಸಲಾದ ವಾಸ್ತವಾಂಶಗಳು ನ್ಯಾಯಾಲಯದ ಆತ್ಮಸಾಕ್ಷಿಯನ್ನು ಕದಡಿವೆ,” ಎಂದು ನ್ಯಾಯಮೂರ್ತಿಯವರು ಅಭಿಪ್ರಾಯಪಟ್ಟಿದ್ದಾರೆ.
ಸೆಪ್ಟೆಂಬರ್ 27ರಂದು ರಾತ್ರಿ 7.30ರ ಸುಮಾರಿಗೆ ವಿಜಯ್ ತಮ್ಮ ಪ್ರಚಾರ ವಾಹನದಿಂದ ಭಾಷಣ ಮಾಡುತ್ತಿದ್ದ ವೇಳೆ ಜನಸಾಗರದ ಮಧ್ಯೆ ಕಾಲ್ತುಳಿತ ಸಂಭವಿಸಿತು. ಜನದಟ್ಟಣೆಯಿಂದ ಹಲವರು ಮೂರ್ಛೆ ತಪ್ಪಿದರು. ಘಟನೆಯಾಗುತ್ತಿದ್ದಂತೆ ಆಂಬ್ಯುಲೆನ್ಸ್‌ಗಳು ಸ್ಥಳಕ್ಕೆ ಆಗಮಿಸಿದಾಗ ಕಾರ್ಯಕ್ರಮ ಎರಡು ಬಾರಿ ಅಡ್ಡಿಯಾಯಿತು. ಈ ದುರಂತದಲ್ಲಿ 18 ಮಹಿಳೆಯರು ಮತ್ತು 9 ಮಕ್ಕಳು ಸೇರಿದಂತೆ ಒಟ್ಟು 41 ಜನರು ಸಾವನ್ನಪ್ಪಿದರು.
ಪ್ರಾಸಿಕ್ಯೂಷನ್ ಪ್ರಕಾರ, ಟಿವಿಕೆ ಕರೂರ್ ಪಶ್ಚಿಮ ಜಿಲ್ಲಾ ಕಾರ್ಯದರ್ಶಿ ವಿ.ಪಿ. ಮಥಿಯಜಗನ್ ಅವರು ಮಧ್ಯಾಹ್ನ 3ರಿಂದ ರಾತ್ರಿ 10ರವರೆಗೆ ರ್‍ಯಾಲಿ ನಡೆಸಲು ಅನುಮತಿ ಪಡೆದಿದ್ದರು. 10,000 ಜನರು ಭಾಗವಹಿಸುವ ನಿರೀಕ್ಷೆಯಿದ್ದರೂ, 25,000ಕ್ಕೂ ಹೆಚ್ಚು ಜನರು ಆಗಮಿಸಿದ್ದರು. ವಿಜಯ್ ಸ್ಥಳಕ್ಕೆ ತಡವಾಗಿ ಆಗಮಿಸಿದ್ದರಿಂದ ಗೊಂದಲ ಮತ್ತು ಜನಸಾಗರ ಉಂಟಾಗಿ ದುರಂತ ಸಂಭವಿಸಿತು ಎಂದು ವರದಿಯಾಗಿದೆ.
ಆರೋಪಿಗಳು, ರಾಜಕೀಯ ಕಾರಣಗಳಿಂದ ತಮ್ಮನ್ನು ಗುರಿಯಾಗಿಸಲಾಗಿದೆ ಎಂದು ವಾದಿಸಿದರು. ಅವರ ವಕೀಲರು ರಾಜ್ಯ ಸರ್ಕಾರವೇ ಅಸಮರ್ಪಕ ಸ್ಥಳವನ್ನು ಸಭೆಗೆ ನೀಡಿದೆ ಮತ್ತು ಪೊಲೀಸರು ಸಮರ್ಪಕ ರಕ್ಷಣೆ ಒದಗಿಸಲು ವಿಫಲರಾದರೆಂದು ಆರೋಪಿಸಿದರು. “ಈ ಸ್ಥಳವನ್ನು ಏಕೆ ಆಯ್ಕೆ ಮಾಡಲಾಯಿತು ಎಂಬುದಕ್ಕೆ ಸರ್ಕಾರವೇ ಸ್ಪಷ್ಟನೆ ನೀಡಬೇಕು,” ಎಂದು ವಕೀಲರು ವಾದಿಸಿದರು.
ರಾಜ್ಯ ಸರ್ಕಾರದ ಪರ ವಾದಿಸಿದ ಅಟಾರ್ನಿ ಜನರಲ್, “ಸಂಘಟಕರು ತಮ್ಮ ಬೆಂಬಲಿಗರನ್ನು ನಿಯಂತ್ರಿಸಲು ವಿಫಲರಾಗಿದ್ದಾರೆ. ಪೊಲೀಸರು ಕರ್ತವ್ಯನಿಷ್ಠೆಯಿಂದ ಕಾರ್ಯನಿರ್ವಹಿಸಿದರೂ, ಸಂಘಟಕರು ನೀರು ಮತ್ತು ನೈರ್ಮಲ್ಯ ಸೌಲಭ್ಯ ಒದಗಿಸಲು ವಿಫಲರಾದರು. ನಿರ್ಜಲೀಕರಣದಿಂದ ಅನೇಕರು ಸಾವನ್ನಪ್ಪಿದರು, ಮತ್ತು ಘಟನೆಯ ನಂತರ ಸಂಘಟಕರು ಸ್ಥಳದಿಂದ ಪರಾರಿಯಾದರು,” ಎಂದು ಹೇಳಿದರು.
ಇದೀಗ, ಮದ್ರಾಸ್ ಹೈಕೋರ್ಟ್‌ನ ಪ್ರಧಾನ ಪೀಠವು ಕಾಲ್ತುಳಿತದ ತನಿಖೆಗಾಗಿ ವಿಶೇಷ ತನಿಖಾ ತಂಡ (SIT) ರಚಿಸಲು ಆದೇಶಿಸಿದೆ. ನ್ಯಾಯಮೂರ್ತಿ ಎನ್. ಸೆಂಥಿಲ್‌ಕುಮಾರ್ ಅವರು ಘಟನೆಯ ನಂತರ ಟಿವಿಕೆ ನಾಯಕರ “ನಿರ್ಲಕ್ಷ್ಯಪರ ಧೋರಣೆ”ಯನ್ನು ಟೀಕಿಸಿ, “ಪಕ್ಷವು ಜನರ ಸಾವಿನ ಬಗ್ಗೆ ಪಶ್ಚಾತ್ತಾಪವೂ ವ್ಯಕ್ತಪಡಿಸದಿರುವುದು ವಿಷಾದನೀಯ,” ಎಂದು ಕಟುವಾಗಿ ಪ್ರತಿಕ್ರಿಯಿಸಿದರು.