ದಲಿತರ ವಿರುದ್ಧದ ತಾರತಮ್ಯ ಮುಂದುವರಿದಿರುವುದು ನೋವಿನ ಸಂಗತಿಯಾಗಿದೆ : ಮದ್ರಾಸ್ ಹೈಕೋರ್ಟ್
ಮದ್ರಾಸ್ ಹೈಕೋರ್ಟ್ Photo | PTI
ಚೆನ್ನೈ: ಸ್ವಾತಂತ್ರ್ಯ ಬಂದು 80 ವರ್ಷಗಳ ಬಳಿಕವೂ ದಲಿತರ ವಿರುದ್ಧ ನಡೆಯುತ್ತಿರುವ ತಾರತಮ್ಯವನ್ನು ನೋಡುವುದು ನೋವಿನ ಸಂಗತಿಯಾಗಿದೆ ಎಂದು ಮದ್ರಾಸ್ ಹೈಕೋರ್ಟ್ ಗುರುವಾರ ಹೇಳಿದೆ.
ತಮಿಳುನಾಡಿನ ಪುದುಕ್ಕೊಟ್ಟೈ ಜಿಲ್ಲೆಯ ಮಾರಿಯಮ್ಮನ ದೇವಸ್ಥಾನಕ್ಕೆ ದಲಿತರಿಗೆ ಪ್ರವೇಶ ನಿರಾಕರಿಸಲಾಗಿದೆ ಎಂದು ಆರೋಪಿಸಿದ ಬಳಿಕ ಕಳೆದ ವಾರ ಹಿಂಸಾಚಾರ ಭುಗಿಲೆದ್ದಿತ್ತು.
ಆ ಬಳಿಕ ಪುದುಕ್ಕೊಟ್ಟೈ ಜಿಲ್ಲೆಯ ಮಾರಿಯಮ್ಮನ ದೇವಸ್ಥಾನ ಸೇರಿದಂತೆ ರಾಜ್ಯದ ದೇವಾಲಯಗಳಿಗೆ ದಲಿತರಿಗೆ ಪ್ರವೇಶ ಖಚಿತಪಡಿಸಿಕೊಳ್ಳಲು ತಮಿಳುನಾಡು ಸರಕಾರ ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು.
ಈ ಕುರಿತು ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಕೆಲವು ಹಳ್ಳಿಗಳಲ್ಲಿ ದಲಿತರು ಶರ್ಟ್ ಧರಿಸುವಂತಿಲ್ಲ, ರಸ್ತೆಯಲ್ಲಿ ನಡೆಯುವಂತಿಲ್ಲ, ಜಿಲ್ಲಾಧಿಕಾರಿ ಪರಿಸ್ಥಿತಿಯನ್ನು ಪರಿಶೀಲಿಸಲು ತನ್ನ ಗುರುತು ಮರೆಮಾಚಿ ಹೋಗಿದ್ದರೆ ಸತ್ಯ ಹೊರಬರುತ್ತಿತ್ತು. ಅವರು ಆ ಪ್ರದೇಶಕ್ಕೆ ಏಕೆ ಭೇಟಿ ನೀಡಲಿಲ್ಲ? ಎಂದು ಪ್ರಶ್ನಿಸಿದೆ. ಮೇ 4 ರಿಂದ ಮೇ 7ರವರೆಗಿನ ಪುದುಕೊಟ್ಟೈ ಗ್ರಾಮದ ಸಿಸಿಟಿವಿ ದೃಶ್ಯಾವಳಿಗಳನ್ನು ಸಲ್ಲಿಸುವಂತೆ ಸೂಚಿಸಿದೆ.